ಹೆದ್ದೂರು ನವೀನ್‌ಗೆ
ಒಲಿಯಿತೇ ಎಂಎಲ್‌ಎ ಟಿಕೆಟ್ ಅದೃಷ್ಟ?
ಬೆಂಗಳೂರಿನಿಂದ ವಿಮಾನದಲ್ಲಿ
ದಡಬಡಿಸಿ ಬಂದ ಶಾಸಕ ಆರಗ ಜ್ಞಾನೇಂದ್ರ
ಬಿಜೆಪಿಯ ಅತ್ಯಂತ
ಪ್ರಭಾವಿ, ಸಂಘ ಪರಿವಾರದ ಮುಖಂಡ, ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇಲ್ಲಿನ
ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಮನೆಗೆ ದಿಢೀರ್ ಭೇಟಿ ನೀಡಿರುವುದು ತೀರ್ಥಹಳ್ಳಿಯ ರಾಜಕೀಯ
ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಚಕ್ಕೋಡಬೈಲಿನ ಆರ್‌ಎಸ್‌ಎಸ್
ಪ್ರಮುಖರ ಮನೆಗೆ ಭೇಟಿ ನೀಡಿದ್ದ ಬಿ.ಎಲ್.ಸಂತೋಷ್ ಯಾರಿಗೂ ಗೊತ್ತಾಗದಂತೆ ದಿಢೀರನೆ ಹೆದ್ದೂರು ನವೀನ್
ಮನೆಗೆ ಭೇಟಿ ನೀಡಿರುವುದು ಬಿಜೆಪಿಯಲ್ಲಿ ಕುತೂಹಲಕಾರಿ ಬೆಳವಣಿಗೆಯಾಗಿದೆ. ಈ ಭೇಟಿಯ ಮಾಹಿತಿ ತಿಳಿಯುತ್ತಿದ್ದಂತೆ
ತಕ್ಷಣವೇ ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿದ್ದ ಶಾಸಕ ಆರಗ ಜ್ಞಾನೇಂದ್ರ ದಡಬಡಿಸಿ ಅಲ್ಲಿಂದ
ವಿಮಾನ ಏರಿ ಶಿವಮೊಗ್ಗದಲ್ಲಿ ಬಂದಿಳಿದು ತೀರ್ಥಹಳ್ಳಿಯಲ್ಲಿ ಸಂತೋಷ್ ಅವರನ್ನು ಭೇಟಿ ಮಾಡಿರುವುದು
ಕೂಡ ತೀವ್ರ ಚರ್ಚೆಗೀಡಾಗಿದೆ.
2028ರ ವಿಧಾನಸಭಾ
ಚುನಾವಣಾ ಹೊತ್ತಿಗೆ ಬಿಜೆಪಿ ಪಕ್ಷದ ನಿಯಮಾವಳಿ ಪ್ರಕಾರ 5 ಬಾರಿ ಶಾಸಕರಾಗಿರುವ ಆರಗ ಜ್ಞಾನೇಂದ್ರ
ಸೀನಿಯರ್ ಸಿಟಿಜನ್ ಎಂಬ ಕಾರಣಕ್ಕೆ ಕಟ್ಟುನಿಟ್ಟಾಗಿ ಆ ನಿಯಮವನ್ನು ಅನುಸರಿಸಿದರೆ ಅವರಿಗೆ ಟಿಕೆಟ್
ದೊರಕುವ ಸಾಧ್ಯತೆ ಕಡಿಮೆ.
ಜೊತೆಗೆ ಮುಂದಿನ
ಚುನಾವಣೆ ಹೊತ್ತಿಗೆ ರಾಜ್ಯ ಕಾಂಗ್ರೆಸ್‌ನ ಗೊಂದಲ ಇದೇ ರೀತಿ ಮುಂದುವರೆದಲ್ಲಿ ಬಿಜೆಪಿ ಮತ್ತೆ ಅಧಿಕಾರ
ಹಿಡಿಯಲಿದೆ ಎಂದು ಕೆಲವು ಆಂತರಿಕ ಸಮೀಕ್ಷೆಗಳು ಈಗಾಗಲೇ ಹೇಳಿವೆ. ಹಾಗಾದಲ್ಲಿ ರಾಜ್ಯ ರಾಜಕಾರಣದ ಮಟ್ಟಿಗೆ
ಬಿಜೆಪಿಯನ್ನು ತನ್ನ ಇಶಾರೆಗೆ ತಕ್ಕಂತೆ ಕುಣಿಸಬಲ್ಲ ತಾಕತ್ತನ್ನು ಈಗಲೂ ಉಳಿಸಿಕೊಂಡಿರುವ ಮತ್ತು ವಿಜೇಂದ್ರರನ್ನು
ಸಿಎಂ ಆಗಿಸಲು ಪಣ ತೊಟ್ಟಿರುವ ಯಡಿಯೂರಪ್ಪ ಬಣ ಟಿಕೆಟ್ ಹಂಚಿಕೆಯಲ್ಲಿ ಸಿಂಹಪಾಲನ್ನು ಪಡೆದೆ ತೀರುತ್ತದೆ.
ಆಗಲೂ ಯಡಿಯೂರಪ್ಪರ
ಕೆಂಗಣ್ಣಿಗೆ ಎಂದೋ ಗುರಿಯಾಗಿರುವ ಶಾಸಕ ಆರಗ ಜ್ಞಾನೇಂದ್ರರ ಬದಲು ಯಡಿಯೂರಪ್ಪರ ಅತ್ಯಂತ ಅಚ್ಚರಿಯ
ವಿಶ್ವಾಸಿಗ ಅಭ್ಯರ್ಥಿಗೆ ಟಿಕೆಟ್ ದೊರಕುವ ಸಾಧ್ಯತೆ ಹೆಚ್ಚಿದೆ. ಆಕಸ್ಮಾತ್ ಅಲ್ಲಿ ಗುರಿತಪ್ಪಿದರು
ಟಿಕೆಟ್ ಹಂಚಿಕೆಯಲ್ಲಿ ಮತ್ತೊಂದು ಬಣದಲ್ಲಿ ಪ್ರಭಾವಿ ಆಗಿರುವ ಬಿ.ಎಲ್.ಸಂತೋಷರ ಅಭ್ಯರ್ಥಿ ಹೆದ್ದೂರು
ನವೀನ್ ಆಗಬಹುದಾದ ಸಾಧ್ಯತೆಗಳೇ ಹೆಚ್ಚಿವೆ.
ಬಿಜೆಪಿ ಯಾವತ್ತಿಗೂ ವ್ಯಕ್ತಿಕೇಂದ್ರಿತ ಪಕ್ಷವಾಗಿ ಉಳಿಯದೆ ಸಂಘಟನೆಯ ನೆಟ್‌ವರ್ಕ್ ಮೂಲಕವೇ ದಿಢೀರ್ ನಾಯಕರನ್ನು ಸೃಷ್ಟಿಸುವ ಹಾಗೂ ಬೇಡವೆನಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಮುಗಿಸಬಲ್ಲ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಎದುರು ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಬೆಳೆಸಿದ್ದು. ಮತ್ತು ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಸೆಡ್ಡು ಹೊಡೆದಾಗ ಠೇವಣಿ ಇಲ್ಲದಂತೆ ಮಾಡಿದ್ದು ಇದಕ್ಕೆ ಉದಾಹರಣೆಗಳು.
ತೀರ್ಥಹಳ್ಳಿಯಲ್ಲಿಯೂ
ಕೂಡ ಆರಗರ ನಂತರ ಸಂಘ ಪರಿವಾರದ ನೆಚ್ಚಿನ ಅಭ್ಯರ್ಥಿ ಹೆದ್ದೂರು ನವೀನ್ ಎಂಬುದು ಕಳೆದ ಚುನಾವಣೆಗೆ
ಮುಂಚಿನಿಂದಲೂ ಚಾಲ್ತಿಯಲ್ಲಿತ್ತು. ಈಗಲೂ ಕೂಡ ರೇಸ್‌ನಲ್ಲಿ ಇರುವುದು ನವೀನ್ ಹೆಸರೇ, ಅದರಲ್ಲಿ ಯಾವುದೇ
ಅನುಮಾನವಿಲ್ಲ. ಒಂದುವೇಳೆ ಈ ಬಾರಿ ಸಂಘ ಪರಿವಾರ ಸ್ಪಷ್ಟವಾಗಿ ಚುನಾವಣಾ ಕಣದಿಂದ ಆರಗರಿಗೆ ಹಿಂದಕ್ಕೆ
ಸರಿಯಬೇಕು ಎಂಬ ಸೂಚನೆ ನೀಡಿದರೆ ಅದನ್ನು ಪಾಲಿಸದ ಹೊರತು ಅವರಿಗೆ ಬೇರೆ ಮಾರ್ಗಗಳಿರುವುದಿಲ್ಲ. ಇಲ್ಲಿ
ಹೆಚ್ಚೆಂದರೆ ಪ್ರತಿಪಕ್ಷದಲ್ಲಿ ಸಂಭವನೀಯ ಅಭ್ಯರ್ಥಿಯಾಗಳಾಗಿರುವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥ
ಗೌಡರ ಎದುರು ಹೆದ್ದೂರು ನವೀನ್ ತೀರ ಎಳಸಾದ ಅಭ್ಯರ್ಥಿ ಆಗಬಹುದು. ಆದ್ದರಿಂದ ಗೆಲುವಿನ ಸಾಧ್ಯತೆ
ಕ್ಷೀಣಿಸುವ ಕಾರಣದಿಂದ ಮತ್ತೆ ಆರಗರೇ ಅಭ್ಯರ್ಥಿಯಾಗುವುದು ಉತ್ತಮ ಎಂಬ ಮಾಮೂಲಿ ವಾದ ಚಾಲ್ತಿಗೆ ಬರಬಹುದು.
ಆದರೆ ಬಿಜೆಪಿ ಕ್ಷಣದ ಯೋಚನೆಗಿಂತಲೂ ಕನಿಷ್ಟ 20 ವರ್ಷಗಳ ಮುಂದಾಲೋಚನೆ ಮಾಡುವುದರಿಂದ ಒಂದು ಚುನಾವಣೆ
ಸೋತರು ಪರವಾಗಿಲ್ಲ ಭವಿಷ್ಯ ಮುಖ್ಯ ಎಂಬ ನಿರ್ಣಯಕ್ಕೆ ಬಂದರೆ ಹೆದ್ದೂರು ನವೀನ್‌ಗೆ ಈ ಬಾರಿಯೇ ಲಾಟರಿ
ಹೊಡೆಯುವ ಚಾನ್ಸ್ ಇದ್ದೆ ಇದೆ.
ಈ ಹಿನ್ನಲೆಯಲ್ಲಿ
ಬಿ.ಎಲ್.ಸಂತೋಷ್ ಹೆದ್ದೂರು ನವೀನ್ ಮನೆಗೆ ಭೇಟಿ ನೀಡಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ.
ಹಾಗಾದಲ್ಲಿ ಮುಂದು ಕೂಡ ಗೆಲುವಿನ ಅಭ್ಯರ್ಥಿಯೆಂದೇ ಪ್ರಚಾರದಲ್ಲಿ ಇರುವ ಹಾಗೂ ಕಾಂಗ್ರೆಸಿಗರು ದಂಗು
ಬಡೆಯುವಂತೆ ನಿಮಿಷವೂ ವ್ಯರ್ಥ ಮಾಡದೆ ಕೆಲಸ ಮಾಡುತ್ತ ಪ್ರಚಂಡವಾಗಿ ಯುವಕರನ್ನು ಆಕರ್ಷಿಸುತ್ತಿರುವ
ಮತ್ತು ತೀರ್ಥಹಳ್ಳಿಯಲ್ಲಿ ತನ್ನ ಅವಿರತ ಶ್ರಮದ ಮೂಲಕ ಪಕ್ಷದ ಹೊರತಾಗಿಯೂ ತನಗೊಂದು ಪ್ರತ್ಯೇಕವಾದ
ಜನಪರ ಇಮೇಜ್ ಕಟ್ಟಿಕೊಂಡಿರುವ ಆರಗ ಜ್ಞಾನೇಂದ್ರರ ಮುಂದಿನ ಕಥೆ ಏನು ಎಂಬ ಪ್ರಶ್ನೆ ಏಳಬಹುದು.
ಅದಕ್ಕೆ ಅವರನ್ನು ಈಗಾಗಲೇ ಗೃಹಮಂತ್ರಿಯಂತಹ ಅತ್ಯುನ್ನತ ಸ್ಥಾನಮಾನಕ್ಕೆ ಏರಿಸಲಾಗಿದೆ ಎಂಬ ಉತ್ತರವು ಸಿದ್ಧವಾಗಿರುತ್ತದೆ. ಅಲ್ಲದೇ ಆರಗ ಗೃಹಮಂತ್ರಿಯಾಗಿದ್ದಾಗಲೂ ಸಂಘ ಪರಿವಾರದ ಆಜ್ಞೆಯನ್ನು ಎಂದಿಗೂ ಮೀರದ ಕಾರಣಕ್ಕಾಗಿ, ಅವರ ಸುದೀರ್ಘ ರಾಜೀ ರಹಿತ ಹೋರಾಟದ ಕಾರಣ ಯಾವುದಾದರು ರಾಜ್ಯದ ರಾಜ್ಯಪಾಲರಾದರು ಅಚ್ಚರಿಯೇನಿಲ್ಲ.
ಆರಗ ಜ್ಞಾನೇಂದ್ರ
ಮಯೂರ ಹೋಟೆಲಿನಲ್ಲಿ ಕುಮುಟಿ ಬಿದ್ದಿದ್ದೇಕೆ ?
ಎಳ್ಳಮಾವಾಸ್ಯೆ ಜಾತ್ರೆ
ಸಂದರ್ಭ ಆರಗ ಜ್ಞಾನೇಂದ್ರ ಅವರಿಗೆ ಸಾರ್ವಜನಿಕವಾಗಿ ಸನ್ಮಾನಿಸುವ ವಿಷಯವನ್ನು ಜಾತ್ರಾ ಸಮಿತಿಯ ಪ್ರಮುಖರಾದ
ಟಿ.ಎಲ್.ಸುಂದರೇಶ್ ಪ್ರಸ್ತಾಪಿಸಿದ ಘಟನೆ ಈಗ ಮತ್ತೆ ಚಾಲ್ತಿಗೆ ಬಂದಿದೆ. ಅಂದು ಆರಗ ಜ್ಞಾನೇಂದ್ರ
ಸನ್ಮಾನದ ವಿಷಯ ಬಹಿರಂಗವಾಗುತ್ತಿದ್ದಂತೆ ಒಮ್ಮೆಲೆ ಕುಮುಟಿ ನಾನು ರಾಜಕಾರಣದಿಂದ ನಿವೃತ್ತ ಆಗಲ್ಲ.
ಈ ಸನ್ಮಾನದ ನೆಪದಲ್ಲಿ ನನ್ನನ್ನು ಮನೆಗೆ ಕಳುಹಿಸಬೇಕು ಅಂದುಕೊಂಡಿದ್ದೀರ ಎಂದು ಹೇಳಿ ಮುಂದು ಕೂಡ
ನಾನೇ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಂಡಿದ್ದರು. ಈಗ ದಿಢೀರನೇ ಬಿ.ಎಲ್.ಸಂತೋಷ್ ಆರ್‌ಎಸ್‌ಎಸ್ ನಾಯಕರ
ಮನೆ ಭೇಟಿ ನೆಪದಲ್ಲಿ ಹೆದ್ದೂರು ನವೀನ್ ಮನೆಗೆ ಭೇಟಿ ನೀಡಿರುವುದು ಆರಗ ಜ್ಞಾನೇಂದ್ರರಿಗೆ ಟಿಕೆಟ್
ತಪ್ಪುವ ಸಂದೇಶವೇ?
ಹೆದ್ದೂರು ಪರ ಹಿರಿ-ಕಿರಿ ಮುಖಂಡರು?
ನವೀನ್ ಪರವಾಗಿ ಈಗಾಗಲೇ ಪಕ್ಷದ ಯುವಪಡೆ ಕಾರ್ಯಾಚರಣೆಗೆ ಇಳಿದಿದ್ದು ಅವರಿಗೆ ಜನಪ್ರಿಯತೆ ತಂದುಕೊಡಲು ಶ್ರಮಿಸತೊಡಗಿದೆ. ನಿತ್ಯ ಹತ್ತಾರು ಕಾರ್ಯಕರ್ತರ ಮನೆಗೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ, ಪಕ್ಷದ ಸಭೆಗಳಿಗೆ ಅವರು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಅವರಿಗೆ ಪಕ್ಷದ ಅನೇಕ ಹಿರಿಯ, ಕಿರಿಯ ಮುಖಂಡರು ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ನವೀನ್ ಅವರಿಗೆ ಸದ್ಯಕ್ಕೆ ಆನೆ ಬಲ ಬಂದಂತಾಗಿದೆ.



