ಭಿನ್ನಮತಕ್ಕೆ ತಲೆದಂಡ?

ಡಿ.ಎಸ್.ವಿಶ್ವನಾಥ ಶೆಟ್ಟಿ, ರಹಮತ್‌ ಉಲ್ಲಾ ಅಸಾದಿ, ಸುಶೀಲ ಶೆಟ್ಟಿ, ನಮ್ರತ್‌ ಉಚ್ಚಾಟನೆಗೆ ಶಿಫಾರಸ್ಸು..?
ಪಕ್ಷ ವಿರೋಧಿ ಚಟುವಟಿಕೆಗೆ ಕಠಿಣ ಕ್ರಮದ ಎಚ್ಚರಿಕೆ ?

ಕಾಂಗ್ರೆಸ್‌ನ ಭಿನ್ನಮತದ ಪಟ್ಟು ಪ್ರತಿಪಟ್ಟು ಅಂತಿಮವಾಗಿ ಉಚ್ಚಾಟನೆಯ ಹಂತ ತಲುಪಿದ್ದು ಮತ್ತೊಮ್ಮೆ ತೀವ್ರ ಕುತೂಹಲ ಕೆರಳಿಸಿದೆ. ಕಳೆದ ವಾರ ಹಿರಿಯ ಕಾಂಗ್ರೆಸ್ಸಿಗ ಡಿ.ಎಸ್.‌ವಿಶ್ವನಾಥ ಶೆಟ್ಟಿ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ಮಂದಿಯನ್ನು ಒಂದೆಡೆ ಕಲೆಹಾಕಿ ನಿಷ್ಟಾವಂತ ಕಾಂಗ್ರೆಸ್‌ ಕಾರ್ಯಕರ್ತರು ಎಂಬ ಹೆಸರಿನಲ್ಲಿ ಸಭೆಯೊಂದನ್ನು ನಡೆಸಿ ಹಾಲಿ ತೀರ್ಥಹಳ್ಳಿ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಕೆಸ್ತೂರು ಮಂಜುನಾಥ್‌ ಸಂಘಟನೆ ವಿಚಾರದಲ್ಲಿ ಅಸಮರ್ಥರು ಎಂಬ ಆರೋಪ ಹೊರಿಸಿ ಅವರ ತಲೆದಂಡಕ್ಕೆ ಆಗ್ರಹಿಸಿದ್ದರು.

ಆದರೆ ಈಗ ಬಂದಿರುವ ವರದಿಗಳ ಪ್ರಕಾರ ಕೆಸ್ತೂರು ತಲೆದಂಡ ಆಗುವ ಬದಲು ಆಗ್ರಹ ಮಾಡಿದ ಡಿ.ಎಸ್.ವಿಶ್ವನಾಥ ಶೆಟ್ಟಿ, ರಹಮತ್‌ ಉಲ್ಲಾ ಅಸಾದಿ, ಸುಶೀಲ ಶೆಟ್ಟಿ ಹಾಗೂ ಸಭೆಯಲ್ಲಿ ಪಾಲ್ಗೊಳ್ಳದಿದ್ದರೂ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ತೀರ್ಥಹಳ್ಳಿ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದ ನಮ್ರತ್‌ ಇವರುಗಳನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಪಕ್ಷದ ಆತಂರಿಕ ಸಭೆಯಲ್ಲಿ ತೀರ್ಮಾನಿಸಿ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೆ ಬ್ಲಾಕ್‌ ಅಧ್ಯಕ್ಷರು ಒಪ್ಪಿಗೆ ಸೂಚಿಸಿದ್ದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಕೂಡ ಬೆಂಬಲಿಸಿ ಪತ್ರ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮೂಲಕ ಪಕ್ಷಕ್ಕೆ ಉಂಟಾಗಿರುವ ತಾತ್ಕಾಲಿಕ ಮುಜುಗರದಿಂದ ಪಾರಾಗುವುದು ಮತ್ತು ಪಕ್ಷ ವಿರೋಧಿ ಚಟುವಟಿಕೆ ಅಥವಾ ಪರೋಕ್ಷವಾಗಿ ಕಿಮ್ಮನೆ ರತ್ನಾಕರ್‌ ಅವರ ನಾಯಕತ್ವಕ್ಕೆ ಸವಾಲು ಎಸೆಯುವಂತಹ ಪ್ರಯತ್ನ ಮಾಡಿದ್ದಲ್ಲಿ ಶಿಕ್ಷೆ ಖಚಿತ ಎಂಬ ಸಂದೇಶ ನೀಡುವುದು ಈ ಕ್ರಮದಲ್ಲಿ ಅಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕುತೂಹಲಕಾರಿ ವಿಷಯವೆಂದರೆ ಡಬಲ್‌ ಇಂಜಿನ್‌ಗಳಲ್ಲಿ ಒಬ್ಬರಾದ ಆರ್.ಎಂ.ಮಂಜುನಾಥ ಗೌಡ ಈ ವಿಚಾರದಲ್ಲಿ ಯಾವ ನಿಲುವು ತಳೆದಿದ್ದಾರೆ ಎಂದು ಬಹಿರಂಗವಾಗಿಲ್ಲ.

ಆದರೆ ಛಲ ಮತ್ತು ಹೋರಾಟಕ್ಕೆ ಹೆಸರಾಗಿರುವ ವಿಶ್ವನಾಥ ಶೆಟ್ಟಿ ಸುಲಭಕ್ಕೆ ಸೋಲನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ವಿರಳವಾಗಿರುವುದರಿಂದ ಈ ನೂತನ ಪ್ರಹಸನ ಮತ್ತಷ್ಟು ರೋಚಕ ತಿರುವುಗಳಿಗೆ ಕಾರಣವಾಗುವ ನಿರೀಕ್ಷೆಯಲ್ಲಿ ಕಾರ್ಯಕರ್ತರು ಇದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post