ಜನರ ಸಮಸ್ಯೆಗೆ ಪರಿಹಾರ
ಬೇಕು.. ಪಾದಯಾತ್ರೆ ಅಲ್ಲ
ಕಿಮ್ಮನೆ ಮಕ್ಕಳ
ಹೋರಾಟ ರಾಜಕಾರಣಕ್ಕೆ ಬಳಸುತ್ತಿದ್ದಾರೆ - ಹೆದ್ದೂರು ನವೀನ್
ಮಾಜಿ ಶಾಸಕ ಕಿಮ್ಮನೆ
ರತ್ನಾಕರ್ ಘೋಷಿಸಿರುವ ಪಾದಯಾತ್ರೆ ಹಾಗೂ ಕಡೆಮನೆ ಗ್ರಾಮಕ್ಕೆ ಭೇಟಿ ನೀಡಿ ಮಾಜಿ ಸಚಿವರು, ಶಾಸಕರು
ಆಗಿರುವ ಆರಗ ಜ್ಞಾನೇಂದ್ರರನ್ನು ಟೀಕಿಸಿರುವ ಕುರಿತು ಬಿಜೆಪಿ ಮಂಡಲ ಅಧ್ಯಕ್ಷ ಹೆದ್ದೂರು ನವೀನ್ ತೀವ್ರ
ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಕಡೆಮನೆ ಗ್ರಾಮಕ್ಕೆ
ಕಿಮ್ಮನೆ ರತ್ನಾಕರ್ ಅವರು ಭೇಟಿ ನೀಡಿರುವುದು ಅಲ್ಲಿನ ಜನರ ಕ್ಷಮೆಯಾಚಿಸಲು ಇರಬಹುದು ಎಂದು ನಾವು
ಭಾವಿಸಿದ್ದೆವು. ಏಕೆಂದರೆ ಹತ್ತು ವರ್ಷಗಳ ಕಾಲ ಶಾಸಕ ಹಾಗೂ ಸಚಿವರಾಗಿದ್ದರೂ ಆ ಗ್ರಾಮದ ಅಭಿವೃದ್ಧಿಗೆ
ಒಂದು ನಯಾಪೈಸೆಯನ್ನೂ ನೀಡದೆ, ಈಗ ಜನರ ಭಾವನೆಗಳನ್ನು ಕೆರಳಿಸುವ ರಾಜಕೀಯ ನಾಟಕವಾಡಲು ತೆರಳಿರುವುದು
ದುರದೃಷ್ಟಕರ. ತಮ್ಮ ಆಡಳಿತದ ವೈಫಲ್ಯದ ಬಗ್ಗೆ ಯಾವುದೇ ಆತ್ಮಾವಲೋಕನವಿಲ್ಲದೆ ಶಾಸಕ ಆರಗ ಜ್ಞಾನೇಂದ್ರರ
ವಿರುದ್ಧ ಟೀಕೆ. ಮಾಡಿರುವುದು ಅವರ ಹತಾಶ ಮನೋಭಾವವನ್ನು ತೋರಿಸುತ್ತಿದೆ ಎಂದಿದ್ದಾರೆ.
"ಪುಟ್ಟ ಮಕ್ಕಳು
ತಮ್ಮೂರಿನ ಸಮಸ್ಯೆಯ ಕುರಿತು ನೈಜ ಉದ್ದೇಶದಿಂದ ಪ್ರತಿಭಟಿಸಿದ್ದರು. ಅದನ್ನು ಹೈಜಾಕ್ ಮಾಡಲು ಮಾಜಿಯವರು
ಆತುರವಾಗಿ ಪಾದಯಾತ್ರೆ ಘೋಷಿಸಿದ್ದಾರೆ. ಕಿಮ್ಮನೆ ಮಕ್ಕಳ ಹೋರಾಟವನ್ನು ಮುಂದಿಟ್ಟುಕೊಂಡು ರಾಜಕಾರಣ
ಮಾಡುತ್ತಿರುವುದು ಅತ್ಯಂತ ಖಂಡನೀಯ. ಶಾಸಕ ಆರಗ ಜ್ಞಾನೇಂದ್ರ ಅವರು ಕಡೆಮನೆಯ ಅಭಿವೃದ್ಧಿಯ ವಿಚಾರದಲ್ಲಿ
ಎಂದಿಗೂ ರಾಜಕೀಯ ಮಾಡಿಲ್ಲ. ಜಿಗಳಗೋಡು ಕಡೆಯಿಂದ ಸಂಪರ್ಕಿಸುವ ರಸ್ತೆಗೆ ₹50
ಲಕ್ಷ ಅನುದಾನ ಮಂಜೂರು ಮಾಡಿಸಿದ್ದಾರೆ. ಬಾಳೆಕೊಪ್ಪ ಕಡೆಯಿಂದ ನಿರ್ಮಾಣವಾಗಿರುವ ಸೇತುವೆ ಹಾಗೂ ತಡೆಗೋಡೆ
ಕಾಮಗಾರಿಗೆ ಸುಮಾರು 1 ಕೋಟಿ ಅನುದಾನ ತಂದಿದ್ದಾರೆ. ಆದರೆ ಜ್ಞಾನೇಂದ್ರ ಅವರು ಅಧಿಕಾರ ಕಳೆದುಕೊಂಡಾಗ
ಆ ಸೇತುವೆಯನ್ನ, ಕಿಮ್ಮನೆ ಶಿಷ್ಯರಿಂದಲೇ ಮಾಡಿಸಿ ಆ ಸೇತುವೆ ಕಾಮಗಾರಿ ಹಳ್ಳ ಹಿಡಿಸಿದ್ದಾರೆ. ಆ ಸೇತುವೆಗೆ
ಮಾಡಿದ ಕಾಂಕ್ರೀಟ್ ಹಾಗೂ ತಡೆಗೋಡೆ ಕೆಲವೇ ದಿನಗಳಲ್ಲಿ ಕುಸಿದು ಹೋಗಿದ್ದವು. ಇಷ್ಟಾದರೂ ರಾಜಕೀಯ ಲಾಭಕ್ಕಾಗಿ
ಕಡೆಮನೆಗೆ ತೆರಳಿ ಜನರ ಭಾವನೆಗಳೊಂದಿಗೆ ಆಟವಾಡುತ್ತಿರುವುದು ಅಮಾನವೀಯ ಹಾಗೂ ಅಕ್ಷಮ್ಯ" ಎಂದು
ಅವರು ಆರೋಪಿಸಿದ್ದಾರೆ.
ಇದಲ್ಲದೆ,
"ಕಡೆಮನೆ ಜನರ ಸಂಕಷ್ಟಕ್ಕೆ ಹಿಂದೆಂದೂ ಸ್ಪಂದಿಸದವರು, ಇಂದು ಅವರ ಪರ ಕಾಳಜಿ ತೋರಿಸುವಂತೆ ನಟಿಸುತ್ತಿರುವುದು
ಕೇವಲ ರಾಜಕೀಯ ಗಿಮಿಕ್. ಮಕ್ಕಳು ಪ್ರತಿಭಟನೆ ನಡೆಸುವ ಮೂರು ತಿಂಗಳ ಹಿಂದೆಯೇ ಶಾಸಕ ಆರಗ ಜ್ಞಾನೇಂದ್ರ
ಅವರ ಪ್ರಯತ್ನದಿಂದ ಕಡೆಮನೆ ರಸ್ತೆಗೆ ₹20 ಲಕ್ಷ ಅನುದಾನ ಮಂಜೂರಾಗಿತ್ತು. ಆ ಮಂಜೂರಾತಿಯ
ಪತ್ರವನ್ನು ಪ್ರತಿಭಟನಾನಿರತ ಮಕ್ಕಳಿಗೆ ಸ್ಥಳದಲ್ಲಿಯೇ ಶಾಸಕರು ನೀಡಿದ್ದಾರೆ. ಮಳೆಯ ಕಾರಣದಿಂದ ಕಾಮಗಾರಿ
ಆರಂಭವಾಗಲು ವಿಳಂಬವಾಗಿದೆ'' ಎಂದು ತಿಳಿಸಿದ್ದಾರೆ.
"ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಬಹುತೇಕ ಶೂನ್ಯ ಕೊಡುಗೆ ನೀಡಿರುವ ಕಿಮ್ಮನೆ ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ಎಲ್ಲೆಡೆ ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ. ಸಮಾಜಕ್ಕೆ ತತ್ವ - ಬೋಧನೆ ಮಾಡುವವರು ಮೊದಲು ತಮ್ಮ ರಾಜಕೀಯ ನಡೆ -ನುಡಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ರಾಜಕೀಯ ಅವರಿಗೆ ಶೋಭೆ ತರುವುದಿಲ್ಲ. ಇಂದು ರಾಜ್ಯದೆಲ್ಲೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಪಕ್ಷದ ವಿರುದ್ಧವಲ್ಲ, ತಮ್ಮದೇ ಸರ್ಕಾರದ ವೈಫಲ್ಯದ ವಿರುದ್ಧ ಕಿಮ್ಮನೆ ಪಾದಯಾತ್ರೆ ನಡೆಸಿದರೆ ಜನರಿಗೆ ಹೆಚ್ಚು ಉಪಯುಕ್ತವಾಗುತ್ತದೆ" ಎಂದು ಟೀಕಿಸಿದ್ದಾರೆ.
