ದಕ್ಷ – ಸಮರ್ಥ ಅಧಿಕಾರಿ ಬಿ.ಎಸ್. ಶ್ರೀಧರ್‌ಗೆ ಮಹತ್ವದ ಹುದ್ದೆಯ ನಿರೀಕ್ಷೆ
ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆ ಸಂಭವಿಸಿದ್ದು ಹೈಕಮಾಂಡ್ ಸೂಚನೆಯಂತೆ ಸಿ.ಎಂ. ಸಿದ್ದರಾಮಯ್ಯ ತಮ್ಮ ಹುದ್ದೆಗೆ ಯಾವುದೇ ಗೊಂದಲವಿಲ್ಲದಂತೆ ರಾಜೀನಾಮೆ ತೆರಳಿದ್ದಾರೆ. ನಿರೀಕ್ಷೆಯಂತೆ ಹೈಕಮಾಂಡಿನ ಅತ್ಯಂತ ಆಪ್ತ ಹಾಗೂ ಕಾಂಗ್ರೆಸ್ ಕಟ್ಟಾಳು ಡಿ.ಕೆ.ಶಿವಕುಮಾರ್ ಮುಂದಿನ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿಗೂ ಒಂದು ಶುಭ ಸುದ್ದಿ ಬರಬಹುದಾದ ನಿರೀಕ್ಷೆಯಿದೆ. 2023ರಿಂದ ಇಲ್ಲಿಯವರೆಗೆ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನಿಯೋಜನೆಗೊಂಡಿದಲ್ಲದೇ ತಮ್ಮ ಅವಿರತ ಪರಿಶ್ರಮದ ಮೂಲಕ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದ ಬಿದರಗೋಡು ಶ್ರೀಧರ್ ಅವರು ಇನ್ನೂ ಹೆಚ್ಚಿನ ಮನ್ನಣೆ ಪಡೆಯುವ ಸಾಧ್ಯತೆಗಳು ಗರಿಗೆದರಿದೆ.
ಬಿದರಗೋಡಿನ ಅತ್ಯಂತ
ಪ್ರತಿಭಾನ್ವಿತ ಹಾಗೂ ವಿದ್ಯಾವಂತ ಕುಟುಂಬದ ಹಿನ್ನೆಲೆಯ ಬಿ.ಎಸ್.ಶ್ರೀಧರ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು
ಬಿದರಗೋಡಿನ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮಾದ್ಯಮಿಕ ವಿದ್ಯಾಭ್ಯಾಸವನ್ನು ಮೇಗರವಳ್ಳಿಯ ಸರ್ಕಾರಿ
ಶಾಲೆಯಲ್ಲಿಯೂ, ಪದವಿ ವಿದ್ಯಾಭ್ಯಾಸವನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪೂರೈಸಿದವರು. ಬಳಿಕ
ಮೈಸೂರು ವಿಶ್ವ ವಿದ್ಯಾಲಯದಲ್ಲಿ ಇತಿಹಾಸದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಒಂದು ಸಂದರ್ಭದಲ್ಲಿ
ತೀರ್ಥಹಳ್ಳಿಯ ತುಂಗಾ ಕಾಲೇಜಿಗೆ ಉಪನ್ಯಾಸಕರ ಸಂದರ್ಶನಕ್ಕೂ ಬಂದವರು. ಆದರೆ ಆ ಹೊತ್ತಿಗಾಗಲೇ ಅವರ
ಇನ್ನೋರ್ವ ಸೋದರ ಬಿ.ಎಸ್.ನಾಗರಾಜ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣ ಹಿತೈಷಿಗಳ ಸಲಹೆ
ಮೇರೆಗೆ ಇನ್ನೂ ಹೆಚ್ಚಿನ ಅವಕಾಶ ಅರಸಿ ಬೆಂಗಳೂರಿಗೆ ತೆರಳಿದವರು. ಅಲ್ಲಿ ಎಂ.ಪಿ.ಎಂ. ಮತ್ತು ಬೆಮೆಲ್
ನಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದ ಬಳಿಕ ಇವರ ದಕ್ಷತೆ ಹಾಗೂ ಚುರುಕುತನವನ್ನು ಕಂಡ 1992 ರಿಂದ
94ರವರೆಗೆ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಎಸ್.ಎಂ.ಕೃಷ್ಣ ತಮ್ಮ ಆಪ್ತ ಕಾರ್ಯದರ್ಶಿಯಾಗಿ
ನೇಮಿಸಿಕೊಂಡರು.
ಬಳಿಕ ಶ್ರೀಧರ್
ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 1995ರಿಂದ 98ರವೆರೆಗೆ ಅಂದಿನ ವಿಧಾನ ಪರಿಷತ್ ವಿರೋಧ ಪಕ್ಷದ
ನಾಯಕರಾಗಿದ್ದ ಎಚ್.ಕೆ.ಪಾಟೀಲ್ ಅವರಿಗೆ ಕಾರ್ಯದರ್ಶಿಯಾದರು. ಬಳಿಕ 1999 ರಿಂದ 2004ರವರೆಗೆ ಎಸ್.ಎಂ.ಕೃಷ್ಣ
ಅವರು ಮುಖ್ಯಮಂತ್ರಿಯಾದಾಗ ಇವರ ಕಾರ್ಯಶೈಲಿಯನ್ನು ನೆನಪಿಸಿಕೊಂಡು ವಿಶೇಷ ಕರ್ತವ್ಯ ಅಧಿಕಾರಿಯಾಗಿ
ನೇಮಿಸಿಕೊಂಡರು. ಅಲ್ಲದೇ 2004ರಿಂದ 2008ರವರೆಗೆ ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾದಾಗ
ಮತ್ತೆ ಆಪ್ತ ಕಾರ್ಯದರ್ಶಿಯಾಗುವ ಶ್ರೀಧರ್ ಅವರನ್ನು ಹುಡುಕಿಕೊಂಡು ಬಂತು. ಬಳಿಕ 2014 ರಿಂದ 2018ರವರೆಗೆ
ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಆಪ್ತ ಕಾರ್ಯದರ್ಶಿಯಾದರು. 2018ರಿಂದ 19ರವರೆಗೆ ಶಿವಕುಮಾರ್
ಅವರ ಖಾತೆ ಬದಲಾಗಿ ನೀರಾವರಿ ಖಾತೆ ಸಚಿವರಾದಾಗಲೂ ಶ್ರೀಧರ್ ಅಪ್ತ ಕಾರ್ಯದರ್ಶಿಯಾಗಿ ಮುಂದುವರೆದರು.
ಇದಾದ ನಂತರ 2023ರಿಂದ ಇಲ್ಲಿಯವರೆಗೆ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರ ವಿಶೇಷ ಕರ್ತವ್ಯ
ಅಧಿಕಾರಿಯಾಗಿ ಶ್ರೀಧರ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗಾಗಿಯೇ ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿಯಾಗಿರುವ ಈ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಮಹತ್ವದ ಹುದ್ದೆ ಅವರಿಗೆ ಲಭಿಸುವ ಸಾಧ್ಯತೆಗಳು
ದಟ್ಟವಾಗಿದೆ.
ಶ್ರೀಧರ್ ಅವರು
ಜೊತೆಯಾಗಿ ಕಾರ್ಯ ನಿರ್ವಹಿಸಿರುವ ರಾಜಕಾರಣಿಗಳೆಲ್ಲರೂ ಕರ್ನಾಟಕ ಕಂಡ ರಾಜಕಾರಣದ ದಿಗ್ಗಜರೇ. ಪ್ರತಿಸಲವು
ನಿರಂತರವಾಗಿ ಮಹತ್ವದ ಜವಾಬ್ದಾರಿ ಪಡೆಯುತ್ತಲೇ ಸಾಗಿದ್ದು ಅವರ ಕ್ರಿಯಾಶೀಲತೆ ಮತ್ತು ನೀಡಿದ ಕೆಲಸವನ್ನು
ಅತ್ಯಂತ ಅಚ್ಚುಕಟ್ಟಾಗಿ ಮುಗಿಸುವ ದಕ್ಷತೆಗೆ ಸಾಕ್ಷಿಯಾಗಿದೆ. ದಿನನಿತ್ಯ ಎಸ್.ಎಂ.ಕೃಷ್ಣ, ಎಚ್.ಕೆ.ಪಾಟೀಲ್,
ಶಿವಕುಮಾರ್ ಅಂತಹ ಹೈ ಪ್ರೋಫೈಲ್ ರಾಜಕಾರಣಿಗಳೊಂದಿಗೆ ಒಡನಾಡುತ್ತಾ ನೂರಾರು ಫೋನ್ ಕರೆಗಳನ್ನು
ಅತ್ಯಂತ ಸೌಜನ್ಯದಿಂದ ಸ್ವೀಕರಿಸಿ ಅದಕ್ಕೆ ಉತ್ತರಿಸುವ ಶ್ರೀಧರ್ ಅವರ ಸುಸಂಸ್ಕೃತ ತನವನ್ನು ಅವರನ್ನು
ಹತ್ತಿರದಿಂದ ಬಲ್ಲವರು ಶ್ಲಾಘಿಸುತ್ತಾರೆ. ತೀರ್ಥಹಳ್ಳಿ ಭಾಗದವರು ಯಾವುದೇ ಸಮಸ್ಯೆ ಹೇಳಿಕೊಂಡು ಹೋದರು
ಅತ್ಯಂತ ಸೌಜನ್ಯದಿಂದ ಸ್ಪಂದಿಸುವ ಶ್ರೀಧರ್ ಯಾವುದೇ ಪ್ರಚಾರ ಬಯಸದೆ ಅನೇಕ ಕೆಲಸ ಮಾಡಿಕೊಟ್ಟಿದ್ದಾರೆ.
ಪತ್ನಿ ಸಬಿತಾ, ರೇಡಿಯಾಲಜಿಸ್ಟ್
ಆಗಿರುವ ಮಗಳು ಡಾ.ಐಶ್ವರ್ಯ, ಮಗ ಉದ್ಯಮಿ ಅಮೋಘರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀಧರ್ ಇಂದಿಗೂ
ಹುಟ್ಟೂರಿನ ಸಂಪರ್ಕವನ್ನು ನಿರಂತರವಾಗಿ ಇಟ್ಟುಕೊಂಡಿದ್ದಾರೆ. ಅಂದಹಾಗೆ ಇವರದ್ದು ಅತ್ಯಂತ ಪ್ರತಿಭಾವಂತ
ಕುಟುಂಬ. ಸಹೋದರ ಬಿ.ಎಸ್.ಬಾಲಕೃಷ್ಣ ಪಿಡಬ್ಲೂಡಿ ನಿವೃತ್ತ ಸುಪರಿಡೆಂಟ್ ಇಂಜಿನಿಯರ್. ಅವರ ಕಾಲದಲ್ಲಿ
ತೀರ್ಥಹಳ್ಳಿಗೆ ವಿಶೇಷ ಮುತುವರ್ಜಿ ವಹಿಸಿ ಒಳ್ಳೆಯ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಇನ್ನೋರ್ವ ಸಹೋದರ
ಬಿ.ಎಸ್.ನಾಗರಾಜ್ ತುಂಗಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ
ಅಧ್ಯಕ್ಷರಾದ ನಾಬಳ ಶಚೀಂದ್ರ ಹೆಗ್ಡೆ ಇವರ ಸೋದರಳಿಯ.

