ಬೆಜ್ಜವಳ್ಳಿ ದಾಟಿ ವಿರೂಪಾಪುರ ತಲುಪಿದ ಆನೆಗಳು
ಹೆದ್ದೂರು, ಕೊನೇರಿಪುರ, ಮಹಿಷಿ, ಬೆಜ್ಜವಳ್ಳಿ, ವಿರೂಪಾಪುರ ರೈಟ್... ರೈಟ್...
ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸಿದ್ದ ಎರಡು ಕಾಡಾನೆಗಳು ತಾಲ್ಲೂಕಿನ ಪ್ರವಾಸದಲ್ಲಿದೆ. ಹೆದ್ದೂರಿನಲ್ಲಿ ಸೋಮವಾರ ವಿಶ್ರಾಂತಿ ಪಡೆದು ರಾತ್ರಿ ಸಂಚಾರ ಪುನರ್ ಆರಂಭಿಸಿದೆ. ಬೆಳಿಗ್ಗೆ ಅರಣ್ಯ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಮಹಿಷಿ, ಬೆಜ್ಜವಳ್ಳಿ ಮಾರ್ಗವಾಗಿ ವಿರೂಪಾಪುರ ಗ್ರಾಮಕ್ಕೆ ತೆರಳಿವೆ.
ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರೂಪಾಪುರ ಗ್ರಾಮದಲ್ಲಿ ಆನೆಯ ಹೆಜ್ಜೆಗಳು, ಲದ್ದಿಗಳು ಕಾಣಿಸಿಕೊಂಡಿದ್ದು ಎಲ್ಲಿ ವಿಶ್ರಾಂತಿ ಪಡೆದಿವೆ ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಒಟ್ಟಿನಲ್ಲಿ ಶೇಡ್ಗಾರು ಮಾರ್ಗವಾಗಿ ತೀರ್ಥಹಳ್ಳಿ ಪ್ರವೇಶಿದ ಕಾಡಾನೆ ಇದೀಗ ಮುತ್ತೂರು, ಕಸಬಾ ಹೋಬಳಿ ಮುಗಿಸಿ ಇದೀಗ ಮಂಡಗದ್ದೆ, ಅಗ್ರಹಾರ ಹೋಬಳಿಗಳನ್ನು ಪ್ರವೇಶಿಸಿದೆ. ಮಂಗಳವಾರ ಅಲ್ಲಿ ವಿಶ್ರಾಂತಿ ಪಡೆದ ನಂತರ ಮತ್ತೆಲ್ಲಿ ಹೋಗಲಿದೆ ಎಂದು ಕಾದು ನೋಡಬೇಕಿದೆ. ಶೆಟ್ಟಿಹಳ್ಳಿ ಅಭಯಾರಣ್ಯ ಸೇರಲಿದೆಯಾ ಅಥವಾ ಭದ್ರಾ ಅಭಯಾರಣ್ಯಕ್ಕೆ ಕಳುಹಿಸುವ ಪ್ರಯತ್ನ ನಡೆಯಲಿದೆಯಾ ಎಂಬ ಬಗ್ಗೆ ಇನ್ನಷ್ಟು ಸ್ಪಷ್ಟನೆ ಬೇಕಾಗಿದೆ.

