ಹಳಗ ಗ್ರಾಮದಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದ ಹೊನ್ನೆಮರದ ನಾಟ ವಶ

ಪ್ರಕರಣ ಮುಚ್ಚಲು ರಾಜಕೀಯ ಮುಖಂಡರ ಕಸರತ್ತು
ಮಂಡಗದ್ದೆಯ ಕಾಡಿನ ಮನೆಯಲ್ಲಿ ನಡೆದಿದ್ದಾದರೂ ಏನು? ಬೆಚ್ಚಿಬಿದ್ದ ಅರಣ್ಯ ಅಧಿಕಾರಿಗಳು - ಅರಣ್ಯ ರಕ್ಷಕ ದಂಧೆಯ ಸೂತ್ರದಾರನೇ..?

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ವಲಯಾರಣ್ಯ ವ್ಯಾಪ್ತಿಯ ಹಳಗ ಗ್ರಾಮದಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದ 150 ಅಡಿಗೂ ಹೆಚ್ಚು ಹೊನ್ನೆಮರದ ನಾಟದ ಸಾಮಾಗ್ರಿಗಳನ್ನು ಅರಣ್ಯ ಇಲಾಖೆ ಸೋಮವಾರ ವಶಪಡಿಸಿಕೊಂಡಿದೆ. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ರಾಜಕಾರಣಿಗಳು ಮಧ್ಯೆ ಪ್ರವೇಶಿಸಿದ್ದು ಶ್ರೀಮಂತ ಕುಟುಂಬದ ಬೆನ್ನಿಗೆ ನಿಂತ ಆರೋಪಗಳು ಕೇಳಿ ಬರುತ್ತಿದೆ.

ಡಿಆರ್ ಎಫ್ಓ ಚಾರ್ಜ್ ನಲ್ಲಿದ್ದ ಅರಣ್ಯ ರಕ್ಷಕ ಸಿಬ್ಬಂದಿ 30,000 ಸಾವಿರ ಹಣ ಪಡೆದು ಶ್ರೀಮಂತ ವ್ಯಕ್ತಿಗಳಿಗೆ ಸಹಕಾರ ನೀಡುತ್ತಿದ್ದ. ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.

ದೇಶದಲ್ಲಿ ಅರಣ್ಯ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ಇಂತಹ ಕಳ್ಳನಾಟ ಸಾಗಾಣೆ ದಂಧೆಗೆ ಸಾಥ್ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ.

ಅರಣ್ಯ ರಕ್ಷಕ ದಂಧೆಯ ಸೂತ್ರದಾರನೇ..?
 5 ವರ್ಷಗಳ ಹಿಂದೆ ಮಂಡಗದ್ದೆ ವ್ಯಾಪ್ತಿಯಲ್ಲಿ ಸುಮಾರು 12 ವರ್ಷಗಳ ಕಾಲ ಸುದೀರ್ಘ ಕರ್ತವ್ಯ ನಿರ್ವಹಿಸಿದ್ದ ಅರಣ್ಯ ರಕ್ಷಕ ಪುನಃ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದಾನೆ. ಆತನನ್ನು ಮೇಲಾಧಿಕಾರಿಗಳು ಸಸ್ಪಂಡ್ ಮಾಡಬೇಕು. ಬೇಲಿಯೇ ಎದ್ದು ಹೊಲ ಮೈಯ್ದರೆ ಅರಣ್ಯ ಕಾಪಾಡುವುದಾದರು ಹೇಗೆ. ಇಲ್ಲದಿದ್ದರೆ ಇಲಾಖೆಯ ಮೇಲೆಯೇ ಸಾರ್ವಜನಿಕರಿಂದ ಅಪನಂಬಿಕೆ ಆರಂಭವಾಗುವ ಸಾಧ್ಯತೆ ಇದೆ. ಪ್ರಕರಣವನ್ನು ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಮಲೆನಾಡಿನಲ್ಲಿ ಅಕ್ರಮ ಕಳ್ಳನಾಟ ದಾಸ್ತಾನು  ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಬಹುತೇಕ ಪ್ರಕರಣಗಳಲ್ಲಿ ಇಂತಹ ಶ್ರೀಮಂತ ವರ್ಗವೇ ಬೆನ್ನಿಗೆ ನಿಂತಿವೆ. ಇಲ್ಲಿ ತಮ್ಮ ಮನೆಗೆ ಯಾರು ಬರಲಾರರು. ಜೊತೆಗೆ ರಾಜಕೀಯ ಪ್ರಭಾವ ಬಳಸಿ ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇನೆಂಬ ಸೊಕ್ಕು, ದುಡ್ಡಿನ ಮದ ಅಕ್ರಮ ವ್ಯವಹಾರಕ್ಕೆ ದಾರಿಯಾಗುತ್ತಿದೆ. ಮಲೆನಾಡಿನ ಕಾಡಿನಲ್ಲಿರುವ ದುಬಾರಿ ಬೆಲೆಯ ಸಾಗುವಾನಿ, ಬೀಟೆ ಸೇರಿದಂತೆ ಅನೇಕ ಮರಗಳು ಬಲಿಯಾಗುತ್ತಿವೆ. ದೊಡ್ಡ ಕಾಂಪೌಂಡ್ ಒಳಗೆ ತಾವು ಏನು ಮಾಡಿದರು ಸರಿಯೇ ಹೊರಗಡೆ ಪ್ರಪಂಚಕ್ಕೆ ಗೊತ್ತಾಗುವುದಿಲ್ಲ. ಎಲ್ಲರನ್ನು ಹಣದಿಂದ ಕೊಂಡು ಕೊಳ್ಳುತ್ತೇವೆಂಬ ಧಿಮಾಕಿನಿಂದ ಕಳ್ಳ ವ್ಯವಹಾರ ಸಲೀಸಾಗಿ ನಡೆಯುತ್ತಿದೆ.

ಕೀಗಡಿ, ಹಳಗ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರ ಪತ್ತೆಹಚ್ಚಲು ಪ್ರಾಮಾಣಿಕ ಅಧಿಕಾರಿಯೊಬ್ಬರು ಪತ್ತೆಹಚ್ಚಲು ಮುಂದಾಗಿದ್ದಾರೆ. ಇಲ್ಲದಿದ್ದರೆ ಅರಣ್ಯ ಜಾಗದಲ್ಲಿ ಮರಗಳ ಬದಲು ಕೇವಲ ಭೂಮಿ ಮಾತ್ರ ಉಳಿಯಲಿದೆ. ಎಷ್ಟು ದಿನಗಳ ಕಾಲ ನಾಟ ಕುಯ್ತಿಲೆ ಮಾಡಲಾಗಿದೆ. ಕಾನೂನು ಮೀರಿ ಕುಯ್ತಕ್ಕೆ ಹೇಗೆ ಅವಕಾಶ ನೀಡಲಾಗಿದೆ. ಎಷ್ಟು ಮಂದಿ ಭಾಗಿಯಾಗಿದ್ದಾರೆ. ಕಳ್ಳನಾಟ ದಂಧೆಯ ರುವಾರಿಗಳನ್ನು ಬಯಲಿಗೆ ಎಳೆಯಲು ಅರಣ್ಯ ಇಲಾಖೆ ಮುಂದಾಗಬೇಕು. ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಬೇಕು. ದಂಧೆಗೆ ಸಹಕರಿಸಿದ ಸಿಬ್ಬಂದಿಯನ್ನು ವಜಾಗೊಳಿಸಬೇಕೆಂಬ ಆಗ್ರಹ ಸಾರ್ವಜನಿಕರದ್ದಾಗಿದೆ. 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post