ಮಾರ್ಜಾಲದ ಕಾಟಕ್ಕೆ ಪೆಟ್ಟೋ.. ಪೆಟ್ಟೋ…
ಗಣಪಾತ್ರಿಯ ಬೆನ್ನುಹುರಿ
ಮುರಿದ ಗ್ರಾಮಸ್ಥರು
ಪೆಟ್ಟಿನ ಕುಯ್ಲು
ಆಚರಣೆ ಬಳಿಕ ಆಸ್ಪತ್ರೆಗೆ ದಾಖಲು
ತೀರ್ಥಹಳ್ಳಿ ತಾಲ್ಲೂಕಿನ
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಭರ್ಜರಿ ಪೆಟ್ಟಿನ ಕೊಯ್ಲು ನಡೆದಿದೆ. ಗಣಪಾತ್ರಿಯ
ಮನೆಗೆ ಬೆಕ್ಕು ನುಗ್ಗಿದ ಅವಾಂತರ ಇದೀಗ ಬೆನ್ನುಹುರಿ ಮುರಿತದೊಂದಿಗೆ ಇನ್ನಷ್ಟು ರೋಚಕ ತಿರುವು ಪಡೆದುಕೊಂಡಿದೆ.
ಎರಡು ಮೂರು ದಿನಗಳ
ಹಿಂದೆ ಮೇಗವರಳ್ಳಿಯ ಗಣಪಾತ್ರಿಯ ಮನೆಗೆ ಪಕ್ಕದ ಮನೆಯ ಬೆಕ್ಕೊಂದು ನುಗ್ಗಿದೆ. ಬೆಕ್ಕು ಮನೆಯ ಒಳಗೆ
ನುಗ್ಗುತ್ತಿದ್ದಂತೆ ಗಣಪಾತ್ರಿಯ ಗಣ ಜಾಸ್ತಿಯಾಗಿದೆ. ಪಕ್ಕದಮನೆಯವ ಜೊತೆಗೆ ಕಾಲುಕಿತ್ತು ಜಗಳಕ್ಕೆ
ಧಾವಿಸಿದ್ದಾರೆ. ನಿಮ್ಮ ಮನೆಯ ಬೆಕ್ಕು ನಮ್ಮ ಮನೆಗೆ ಬರಕೂಡದು ಎಂದು ರಂಪಾಟ ಆರಂಭಿಸಿದ್ದಾರೆ. ಅಷ್ಟಕ್ಕೆ
ಮುಕ್ತಾಯಗೊಳ್ಳಬೇಕಿದ್ದ ಪ್ರಕರಣ ಬೆಕ್ಕಿನಿಂದಾಗಿ ಬೀದಿ ರಂಪಾಟಕ್ಕೆ ಸಿಲುಕಿಕೊಂಡಿದೆ.
ಮಾರನೇಯ ದಿನ ಬೆಕ್ಕು
ಮತ್ತೆ ಅದೇ ಗಣಪಾತ್ರಿಯ ಮನೆಗೆ ನುಗ್ಗಿದೆ. ರೊಚ್ಚಿಗೆದ್ದ ಪಾತ್ರಿ ಬೆಕ್ಕಿಗೆ ಏರ್‌ಗನ್ ಮೂಲಕ ಶೂಟ್
ಮಾಡಿದ್ದಾರೆ. ಇದಾಗುತ್ತಿದ್ದಂತೆ ಪಕ್ಕದ ಮನೆಯವರೊಂದಿಗಿನ ಜಗಳಕ್ಕೆ ತೀವ್ರ ಟ್ವಿಸ್ಟ್ ಸಿಕ್ಕಿದಂತಾಗಿದೆ.
ಜಗಳ ಇನ್ನಷ್ಟು ಬಿಗಡಾಯಿಸಿದ್ದು ಆಗುಂಬೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಎರಡು ಪಾರ್ಟಿಯಿಂದ ಬೆಕ್ಕಿನ
ರಂಪಾಟದ ಕೇಸ್ ದಾಖಲಿಸಿಕೊಂಡ ಪೊಲೀಸರು ಮಂಗಳವಾರ ಮಹಜರು ನಡೆಸಲು ಪಾತ್ರಿಯ ಮನೆಯ ಸಮೀಪಕ್ಕೆ ಬಂದಿದ್ದಾರೆ.
ಅಷ್ಟರಲ್ಲಾಗಲೇ ಇಂತಹ ಅನೇಕ ತಾಪತ್ರಯಗಳಿಂದ ಕಂಗೆಟ್ಟಿದ್ದ ಗ್ರಾಮಸ್ಥರು ಪಾತ್ರಿಯ ವಿರುದ್ಧ ತಿರುಗಿ
ಬೀಳಲು ಮುಂದಾಗಿದ್ದಾರೆ.
ಪಾತ್ರಿಯ ಮಗನ ಹರಕು
ನಾಲಗೆ ಉದ್ದಗೊಂಡು ಗ್ರಾಮಸ್ಥರಿಗೆ ಪೊಲೀಸರನ್ನು ಕರೆಸಿದರೆ ಏನೇನು ಆಗುವುದಿಲ್ಲ. ನಮ್ಮ ಪ್ರಭಾವ ಜಾಸ್ತಿಯೋ
ನಿಮ್ಮದೋ ನೋಡಿಯೇ ಬಿಡುತ್ತೇನೆ ಎಂದಿದ್ದಾನೆ. ಇದಾದ ಬಳಿಕ ಗ್ರಾಮದಲ್ಲಿ ನಡೆದದ್ದೇ ಬೇರೆ. ಸಿಕ್ಕ
ಸಿಕ್ಕವರು ಪಾತ್ರಿಯ ಬೆನ್ನುಹುರಿ ಮುರಿದಿದ್ದಾರೆ. ಗ್ರಾಮಸ್ಥರ ಪೆಟ್ಟಿನಿಂದ ಲಟಲಟನೆ ಮುರಿದ ಮೂಳೆಗಳನ್ನು
ಎತ್ತಿಕಟ್ಟಿಕೊಳ್ಳುವ ಐಡಿಯಾ ತಿಳಿಯದಾದ ಪಾತ್ರಿ ದಿಕ್ಕೆಟ್ಟು ಕಂಗಾಲಾಗಿ ಕುಳಿತಿದ್ದ. ಈ ಗಲಾಟೆಯಲ್ಲಿ
ಯಾರ್ಯಾರ ಮನೆಯ ಸಿಟ್ಟು ಯಾರ್ಯಾರಿಗೆ ಇತ್ತೋ ಅವರೆಲ್ಲರು ಒಂದೊಂದು ಗೂಸ ಕೊಟ್ಟು ಜಾಗದಿಂದ ಕಳಚಿಕೊಂಡಿದ್ದಾರೆ.
ಅಷ್ಟರಲ್ಲಾಗಲೇ ಪೊಲೀಸರು
ಧಾವಿಸಿದ್ದು ಪೆಟ್ಟು ತಿಂದವರು, ಪೆಟ್ಟು ಹೊಡೆದವರನ್ನು ಗುರುತಿಸುವ ಕಷ್ಟಕ್ಕೆ ಸಿಲುಕಿಕೊಂಡಿದ್ದರು.
ಎಲ್ಲವು ನಿಯಂತ್ರಣಕ್ಕೆ ಬಂದ ನಂತರ ಬೆನ್ನುಹುರಿ ಮುರಿದವರು, ಮುರಿಸಿಕೊಂಡವರು ಜೆಸಿ ಆಸ್ಪತ್ರೆಗೆ
ದಾಖಲಾಗುವ ಮೂಲಕ ಎರಡೂ ಪಾರ್ಟಿಯವರು ಚಿಕಿತ್ಸೆಗೆ ಒಳಗಾಗುವಂತಾಗಿದೆ. ಬೆಕ್ಕಿಗೆ ಆಟ ಪಾತ್ರಿಗೆ ಪ್ರಾಣ
ಸಂಕಟವಾಗಿ ಮುಳುವಾಗಿದೆ.
