ವಿದ್ಯುತ್ ಖಾಸಗೀಕರಣ
ಕೂಡದು – ಕಂಬಳಿಗೆರೆ ರಾಜೇಂದ್ರ
ವೈಯಕ್ತಿಕವಾಗಿ ನನ್ನ
ವಿರೋಧವಿದೆ – ಶಾಸಕ ಆರಗ ಜ್ಞಾನೇಂದ್ರ
ವಿದ್ಯುತ್ ವಲಯವನ್ನು
ಖಾಸಗೀಕರಣಗೊಳಿಸಲು ಪ್ರಯತ್ನಿಸುತ್ತಿರುವ ಸರ್ಕಾರದ ವಿರುದ್ಧ ರೈತ ಸಂಘ ಹಾಗೂ ಇತರೆ ಸಂಘಟನೆಗಳು ತೀರ್ಥಹಳ್ಳಿಯಲ್ಲಿ
ಹಮ್ಮಿಕೊಂಡಿದ್ದ ಪ್ರತಿಭಟನೆ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯದ ಹಿರಿಯ ರೈತ ಮುಖಂಡ
ಕಂಬಳಿಗೆರೆ ರಾಜೇಂದ್ರ ನಮ್ಮ ಜನಪ್ರತಿನಿಧಿಗಳಿಗೆ ತೊಡುವ ಬಟ್ಟೆಯಿಂದ ಹಿಡಿದು ಊಟೋಪಚಾರದ ತನಕ ಸಾರ್ವಜನಿಕರ
ತೆರಿಗೆ ಹಣದಲ್ಲಿ ನೀಡಿ ವಿಧಾನಸೌಧಕ್ಕೆ ಕಳಿಸಿರುವುದು ಸಾರ್ವಜನಿಕ ಸ್ವತ್ತನ್ನು ಮಾರಾಟ ಮಾಡಿ ಅಂತ
ಎಂದಲ್ಲ. ಜನವಿರೋಧಿ ಕಾನೂನುಗಳು ರೂಪುಗೊಂಡಾಗ ನೀವೇನು ಮಾಡುತ್ತಿರುವಿರಿ ಎಂದು ಗುಡುಗಿದರು.
ಆರೋಗ್ಯ, ಶಿಕ್ಷಣ,
ಕುಡಿಯುವ ನೀರು, ರಸ್ತೆ ನಾಗರೀಕರ ಮೂಲಭೂತ ಅವಶ್ಯಕತೆಗಳು. ಇವುಗಳಲ್ಲಿ ಲಾಭ ಹುಡುಕುವುದು, ಲಾಭ ನಷ್ಟದ
ಲೆಕ್ಕಾಚಾರ ಹಾಕುವುದು ಅಮಾನವೀಯ. ಜನರ ಕಲ್ಯಾಣಕ್ಕಾಗಿಯೇ ದೂರದೃಷ್ಟಿಯಿಂದ ಸಾರ್ವಜನಿಕ ಸಂಸ್ಥೆಗಳನ್ನು
ಸ್ಥಾಪಿಸಿದಾಗ ಅವುಗಳನ್ನು ಮುನ್ನಡೆಸಲು ಆಗುವುದಿಲ್ಲ ಎನ್ನುವುದು ಆಡಳಿತ ಮಾಡುವವರ ಆತ್ಮ ವಂಚನೆ ಮತ್ತು
ಜನವಿರೋಧಿ ಕ್ರಮ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ನಿತ್ಯ
450 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ತಾಲ್ಲೂಕಿನಲ್ಲಿ 40 ಸಾವಿರ ವಿದ್ಯುತ್
ಗ್ರಾಹಕರು ಇದ್ದಾರೆ. ಇಂದಿಗೂ ಎಲ್ಲಾ ರೈತರಿಗೆ ಇದರ ಅರಿವು ಬಂದಿಲ್ಲ. ಉಚಿತ ವಿದ್ಯುತ್ ಪೂರೈಸುವ
ಐಪಿ ಸೆಟ್ ನಿಲ್ಲಿಸುವ ತನಕ ಹೋರಾಟವನ್ನು ಕಡೆಗಣಿಸುತ್ತಾರೆ. ಖಾಸಗೀಕರಣ ಆಗುವ ಮುನ್ನ ಎಚ್ಚರಗೊಳ್ಳಬೇಕು.
ಶಾಸಕ ಆರಗ ಜ್ಞಾನೇಂದ್ರ
ಮಾತನಾಡಿ, ವೈಯಕ್ತಿಕವಾಗಿ ಇದನ್ನು ನಾನು ಸ್ಪಷ್ಟವಾಗಿ ವಿರೋಧಿಸುತ್ತೇನೆ ಮತ್ತು ಸದನದಲ್ಲಿ ಚರ್ಚೆ
ಮಾಡುತ್ತೇನೆ. ಖಾಸಗಿ ಕಂಪನಿಗೆ ಮಾರಾಟ ಮಾಡುವುದರಿಂದ ಲಾಭ ನಷ್ಟ ಎರಡೂ ಇವೆ. ಟಾಟಾ ಕಂಪನಿಗೆ ವಹಿಸಿಕೊಟ್ಟ
ಕಡೆಗಳಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಬಗ್ಗೆ ಮಾಹಿತಿ ಇದ್ದು ದಾಖಲೆ ತರಿಸಿಕೊಳ್ಳುತ್ತಿದ್ದೇನೆ.
ಜನರ ಆಕ್ರೋಶದ ವಿರುದ್ಧ ಯಾವುದೇ ನಿರ್ಣಯ ತೆಗೆದುಕೊಳ್ಳಬಾರದು. ಎಂದು ಹೇಳಿದರು.
ತಾಲ್ಲೂಕು ರೈತ
ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ಮುಖಂಡರಾದ ಹೊರಬೈಲು ರಾಮಕೃಷ್ಣ, ಎಸ್.ಎಸ್. ನಾಗರಾಜ್, ಸೌಳಿ
ಅಭಿಷೇಕ್, ಕೊರೋಡಿ ಕೃಷ್ಣಪ್ಪ, ಹೊಸಬೆಟ್ಟು ಪೂರ್ಣೇಶ್, ವಿಷ್ಣುಮೂರ್ತಿ, ಕೆ.ವೀರೇಂದ್ರ ನಾಯಕ್
ಮತ್ತಿತರಿದ್ದರು.
