ಅಂಬಳಿಕೆ ಗಿರೀಶ್‌ಗೆ ಮಹತ್ವದ ಜವಾಬ್ದಾರಿ

ತೀರ್ಥಹಳ್ಳಿ- ಹೊಸನಗರ ಎಲ್‌ಐಸಿ ಪ್ರತಿನಿಧಿ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆ

ಭಾರತೀಯ ಜೀವವಿಮಾ ನಿಗಮದ ತೀರ್ಥಹಳ್ಳಿ ಪ್ರತಿನಿಧಿಗಳ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಪ್ರತಿನಿಧಿಗಳಲ್ಲಿ ಒಬ್ಬರೆಂಬ ಖ್ಯಾತಿ ಹೊಂದಿರುವ ಅಂಬಳಿಕೆ ಗಿರೀಶ್‌ ನೂತನವಾಗಿ ತೀರ್ಥಹಳ್ಳಿ ಹೊಸನಗರ ಜೀವವಿಮಾ ಪ್ರತಿನಿಧಿಗಳ ಸಂಘಕ್ಕೆ ಆಯ್ಕೆಯಾಗಿದ್ದಾರೆ. ಕಳೆದ 26 ವರ್ಷಗಳಿಂದ ಅತ್ಯಂತ ಯಶಸ್ವಿ ಪ್ರತಿನಿಧಿ ಎನಿಸಿರುವ ಅಂಬಳಿಕೆ ಗಿರೀಶ್‌ ತಮ್ಮ ವಿಭಿನ್ನ ಸಾಧನೆಯ ಮೂಲಕ ವಿಭಾಗ ಮಟ್ಟದಲ್ಲಿಯೇ ಉತ್ತಮ ಹೆಸರನ್ನು ಪಡೆದುಕೊಂಡಿದ್ದಾರೆ.

ನಿರಂತರವಾಗಿ ಎಂಡಿಆರ್‌ಟಿ ಸಾಧನೆ ಮಾಡಿಕೊಂಡು ಬರುತ್ತಿರುವ ಗಿರೀಶ್‌ ಕಳೆದ 3 ವರ್ಷಗಳಿಂದ ಸಿಓಟಿ ಸಾಧಕರಾಗಿದ್ದಾರೆ. ಇದೆಲ್ಲದರ ಜೊತೆಗೆ ಸಾಮಾಜಿಕವಾಗಿಯೂ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿರುವ ಗಿರೀಶ್‌ ರೋಟರಿ, ಜೆಸಿ ಮುಂತಾದ ಸಂಸ್ಥೆಗಳಲ್ಲಿಯೂ ಗುರುತಿಸಿಕೊಂಡು ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ಕಿಮ್ಮನೆ ರತ್ನಾಕರ್‌ ಶಿಕ್ಷಣ ಸಚಿವರಾಗಿದ್ದಾಗ ರೋಟರಿ ಅಧ್ಯಕ್ಷರಾಗಿದ್ದ ಗಿರೀಶ್‌ ಆ ಸಮಯದಲ್ಲಿ ವಿದ್ಯುತ್‌ ಸಂಪರ್ಕವಿರದ ಕುಗ್ರಾಮಗಳ 2500 ವಿದ್ಯಾರ್ಥಿಗಳಿಗೆ 89 ಲಕ್ಷ ರೂಪಾಯಿಗಳ ಸೋಲಾರ್‌ ಲ್ಯಾಂಪ್‌ ಅನ್ನು ಉಚಿತವಾಗಿ ವಿತರಿಸಿದ್ದು ಆ ಬಳಿಕ ಒಟ್ಟಾರೆ ತೀರ್ಥಹಳ್ಳಿ ಕ್ಷೇತ್ರದ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಗಣನೀಯ ಸುಧಾರಣೆಯಾಗಿದ್ದು ರಾಜ್ಯದ ಗಮನ ಸೆಳೆದಿತ್ತು. ಇದಲ್ಲದೇ ಪರಶಿವಮೂರ್ತಿ ಅವರು ಐಜಿಯಾಗಿದ್ದಾಗ ಪೊಲೀಸ್‌ ಇಲಾಖೆಯೊಂದಿಗೆ ಒಮ್ಮೆಲೆ 800 ಜನರಿಗೆ ಉಚಿತ ನಾಗರೀಕ ಬಂದೂಕು ತರಬೇತಿ ಶಿಬಿರ ಏರ್ಪಡಿಸಿದ್ದು ಆಗ ದಾಖಲೆಯಾಗಿತ್ತು. ಅಲ್ಲದೇ ಅವರು 3 ಅವಧಿಯ ಮಲೆನಾಡು ಕ್ಲಬ್‌ ನಿರ್ದೇಶಕರಾಗಿ, ಪ್ರತಿಷ್ಠಿತ ಒಕ್ಕಲಿಗರ ಸಂಘದ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೇ ತೀರ್ಥಹಳ್ಳಿಯ ಬಹು ಅಗತ್ಯದ ರೋಟರಿ ಬ್ಲಡ್‌ ಬ್ಯಾಂಕ್‌ ಸ್ಥಾಪನೆಯ ಹಿಂದೆ ಗಿರೀಶರ ಪ್ರಯತ್ನ ದೊಡ್ಡ ಮಟ್ಟದಲ್ಲಿದೆ. ಪ್ರಧಾನ ಕಾರ್ಯದರ್ಶಿಯಾಗಿ ಹೆಚ್‌.ವಾಸಪ್ಪ, ಖಜಾಂಚಿಯಾಗಿ ಬಸವಾನಿ ರಾಘವೇಂದ್ರ ಭಟ್‌ ಆಯ್ಕೆಯಾಗಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post