ಸರ್ಕಾರಿ ವ್ಯವಸ್ಥೆ ಕಟ್ಟುವುದು ಸುಲಭ, ಕೆಡುವುದು ಸಲೀಸು
ವಿದ್ಯುತ್ ಇಲಾಖೆ ಹಂಗಾಮಿ ನೌಕರರು ಬೀದಿಗೆ ಬೀಳುವ ಆತಂಕ
ವಿದ್ಯುತ್ ವಿತರಣಾ ಪರವಾನಿಗೆ ಖಾಸಗಿಯವರಿಗೆ ನೀಡುವುದು ಮುಂದೆ ಜನಸಾಮಾನ್ಯರು ಮತ್ತು ರೈತರ ಪಾಲಿಗೆ ಮರಣ ಶಾಸನವಾಗಲಿದೆ. ಇದರಿಂದ ಭವಿಷ್ಯದಲ್ಲಿ ಗೃಹ ಜ್ಯೋತಿ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಗಂಗಾ ಕಲ್ಯಾಣ ದಂತ ಜನಪರ ಯೋಜನೆಗಳು ನಿಂತು ಹೋಗಿ ಜನತೆ ಸಂಕಟಕ್ಕೆ ಸಿಲುಕಲಿದ್ದಾರೆ ಎಂದು ರೈತ ಹೋರಾಟಗಾರ ಕಂಬಳಿಗೆರೆ ರಾಜೇಂದ್ರ ಎಚ್ಚರಿಸಿದ್ದಾರೆ.
ತೀರ್ಥಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖಾಸಗಿಕರಣದ ಉದ್ದೇಶವೇ ಲಾಭಗಳಿಕೆ. ಅಲ್ಲಿ ಸಾಮಾಜಿಕ ಹೊಣೆಗಾರಿಕೆ ಮತ್ತು ಸಮಗ್ರ ದೃಷ್ಟಿಕೋನ ಇರುವುದಿಲ್ಲ. 90 ದಶಕದಲ್ಲಿ ಡಬ್ಲ್ಯೂಟಿಒ ಒಪ್ಪಂದ ಆರಂಭಗೊಂಡಾಗ ಮುಂದೆ ಸಾರ್ವಜನಿಕ ಸಂಸ್ಥೆಗಳು ಉಳಿಯುವುದಿಲ್ಲ ಎಂದು ರೈತಸಂಘ ಎಚ್ಚರಿಕೆ ನೀಡಿತ್ತು. ಈಗ ಒಂದೊಂದೆ ಸಾರ್ವಜನಿಕ ಸಂಸ್ಥೆಗಳನ್ನು ನಷ್ಟದ ಹೆಸರಲ್ಲಿ ಮಾರಾಟ ಮಾಡಲಾಗುತ್ತಿದೆ. ಇಷ್ಟಾದರೂ ಯುವ ಜನತೆ ಎಚ್ಚರಗೊಳ್ಳದಿರುವುದು ದುರಂತದ ಸಂಗತಿ ಎಂದು ವಿಷಾದಿಸಿದರು.
ಇನ್ನೊರ್ವ ರೈತ ಹೋರಾಟಗಾರ ಕೋಡ್ಲು ವೆಂಕಟೇಶ್ ಮಾತನಾಡಿ, ನೀರು, ಸಾರಿಗೆ, ವಿದ್ಯುತ್. ಅರೋಗ್ಯ ಎಲ್ಲ ಜನರ ಮೂಲಭೂತ ಅವಶ್ಯಕತೆಗಳು. ಇದನ್ನು ನೀಡುವುದು ಎಲ್ಲ ನಾಗರೀಕ ಸರ್ಕಾರಗಳ ಜವಾಬ್ದಾರಿ. ಇದರಲ್ಲಿ ಲಾಭ ನಷ್ಟ ಲೆಕ್ಕ ಹಾಕುವುದು ತಪ್ಪು.ಈ ಕೂಡಲೇ ಸರ್ಕಾರ ಈ ನಿರ್ಧಾರ ಕೈ ಬಿಡಬೇಕು ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಗುತ್ತಿಗೆದಾರರ ರಾಜ್ಯ ಸಂಘದ ಪೂರ್ಣೇಶ್ ಮಾತನಾಡಿ, ಜನತೆಯ ತೆರಿಗೆ ಹಣದಿಂದ ಹಿಂದಿನ ಸರ್ಕಾರಗಳು ಕಷ್ಟಪಟ್ಟು ನಿರ್ಮಾಣ ಮಾಡಿದ ಮೂಲಭೂತ ಸೌಕರ್ಯಗಳನ್ನು ಉಪಯೋಗ ಮಾಡಿಕೊಂಡು ಖಾಸಗಿಯವರು ಈ ವ್ಯವಸ್ಥೆಯಲ್ಲಿ ಲಾಭ ಮಾಡಿಕೊಳ್ಳುತ್ತಾರೆಯೇ ಹೊರತು ಇಲ್ಲಿ ಉತ್ತರದಾಯಿತ್ವ ಇರುವುದಿಲ್ಲ. ಇದಲ್ಲದೆ ಇದು ಖಾಸಗಿಕರಣದ ವ್ಯಾಪ್ತಿಯ ಒಳಗಡೆ ಇರುವ ರಾಜ್ಯದ ವಿದ್ಯುತ್ ಇಲಾಖೆಯ ಹಂಗಾಮಿ ನೌಕರರು ಬೀದಿಗೆ ಬೀಳಲಿದ್ದಾರೆ ಎಂದರು.
ಸಭೆಯಲ್ಲಿ ತೀರ್ಥಹಳ್ಳಿ ಪಂಪ್ ಸೆಟ್ ಬಳಕೆದಾರರ ಸಂಘದ ಅಧ್ಯಕ್ಷ ವೀರೇಂದ್ರ ನಾಯಕ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ, ಯುವ ರೈತ ಮುಖಂಡ ಅಭಿಲಾಷ್ ಸೌಳಿ, ನವೀನ್ ಹೆಗ್ಡೆ, ಜಾರ್ಜ್ ಮುಂತಾದವರು ಉಪಸ್ಥಿತರಿದ್ದರು.
ಜೂನ್ 22 ರ ಸೋಮವಾರ ತೀರ್ಥಹಳ್ಳಿಯಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಖಾಸಗಿಕರಣ ತಡೆಗಟ್ಟಲು ಜೂನ್ 23 ರ ಸಂಜೆ 5 ಗಂಟೆಯ ಒಳಗೆ ಕಾರ್ಯದರ್ಶಿ. ಕೆ.ಇ.ಆರ್.ಸಿ. ಸಂಖ್ಯೆ 16 ಸಿ -1, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ. ವಸಂತ ನಗರ ಬೆಂಗಳೂರು ಇಲ್ಲಿಗೆ ಆಕ್ಷೇಪಣೆ ಪತ್ರವನ್ನು ಸಲ್ಲಿಸಲು ಕೋರಲಾಗಿದೆ.