ಮರ್ಯಾದೆ ಗೇಡು ಹತ್ಯೆ ವಿರುದ್ಧ ಕಾನೂನು ರಚನೆಗೆ ಸರ್ಕಾರ ನಿರ್ಧಾರ..?
ಡಿ.21 ರಂದು ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ನಡೆದ ದಲಿತ ಹುಡುಗನನ್ನು ಪ್ರೀತಿಸಿ ಮದುವೆಯಾದ ಲಿಂಗಾಯಿತ ಸಮುದಾಯದ ಮಾನ್ಯಾಳನ್ನು ಆಕೆಯ ತಂದೆಯೇ ಕೊಂದು "ಮರ್ಯಾದಾಗೇಡು ಹತ್ಯೆ" ನಡೆಸಿದ್ದ. ಮನುಷ್ಯರು ಬೆಚ್ಚಿ ಬೀಳುವ ಈ ಅಮಾನವೀಯ ಕೃತ್ಯದ ಮೊದಲು ದನಿಯೆತ್ತಿದ ಪತ್ರಕರ್ತ ಕವಿ ಲೇಖಕ, ಟೆಲೆಕ್ಸ್ ರವಿಕುಮಾರ್ ಸಾಮಾಜಿಕ ಜಾಲ ತಾಣದಲ್ಲಿ ಕೃತ್ಯವನ್ನು ಖಂಡಿಸಿ ಬರೆದಾಗ ಮಾನವೀಯ ಮನಸುಗಳು ಮರುಗಿದ್ದವು. ಅಷ್ಟಕ್ಕೇ ಸುಮ್ಮನಾಗದ ರವಿಕುಮಾರ್ ಇದಕ್ಕೆ ಅಭಿಯಾನದ ಸ್ವರೂಪ ನೀಡಿದಾಗ ಸಾವಿರಾರು ಮಾನವೀಯ ಕಳಕಳಿ ಇರುವ ಪ್ರಗತಿಪರರು, ಲೇಖ ಕರು ಜೊತೆಯಾಗಿದ್ದರು.
ರಾಜ್ಯದಲ್ಲಿ ಮತ್ತೆ ಮತ್ತೆ ಇಂತಹ "ಮರ್ಯಾದಾಗೇಡು ಹತ್ಯೆಗಳು" ನಡೆಯುತ್ತಲೇ ಇವೆ. ಇವುಗಳನ್ನು ನಿಗ್ರಹಿಸಲು ಕಠಿಣವಾದ ಪ್ರತ್ಯೇಕ ಕಾಯ್ದೆ ಜಾರಿಯಾಗಬೇಕೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರವನ್ನೂ ಬರೆಯಲಾಗಿತ್ತು. FB & ವಾಟ್ಸಾಪ್ ವೇದಿಕೆಗಳಲ್ಲಿ " ಮಾನ್ಯ ಕಾಯ್ದೆ" ಅಭಿಯಾನ ನಡೆಸಲಾಗಿತ್ತು. ಅಭಿಯಾನಕ್ಕೆ ಸಮ್ಮತಿಸಿದವರ ಹೆಸರುಗಳುಳ್ಳ ಮನವಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು.
ಮನವಿ ಪತ್ರದೊಂದಿಗೆ ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಮರ್ಯಾದಾಗೇಡು ಹತ್ಯೆಗಳು ವಿವರಗಳ ದಾಖಲೆಗಳನ್ನು ಲಗತ್ತಿಸಿದ ಫೈಲ್ ನ್ನೇ ನೀಡಿ ಮರ್ಯಾದಾಗೇಡು ಹತ್ಯೆಗೆ ಪ್ರತ್ಯೇಕ ಕಾಯ್ದೆ ಅಗತ್ಯತೆ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಲಾಗಿತ್ತು.
ಮರ್ಯಾದಾಗೇಡು ಹತ್ಯೆ ಹತ್ತಿಕ್ಕಲು ಪ್ರತ್ಯೇಕ ಕಾನೂನು ತರುವುದಾಗಿ ಅತ್ಯಂತ ಸಹನೆ ಮತ್ತು ಗಂಭೀರವಾಗಿ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಯ್ದೆ ತರೋಣ ಎಂದು ಪುನರುಚ್ಚರಿಸಿದ್ದಾರೆ.ಈಗಾಗಲೇ ಕಾಯ್ದೆ ಸ್ವರೂಪದ ಕುರಿತು ಚರ್ಚೆ ರೂಪು ರೇಷೆ ಸಿದ್ದವಾಗುತ್ತಿದ್ದು ಶೀಘ್ರವೇ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ.
