ಜಾತಿಗಣತಿ ವಿಶೇಷ ಕಲಂ ರಚನೆಗೆ ಆಗ್ರಹ

ಜಾತಿ ಗಣತಿಯಲ್ಲಿ ಕುವೆಂಪು  ಅನುಯಾಯಿಗಳು "ವಿಶ್ವಮಾನವ ಅಥವಾ ಮನುಜಮತ' ಜಾತಿ ಎಂದು ನಮೂದಿಸಿ - ನಿಶ್ಚಲ್ ಜಾದೂಗಾರ್ ಮನವಿ
ರಾಷ್ಟ್ರಕವಿ ಕುವೆಂಪುರವರು ಹುಟ್ಟಿದ ನಾಡಿನಲ್ಲಿ ಜಾತಿ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ/ಗಣತಿ ಸಂದರ್ಭದಲ್ಲಿ ಕುವೆಂಪು ವಿಚಾರದಾರೆಗಳನ್ನು ಒಪ್ಪುವ ನಾವೆಲ್ಲರು ವಿಶೇಷವಾಗಿ ತೀರ್ಥಹಳ್ಳಿ, ಮಲೆನಾಡು ಭಾಗದ ಜನರು ಜಾತಿ ಕಾಲಂನಲ್ಲಿ "ವಿಶ್ವಮಾನವ ಅಥವಾ ಮನುಜಮತ" ಎಂದು ನಮೂದಿಸುವ ಮೂಲಕ ಕುವೆಂಪು ಪರಂಪರೆಯನ್ನು ಉಳಿಸಿ ಕಾಪಾಡಬೇಕು ಎಂದು ಕಲಾವಿದ, ಹೋರಾಟಗಾರ, ಗ್ರಾಂ.ಪಂ. ಸದಸ್ಯರಾದ -ನಿಶ್ಚಲ್ ಜಾದೂಗಾರ್‌ರವರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ರಾಜ್ಯದ, ದೇಶದ ಎಲ್ಲಾ ಧರ್ಮಗಳು ಅದರಲ್ಲೂ ಹಿಂದೂ ಧರ್ಮದ ಉಪಜಾತಿಗಳಲ್ಲಿ "ಜಾತಿವ್ಯಾದಿ" ಹಾಗೂ ಅಂಧಾಭಿಮಾನ ಹೆಚ್ಚಾಗುತ್ತಿದೆ. ಜಾತಿ ಧರ್ಮಗಳ ಸ್ಥಾಪನೆಯ ವಿಭಜನೆಯ ಮೂಲ ಸ್ವರೂಪವನ್ನು, ಧಾರ್ಶನಿಕರ, ಬಸವಾದಿ ಶರಣರ ಮೂಲ ಆಶಯವನ್ನು ಸಂಪೂರ್ಣವಾಗಿ ಮರೆತು ಜಾತಿ-ಜಾತಿಗಳ ನಡುವೆ ದೊಡ್ಡ ಕಂದಕವನ್ನು ಕೆಲ ಪ್ರಬಲ ರಾಜಕಾರಣಿಗಳು, ಸ್ವಾಮೀಜಿಗಳು ತಮ್ಮ ವೈಯಕ್ತಿಕ ಉದ್ದೇಶ ಸ್ಥಾಪನೆಗಾಗಿ ಒಂದು ರೀತಿಯ ಸ್ವಜನ ಹಿತಾಶಕ್ತಿಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಈಗಾಗಲೂ ಕುವೆಂಪು, ಅನಂತಮೂರ್ತಿ, ತೇಜಸ್ವಿ, ಕಡಿದಾಳು ಶಾಮಣ್ಣ ನಾಡಿನವರಾದ ನಾವ್ಯಾರೂ ಬಿಡಬಾರದು. ಮನುಜ ಮತ ಮತ್ತು ವಿಶ್ವಮಾನವ ಎಂಬ ಪರಿಕಲ್ಪನೆಯು ಚಳುವಳಿಯ ರೂಪವಾಗಬೇಕಾಗಿದೆ.

ಕುವೆಂಪು ಹೆಸರಿನಲ್ಲಿ ಹೆಸರು, ವಿದ್ವಾಂಸಕತೆ, ಡಾಕ್ಟರೇಟ್ ಪಡೆದಿರುವ ಅನೇಕ ಪ್ರೊಫೆಸರ್‌ಗಳೇ ಇಂದು ತಮ್ಮ ತಮ್ಮ ಜಾತಿಯ ಸಮಾವೇಶದಲ್ಲಿ ಕನಿಷ್ಟ ಜ್ಞಾನಿಗಳಂತೆ "ಜಾತಿ ಸಂಘಟಣೆ ಮಾಡೋಣ ಬನ್ನಿ" ಎಂಬ ಕರೆ ನೀಡುತ್ತಿರುವುದು ಈ ಜಾತಿ ಸೀಮಿತ ಡಾಕ್ಟರೇಟ್, ಪ್ರೊಫೆಸರ್‌ಗಳಿಗೆ ನಾಚಿಕೆಯಾಗಬೇಕು. ಇದು ಇವರ ಭೌತಿಕ ದಿವಾಳಿತನಕ್ಕೆ ಸಾಕ್ಷಿಯಾಗುವಂತಿದೆ. ರಾಷ್ಟ್ರಕವಿ ಕುವೆಂಪುರವರ “ಹೊಸನಾಡು ಕಟ್ಟೋಣ ಬನ್ನಿ" ಎಂಬ ಧೈಯ ವಾಕ್ಯಕ್ಕೆ ಇಂತಹ ಕೆಲವಾರು ಯೂನಿವರ್ಸಿಟಿ ಪ್ರೊಫೆಸರ್‌ಗಳು ನಮ್ಮ ಜಾತಿಯನ್ನು ಕಟ್ಟೋಣ ಬನ್ನಿ ಎಂದು ಹೇಳುತ್ತಿರುವುದರ ಬಗ್ಗೆ ಕುವೆಂಪು ನಾಡಿನವರಾದ ನಾವು ಮತ್ತೆ ಮತ್ತೆ ಚರ್ಚಿಸಿ ಆಂದೋಲನವನ್ನು ರೂಪಿಸುವ ಸಂದರ್ಭವಾಗಿದೆ.

ಈ ನಿಟ್ಟಿನಲ್ಲಿ ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅನಂತಮೂರ್ತಿ, ರೈತ ಹೋರಾಟಗಾರ ಕಡಿದಾಳು ಶಾಮಣ್ಣ ಅನುಯಾಯಿಗಳು, ಬುದ್ದಿಜೀವಿಗಳು, ಬರಹಗಾರರು, ಚಿಂತಕರೊಂದಿಗೆ ಸರ್ಕಾರ ಚರ್ಚಿಸಿ, 'ವಿಶ್ವಮಾನವ ಅಥವಾ ಮನುಜಮತ' ಎಂಬ ಜಾತಿ ವಿನಾಶದ ಕಾಲಂ ಸೃಷ್ಟಿಸಬೇಕು ಎಂದು ಆಗ್ರಹಿಸುತ್ತೇವೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post