ಜನವರಿ 12 ; ಬೆಳಿಗ್ಗೆ 9.30ಕ್ಕೆ ಶೃಂಗೇರಿ ಶ್ರೀಗಳಿಂದ ನೂತನ ರಥಗಳಿಗೆ ಮಂತ್ರಾಕ್ಷತೆ

ಜನವರಿ 25 ; ಮೇಳಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಳದ ನೂತನ 2 ರಥಗಳ ಲೋಕಾರ್ಪಣೆ
ರಥ ಸಮಿತಿ ಅಧ್ಯಕ್ಷ ಡಿ.ಜಿ. ಹರೀಶ್ ದಾಸನಕೊಡಿಗೆ

ತೀರ್ಥಹಳ್ಳಿ ತಾಲೂಕು ಮೇಳಿಗೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎರಡು ನೂತನ ರಥಗಳ ಸಮರ್ಪಣಾ ಕಾರ್ಯವು ಜನವರಿ 25 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಕ್ಷೇತ್ರ ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಶ್ರೀ ಜಿ. ಭೀಮೇಶ್ವರ ಜೋಷಿಯವರು ನೆರವೇರಿಸಲಿದ್ದಾರೆ. ಜನವರಿ 12ರ ಸೋಮವಾರ ಬೆಳಿಗ್ಗೆ 9.30ಕ್ಕೆ ನೂತನ ರಥಗಳಿಗೆ ಶೃಂಗೇರಿ ಶ್ರೀಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಅವರಿಂದ ನೂತನ ರಥಗಳಿಗೆ ಮಂತ್ರಾಕ್ಷತೆ ಅರ್ಪಣೆ ಮಾಡಿ ಚಾಲನೆ ನೀಡಲಿದ್ದಾರೆ ಎಂದು ರಥ ನಿರ್ಮಾಣ ಸಮಿತಿಯ ಅಧ್ಯಕ್ಷ ಡಿ.ಜಿ.ಹರೀಶ್ ದಾಸನಕೊಡಿಗೆ ತಿಳಿಸಿದ್ದಾರೆ.

ಮೇಳಿಗೆ ದೇವಸ್ಥಾನದಲ್ಲಿ ಮಾತನಾಡಿದ ಹರೀಶ್, ಪ್ರಾಯಶಃ ಇಡೀ ರಾಜ್ಯದಲ್ಲಿ ಏಕ ಕಾಲದಲ್ಲಿ ಎರಡು ರಥಗಳು ಗ್ರಾಮದಲ್ಲಿ ಸಂಚರಿಸುವುದು ಇದೇ ಪ್ರಥಮ ಇರಬಹುದು. ಸುಮಾರು 350 ವರ್ಷಗಳಿಗೂ ಹೆಚ್ಚಿನ ಇತಿಹಾಸ ಈ ದೇವಳದ ರಥಗಳಿಗೆ ಇವೆ. ಎರಡು ಹಳೆಯ ರಥಗಳ ಬದಲಿಗೆ ಹೊಸ ರಥಗಳ ನಿರ್ಮಾಣವಾಗಬೇಕೆಂಬ ಅಪೇಕ್ಷೆ ದೇವರ ಸನ್ನಿಧಾನದಿಂದಲೇ ಆಗಿದ್ದರಿಂದ ಹೊಸ ರಥಗಳ ನಿರ್ಮಾಣಕ್ಕೆ ಸಮಿತಿ ರಚಿಸಿ ಈ ದಿಸೆಯಲ್ಲಿ ನಿರ್ಮಾಣ ಕಾರ್ಯ ಕಳೆದ ಎರಡು ವರ್ಷಗಳಿಂದ ನಡೆಸಲಾಗಿದೆ ಎಂದಿದ್ದಾರೆ.

ರಥಕ್ಕಾಗಿ ದಾನಿಗಳು ಉತ್ತಮ ಗುಣಮಟ್ಟದ ನಾಟಗಳನ್ನು ನೀಡಿದ್ದಾರೆ. ಉದ್ಯಮಿ ಕುಂಟುವಳ್ಳಿ ವಿಶ್ವನಾಥ್ ಅವರು ರಥಕ್ಕೆ ಅಗತ್ಯವಾದ ಕಬ್ಬಿಣವನ್ನು ಒದಗಿಸಿದ್ದಾರೆ. ಉಳಿದಂತೆ ಗ್ರಾಮದವರು ಆರ್ಥಿಕ ಸಹಾಯ ಒದಗಿಸಿದ್ದಾರೆ. ರಥಗಳ ನಿರ್ಮಾಣದಲ್ಲಿ ಅನುಭವಿಗಳಾದ ಹರಿಹರಪುರದ ಮತ್ವಾನೆಯ ನಾಗರಾಜ್ ಅವರ ನೇತೃತ್ವದ ತಂಡವು ಎರಡು ರಥಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಹಂದಿಗೋಡಿನ ವಿನಾಯಕ ಸೋಮಾಯಾಜಿ ದಂಪತಿ ದೇವಳಕ್ಕೆ ಹೊಸ ಕಂಚಿನ ಕಳಸ ನೀಡಿದ್ದಾರೆ ಎಂದು ಹೇಳಿದ ಹರೀಶ್ ಜನವರಿ 25ರ ಭಾನುವಾರ ಸಂಜೆ ದೇವಳದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರ, ಶಿರಸಿ, ನಿರ್ಮಲಾ ಹೆಗಡೆ ತಂಡದಿಂದ ಶ್ರೀ ಶ್ರೀನಿವಾಸ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗ ಆಯೋಜಿಸಲಾಗಿದೆ ತಿಳಿಸಿದ್ದಾರೆ.

ಮೇಳಿಗೆ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯು ಮುತ್ತೂರು ಸೀಮೆಯ ಆರಾಧ್ಯ ದೈವವಾಗಿದೆ. ಈ ರಥ ಸಮರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಜಿ. ಹರೀಶ್ ವಹಿಸಲಿದ್ದು, ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ತಹಸಿಲ್ದಾರ್ ರಂಜಿತ್ ಕೆ.ಎಸ್., ನೂತನ ರಥ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಕೆ.ಎಂ.ದತ್ತಾತ್ರಿ, ಮಂಜುನಾಥ್ ಭಟ್, ತಂತ್ರಿಗಳು, ರಥದ ಶಿಲ್ಪಿ ನಾಗರಾಜ್ ಆಚಾರ್ಯ, ಅರ್ಚಕ ದತ್ತಾತ್ರಿ ಅಡಿಗ, ಮೇಳಿಗೆ ಗ್ರಾ.ಪಂ. ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ ಮಡಿವಾಳ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದು ರಥ ಸಮಿತಿಯ ಸದಸ್ಯ ಬಿ.ಗಣಪತಿ ಅವರು ಹೇಳಿದರು.

ಸಮಿತಿಯ ಕಾರ್ಯದರ್ಶಿ ಜಿ.ಕೆ. ಶ್ರೀನಿವಾಸ್ ಗರಡೀಗದ್ದೆ, ಸದಸ್ಯರಾದ ಕೆಳಕೆರೆ ದಿವಾಕರ್, ಕುಮಾರಸ್ವಾಮಿ ಉಪಸ್ಥಿತರಿದ್ದರು.

ಟಿ.ಕೆ.ಆರ್.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post