ಕನ್ನಡ ಭಾಷೆ ಉಳಿವಿಗೆ
ಸಾಮೂಹಿಕ ಪ್ರಯತ್ನವಾಗಬೇಕು
ಬಸವಾನಿ ಕನ್ನಡ ಶಾಲೆ
ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವಿಗೆ ಸಿದ್ಧ –ಡಾ.ಎಂ. ಮೋಹನ್ ಆಳ್ವ
ಭಾರತ ವಿವಿಧ ಸಂಸ್ಕೃತಿಗಳ ತವರು ಇದನ್ನು ಉಳಿಸಿ ಬೆಳೆಸಲು ರಾಜಕಾರಣಿಗಳಿಂದ ಆಗುವುದಿಲ್ಲ ಆ ಕೆಲಸ ನಾವೇ ಮಾಡಬೇಕು. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ನಮ್ಮ ಕಲೆ ಪರಂಪರೆಗಳನ್ನು ಕಲಿಸಿ ಕೊಡಬೇಕು ಆಗ ಸೌಂದರ್ಯ ಪ್ರಜ್ಞೆ ಮನಸಲ್ಲಿ ಮೂಡುತ್ತದೆ. ವ್ಯಕ್ತಿತ್ವ ಪರಿಪೂರ್ಣ ಆಗುತ್ತದೆ. ಕೇವಲ ಅಕ್ಷರ ಕಲಿಕೆಯಿಂದ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳುವುದಿಲ್ಲ... ಎಂದು ಆಳ್ವಾಸ್ ವಿದ್ಯಾ ಸಮೂಹದ ಅಧ್ಯಕ್ಷ ಡಾ. ಮೋಹನ್ ಆಳ್ವಾ ಹೇಳಿದ್ದಾರೆ.
ಬಸವಾನಿ ಸರ್ಕಾರಿ
ಶಾಲೆಯ ನೂರಾ ಹನ್ನೊಂದನೇ ವರ್ಷಾಚರಣೆ ಪ್ರಯುಕ್ತ ಸೋಮೇಶ್ವರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿವಿಧತೆಯಲ್ಲಿ ಏಕತೆ ಭಾರತದ ಸಂಸ್ಕೃತಿ. ಜನಸಂಖ್ಯೆಯೇ
ಇಲ್ಲಿನ ದೊಡ್ಡ ಶಕ್ತಿ ಇದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದರೆ ಸಂಸ್ಕಾರಯುತ ಶಿಕ್ಷಣ ದೊರಕಬೇಕು.
ಅದಕ್ಕಾಗಿ ಮೊದಲು ಮಾತೃಭಾಷೆಯನ್ನು ಸರಿಯಾಗಿ ಕಲಿಯಬೇಕು. ಕನ್ನಡವನ್ನು ಸರಿಯಾಗಿ ಕಲಿತ ಬಳಿಕ ಉಳಿದ
ಭಾಷೆಗಳನ್ನೂ ಕಲಿಯಬೇಕು. ಭಾರತ ಎಲ್ಲ ಪ್ರಾದೇಶಿಕ ಭಾಷೆಗಳು ಕೂಡ ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.
ಆ ನಿಟ್ಟಿನಲ್ಲಿ ಆ ಆಳ್ವಾಸ್ ಶಿಕ್ಷಣ ಸಂಸ್ಥೆ ಕನ್ನಡ ಮಾದ್ಯಮ ಉಳಿವಿಗಾಗಿ ದೊಡ್ಡಮಟ್ಟದ ಪ್ರಯತ್ನ ಆರಂಭಿಸಿದೆ. ಈ ಸಾಲಿನಲ್ಲಿ 23 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಮಾದ್ಯಮ ಪ್ರವೇಶ ಬಯಸಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ಬಸವಾನಿ ಸರ್ಕಾರಿ ಕನ್ನಡ ಶಾಲೆಯ ಪ್ರಗತಿಗಾಗಿ ಆಳ್ವಾಸ್ ಕೊಡುಕೊಳ್ಳುವಿಕೆ ತತ್ವದಡಿ ಸಹಕಾರ ನೀಡಲು ಸದಾಸಿದ್ಧ. ಕಲೆಗಳ ವಿಚಾರದಲ್ಲೂ ಭಾರತ ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇಶ. ಇಲ್ಲಿಯಷ್ಟು ವೈವಿಧ್ಯಮಯ ಕಲಾಪ್ರಕಾರಗಳು ಎಲ್ಲಿಯೂ ಇಲ್ಲ. ಇದು ಎಲ್ಲರಿಗೂ ಹೆಮ್ಮೆ ತರಬೇಕು ಎಂದವರು ಹೇಳಿದರು.
ಶಾಲೆಯ ಹಳೆ ವಿದ್ಯಾರ್ಥಿ
ಮತ್ತು ಮಂಗಳೂರು ಶ್ರೀ ರಾಮಕೃಷ್ಣ ಮಠದ ಶ್ರೀ ಗಳಾದ ಸ್ವಾಮಿ ಜಿತಕಾಮಾನಂದ ಮಾತನಾಡಿ.... ಬಸವಾನಿ ಶಾಲೆ ಹಳೆ ವಿದ್ಯಾರ್ಥಿ ಎನ್ನಲು
ನನಗೆ ಹೆಮ್ಮಯಿದೆ. ಇಲ್ಲಿನ ಪರಿಸರ ಮತ್ತು ಆಗಿನ ಗುರುಗಳು ಬದುಕಿನ ದೊಡ್ಡ ಪಾಠ ಹೇಳಿಕೊಟ್ಟಿದ್ದಾರೆ.
ಈ ಶಾಲೆ ಹಿಂದಿನಂತೆ ಕ್ರಿಯಾ ಶೀಲವಾಗಿ ಉಳಿದು ಬೆಳೆಯಲಿ ಎಂದು ಆಶಿಸಿದರು.
ತಹಸೀಲ್ದಾರ್ ರಂಜಿತ್
ಮಾತನಾಡಿ, ಸರ್ಕಾರಿ ಶಾಲೆಯೊಂದು ಇಷ್ಟು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ.
ನನ್ನ ತಾಯಿ ಕೂಡ ಶಿಕ್ಷಕಿಯಾಗಿದ್ದು ಶಾಲೆಯಲ್ಲಿ ತೊಟ್ಟಿಲು ತೂಗಿ ನನ್ನನ್ನು ಆರೈಕೆ ಮಾಡಿಕೊಂಡು ಪಾಠ
ಮಾಡುತ್ತಿದ್ದರು ಎಂದರು.
ವೇದಿಯಲ್ಲಿ ಶಾಲಾ
ಎಸ್‌ಡಿಎಂಸಿ ಅಧ್ಯಕ್ಷ ಬಸವಾನಿ ಉದಯ ಕುಮಾರ, ರಾಘವೇಂದ್ರ ಭಟ್, ಕೊಳವಾರ ನಾರಾಯಣ ಮೂರ್ತಿ, ಚೇತನ ಶ್ರೀನಾಥ್,
ಸದಾಶಿವ ನಿಲುವಾಸೆ, ಶ್ರೀದೀಪ್ ಮುಂತಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್‌ನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ಪ್ರತಿಭಾಪೂರ್ಣವಾಗಿ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾವಿರಾರು ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
.jpeg)

