ವಿದ್ಯುತ್ ಖಾಸಗೀಕರಣ ಬಿಜೆಪಿಯ ಅಪಪ್ರಚಾರವಷ್ಟೇ..
ನೆಹರು ಸ್ಥಾಪಿಸಿದ ಸಾರ್ವಜನಿಕ ಸ್ವತ್ತುಗಳ ಮಾರಾಟವೇ ಮೋದಿ
ಸಾಧನೆ – ಆರ್.ಎಂ.ಮಂಜುನಾಥ ಗೌಡ
ಪೌರಾಣಿಕ ಹಾಗೂ ಐತಿಹಾಸಿಕವಾಗಿ ಮಹತ್ವ ಪಡೆದಿರುವ ತೀರ್ಥಹಳ್ಳಿ ಕ್ಷೇತ್ರ ದೇವತೆ ಶ್ರೀ ರಾಮೇಶ್ವರ ದೇವಾಲಯದ ಸಮೀಪದಲ್ಲಿರುವ ತುಂಗಾ ನದಿಯ ನಡುಗಡ್ಡೆ ಜೋಗಿ ಕುತ್ರೆಗೆ ಸುಮಾರು 3.30 ಕೋಟಿ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣ ಮಾಡುವ ಮೂಲಕ ಅದನ್ನು ಪ್ರೇಕ್ಷಣೀಯ ಸ್ಥಳವಾಗಿ ರೂಪುಗೊಳಿಸಲಾಗುವುದು ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ತೀರ್ಥಹಳ್ಳಿ ಬಂಟರ ಭವನದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮರುಹುಟ್ಟು ಬಂದಂತಾಗಿದೆ. ತಮ್ಮ ಶಿಫಾರಸ್ಸಿನ ಮೇಲೆ ತಕ್ಷಣವೇ ಅವರು ಅಭಿವೃದ್ಧಿಗಾಗಿ ಮೇಲ್ಕಂಡ ಹಣವನ್ನು ಬಿಡುಗಡೆಗೊಳಿಸಿರುವುದಾಗಿ ಹೇಳಿದ್ದು ನಡುಗಡ್ಡೆಯ ಮೂಲ ರಚನೆ ಮತ್ತು ಐತಿಹಾಸಿಕವಾಗಿ ಹಲವು ಜೈನ ಆಡಳಿತ ಕಾಲದ ಶಿಲಾ ಶಾಸನಗಳನ್ನು ಒಳಗೊಂಡ ಸ್ಥಳವಾಗಿರುವ ಜೋಗಿ ಕುತ್ರೆಯ ಪ್ರಾಕೃತಿಕ ರಚನೆಗೆ ದಕ್ಕೆ ಬಾರದಂತೆ ತೂಗು ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಟಿಯ ಮುಖ್ಯಾಂಶಗಳು
ವಿದ್ಯುತ್ ಖಾಸಗೀಕರಣ ಆಗುವುದಿಲ್ಲ
ವಿದ್ಯುತ್ ಖಾಸಗೀಕರಣ ಕೇವಲ ಬಿಜೆಪಿಯ ಆರೋಪವಷ್ಟೇ ಇದು ಪರಿಶೀಲನಾ ಹಂತದಲ್ಲಿದೆ. ಇಷ್ಟಕ್ಕೂ ನೆಹರು ಪ್ರಧಾನಿಯಾಗಿದ್ದಾಗ ನಿರ್ಮಿಸಿದಾಗ ಪ್ರತಿಯೊಂದು ಸಾರ್ವಜನಿಕ ಸ್ವತ್ತುಗಳನ್ನು ಮಾರುವುದೇ ಸಾಧನೆ ಎಂದುಕೊಂಡಿರುವ ಕೇಂದ್ರ ಬಿಜೆಪಿ ಸರ್ಕಾರದ ಎದುರು ಇಲ್ಲಿನ ಬಿಜೆಪಿಯವರು ಬೊಬ್ಬೆ ಹೊಡೆಯಬೇಕು. ಇವರು ಮಾರುವುದೇ ಅಭಿವೃದ್ಧಿ ಎಂದು ತಪ್ಪು ತಿಳಿದಿದ್ದಾರೆ.
ಎಸ್‌ಐಆರ್ ಆತಂಕ ಬೇಡ
ಎಸ್‌ಐಆರ್ ಕುರಿತು ರಾಜ್ಯ ಸರ್ಕಾರ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಕಂದಾಯ ಇಲಾಖೆಯ ಮೂಲಕವೇ ವಾಸ ದೃಢೀಕರಣ ನೀಡಲಾಗುವುದು. ಈ ಕುರಿತು ಸರ್ಕಾರಿ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಬಿಎಲ್‌ಓಗಳು ಪ್ರತಿ ಮನೆಗೂ ಓಡಾಡಲಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬಂಗಾಳ ಹಾಗೂ ಇತರ ಕಡೆಗಳಲ್ಲಿ ಆದಂತೆ ಇಲ್ಲಿ ಮತ ವಂಚನೆ ಆಗಲು ಬಿಡುವುದಿಲ್ಲ.
ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಗಿತ
ಇಡೀ ದೇಶದಲ್ಲಿ ರಾಜ್ಯ ಸರ್ಕಾರವೇ ನಿರ್ಮಿಸಿದ ಏಕೈಕ ವಿಮಾನ ನಿಲ್ದಾಣ ಶಿವಮೊಗ್ಗ. ಇದನ್ನು ಕೂಡ ಸರಿಯಾಗಿ ನಿರ್ವಹಿಸದ ಕೇಂದ್ರ ಸರ್ಕಾರ ಕುಂಟು ನೆಪ ಹೇಳಿ ಅದನ್ನು ನಿಲ್ಲಿಸಿದೆ. ಇದು ಖಂಡನೀಯ. ಬಹುಶಃ ಇದನ್ನು ಕೂಡ ಖಾಸಗಿಯವರಿಗೆ ಮಾರಲು ಹೊರಟಿರಬೇಕು.
ಅದಾನಿ, ಅಂಬಾನಿ ಅಭಿವೃದ್ಧಿ ದೇಶದ ಅಭಿವೃದ್ಧಿಯಲ್ಲ
ಮೋದಿಯವರು ಪ್ರಧಾನಿಯಾದ ಬಳಿಕ ಸಾರ್ವಜನಿಕ ಸ್ವತ್ತುಗಳನ್ನು ಮಾರಿದ್ದೆ ಸಾಧನೆ. ಜನ ಸಾಮಾನ್ಯರು ಬಡವರು ಖಂಡಿತ ಅಭಿವೃದ್ಧಿಯಾಗಿಲ್ಲ. ಬದಲು ಅವರ ಆಪ್ತರಾದ ಅದಾನಿ ಅಂಬಾನಿ ಮಾತ್ರ ಅತಿ ಶ್ರೀಮಂತರಾಗಿ ಪರಿವರ್ತನೆಯಾಗಿದ್ದಾರೆ.
ಯಾರಿಗೆ ಟಿಕೆಟ್ ಕೊಟ್ಟರು ಓಕೆ
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಓಕೆ. ಪಕ್ಷದ ಆದೇಶದಂತೆ ನಡೆಯುತ್ತೇನೆ. ಅದಕ್ಕೂ ಮೊದಲು ಕಳೆದ ಚುನಾವಣೆಯಲ್ಲಿ ಏನೆಲ್ಲಾ ಮಾತುಕತೆ ಆಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆ ಪ್ರಕಾರ ಎಲ್ಲವು ನಡೆಯುತ್ತದೆ ಎನ್ನುವ ಆಶಾವಾದದಲ್ಲಿ ನಾನಿರುವೆ.
ಆರ್‌ಎಸ್‌ಎಸ್ ನೊಂದಣಿ ಆಗುವುದರಲ್ಲಿ ತಪ್ಪೇನಿದೆ
ಗೃಹಸಚಿವ ಪ್ರಿಯಾಂಕ ಖರ್ಗೆ ಹಲವು ಬಾರಿ ಶಾಸಕನಾಗಿರುವ ಅನುಭವಿ. ಆರ್.ಎಸ್.ಎಸ್. ನೊಂದಣಿ ಆಗಬೇಕು ಎಂದು ಹೇಳಿರುವುದು ಸರಿ ಇದೆ. ಇವತ್ತು ಸಣ್ಣ ಸಂಸ್ಥೆ ಕೂಡ ಸಾರ್ವಜನಿಕವಾಗಿ ಚಟುವಟಿಕೆ ಮಾಡಲು ನೊಂದಣಿ ಕಡ್ಡಾಯವಿದೆ. ಅಂತಹದ್ದರಲ್ಲಿ ನೊಂದಣಿ ಮಾಡಿಕೊಳ್ಳುವುದಿಲ್ಲ ಎನ್ನುವುದು ಸರಿಯಲ್ಲ.
ತುಂಬಿ ತುಳುಕಿದ ಸುದ್ದಿಗೋಷ್ಟಿ
ಕಿಮ್ಮನೆ ರತ್ನಾಕರ್ ಅವರ ಸುದ್ದಿಗೋಷ್ಟಿಯಲ್ಲಿ ಕಾಣಿಸಿಕೊಳ್ಳದ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಸುಶೀಲ ಶೆಟ್ಟಿ, ಹಿರಿಯ ಕಾಂಗ್ರೆಸ್ಸಿಗ ಡಿ.ಎಸ್.ವಿಶ್ವನಾಥ ಶೆಟ್ಟಿ, ಹಾರೋಗೊಳಿಗೆ ಪದ್ಮನಾಭ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬೇಡನಬೈಲು ಯಲ್ಲಪ್ಪ ಸೇರಿದಂತೆ ಅನೇಕರು ಬಹಳ ಕಾಲದ ಬಳಿಕ ಗೌಡರ ಅಕ್ಕಪಕ್ಕದಲ್ಲಿ ಕುಳಿತು ಕಂಗೊಳಿಸಿದರು…!
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಬಳ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್ ಮಾಜಿ ಅಧ್ಯಕ್ಷರಾದ ಟಿ.ಎಲ್.ಸುಂದರೇಶ್, ಶಬನಮ್, ಸದಸ್ಯರಾದ ಬಿ.ಆರ್.ರಾಘವೇಂದ್ರ ಶೆಟ್ಟಿ, ಮಂಜುಳಾ ನಾಗೇಂದ್ರ ಮುಖಂಡರಾದ ಕಟ್ಟೇಹಕ್ಕಲು ಕಿರಣ್, ಮಟ್ಟನಮನೆ ರಾಮಚಂದ್ರ, ಜೀನಾ ವಿಕ್ಟರ್, ರವೀಶ್ ಹೊಸ್ಕರೆ, ಶ್ರೇಯಸ್ ರಾವ್, ಕುರುವಳ್ಳಿ ನಾಗರಾಜ್ ಪೂಜಾರಿ, ಕರಕುಚ್ಚಿ ಲೋಕೇಶ್ ಮತ್ತಿತರರು ಇದ್ದರು.
