ಚಿತ್ರ ರಸಿಕರ ಗಮನ ಸೆಳೆದ “ಕಮಲ್‌ ಶ್ರೀದೇವಿ” ಸಿನಿಮಾ

ತೀರ್ಥಹಳ್ಳಿ ಅಳಿಯ ಸಚಿನ್‌ ಚಲುವರಾಯಸ್ವಾಮಿ, ಸಂಗೀತ ಭಟ್‌ ಮನೋಜ್ಞ ಅಭಿನಯ
ಸೂಕ್ಷ್ಮ ಕಥೆಯನ್ನು ಜವಾಬ್ದಾರಿಯುತವಾಗಿ ತೆರೆಗೆ ತಂದ ನಿರ್ದೇಶಕ

ಕಳೆದ ವಾರ ಬಿಡುಗಡೆಯಾಗಿರುವ ‘ಕಮಲ್‌ ಶ್ರೀದೇವಿ’ ಒಂದು ಒಂದು ಇಡೀ ಕುಟುಂಬ ನೋಡಬಹುದಾದ ಸಸ್ಪೆನ್ಸ್‌ ಥ್ರಿಲ್ಲರ್‌ ಎಂಬ ಮೆಚ್ಚುಗೆಗೆ ಪಾತ್ರವಾಗಿ ಕನ್ನಡ ಚಿತ್ರ ರಸಿಕರು ಮತ್ತು ಚಿತ್ರೋದ್ಯಮಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಈ ಸಿನಿಮಾ ಹಾಗೂ ತೀರ್ಥಹಳ್ಳಿಗೂ ಭಾವನಾತ್ಮಕ ನಂಟಿದೆ. ಚಿತ್ರದ ನಾಯಕ ಸಚಿನ್‌ ಚಲುವರಾಯಸ್ವಾಮಿ ತೀರ್ಥಹಳ್ಳಿಯ ಅಳಿಯ. ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಇಲ್ಲಿಗೆ ಸಮೀಪದ ಹಿರಿಯ ಮುಖಂಡ ಪಟಮಕ್ಕಿ ವಿಶ್ವನಾಥರ ಮಗಳನ್ನೇ ಸಚಿನ್‌ ವಿವಾಹವಾಗಿದ್ದಾರೆ. ಇದಲ್ಲದೆ ಹಿರಿಯ ಸಹಕಾರಿ ಸಿ.ಕೆ.ಪ್ರಸನ್ನ ಕುಮಾರ್‌ ಅವರಿಗೂ ಕೂಡ ಸಂಬಂಧದಲ್ಲಿ ಅಳಿಯನಾಗುತ್ತಾರೆ. ಹಾಗಾಗಿ ತೀರ್ಥಹಳ್ಳಿಯಲ್ಲೂ ಕೂಡ ಈ ಸಿನಿಮಾ ಹಾಗೂ ಸಚಿನ್‌ ನಟನೆ ಕುರಿತು ಕುತೂಹಲವಿದ್ದು ನೋಡಿದ ಚಿತ್ರ ರಸಿಕರಲ್ಲಿ ಸಚಿನ್‌ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯುವ ನಿರ್ದೇಶಕ ಸುನೀಲ್‌ ಕುಮಾರ್ ಒಂದು ಸವಾಲಿನ ಕಥೆಯನ್ನು ಯಶಸ್ವಿಯಾಗಿ ತೆರೆಮೇಲೆ ಮೂಡಿಸುವಲ್ಲಿ ಗೆದ್ದಿದ್ದಾರೆ. ಹಣದ ಅನಿವಾರ್ಯತೆ ಇರುವ ಅಸಹಾಯಕ ಮಹಿಳೆಯೊಬ್ಬಳು ವೇಶ್ಯಾವಾಟಿಕೆಗೆ ಬರುತ್ತಾಳೆ. ಒಂದೇ ದಿನದಲ್ಲಿ 70 ಸಾವಿರ ರೂಪಾಯಿ ಹೊಂದಿಸಬೇಕಾದ ಅನಿವಾರ್ಯತೆ ಆಕೆಗೆ ಇರುತ್ತದೆ. ಅದಕ್ಕಾಗಿ ಅವಳು ಆ ದಿನ 6ರಿಂದ 7 ಗಿರಾಕಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಆದರೆ ಇನ್ನೇನು ಹಣ ಸಿಕ್ಕಿತು ಎಂಬಷ್ಟರಲ್ಲಿ ಆಕೆಯ ಕೊಲೆ ಆಗಿಬಿಡುತ್ತದೆ! ಬಂದು ಹೋದ 7 ಜನರಲ್ಲಿ ಕೊಲೆ ಮಾಡಿದವರು ಯಾರು ಈ ಚಿತ್ರದ ಒಂದು ಲೈನ್ ಸ್ಟೋರಿ. ಈ ನಡುವೆ ಚಿತ್ರ ನಿರ್ದೇಶಕನಾಗಿರುವ ನಾಯಕ ಕೂಡ ಆಕೆಗೆ ಹಣ ನೀಡುತ್ತಾನೆ. ಆದರೆ ಆಕೆಯ ಅಸಹಾಯಕತೆ ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳಲು ಹೋಗುವುದಿಲ್ಲ. ಇಡೀ ಚಿತ್ರ ನಾಯಕಿ ಅನಿವಾರ್ಯ ಅಸಹಾಯಕತೆ ಮತ್ತು ನಾಯಕನ ಚಡಪಡಿಕೆಯ ಸುತ್ತ ಸಾಗುತ್ತದೆ. ಸ್ವಲ್ಪ ಮೈಮರೆತರು ಅಶ್ಲೀಲವಾಗಬಹುದಾದ ಈ ಕಥೆಯನ್ನು ಸುನಿಲ್‌ ಕುಮಾರ್‌ ನಿರೂಪಿಸಿರುವ ರೀತಿ ಅವರ ನಿರ್ದೇಶನ ಸಾಮಥ್ಯಕ್ಕೆ ಕನ್ನಡಿಯಂತಿದೆ.

ಅದಕ್ಕೆ ಪೂರಕವಾಗಿ ನಾಯಕ ಸಚಿನ್‌ ಸವಾಲಿನ ಪಾತ್ರವನ್ನು ಸರಾಗವಾಗಿ ನಿರ್ವಹಿಸಿದ್ದರೆ ಸರಿಸಾಟಿಯಾಗಿ ನಾಯಕಿ ಸಂಗೀತ ಭಟ್‌ ಅಪರೂಪದ ಅವಕಾಶವನ್ನು ಸೊಗಸಾಗಿ ಬಳಸಿಕೊಂಡು ತನ್ನ ನಟನಾ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ನಟ ಕಿಶೋರ್ ಅವರು ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಾಘು ಶಿವಮೊಗ್ಗ ಅವರು ಕೂಡ ಪೊಲೀಸ್ ಪಾತ್ರದಲ್ಲಿದ್ದಾರೆ. ರಮೇಶ್ ಇಂದಿರಾ ಗಮನ ಸೆಳೆಯುತ್ತಾರೆ.

ವಿಶೇಷವೆಂದರೆ ಚಿತ್ರದ ಕಮಲ್‌ ಶ್ರೀದೇವಿ ಎನ್ನುವ ಹೆಸರೇ ಕುತೂಹಲ ಮೂಡಿಸುತ್ತದೆ. ಏಕೆಂದರೆ ಇದು ಕಮಲ್‌ ಹಾಸನ್‌ ಮತ್ತು ಶ್ರೀದೇವಿ ಎಂಬ ಭಾರತೀಯ ಚಲನಚಿತ್ರ ದಿಗ್ಗಜರ ನೆನಪು ತರುತ್ತದೆ. ಆದರೆ ಅವರಿಬ್ಬರ ಹೆಸರಿಗೂ ಚಿತ್ರಕ್ಕೂ ಸಂಬಂಧವಿಲ್ಲ. 

ನಿರ್ಮಾಣ : ಬಿ.ಕೆ.ಧನಲಕ್ಷೀ
ಚಿತ್ರ : ಕಮಲ್‌ ಶ್ರೀದೇವಿ
ತಾರಾಗಣ: ಸಚಿನ್‌ ಚಲುವರಾಯಸ್ವಾಮಿ, ಸಂಗೀತಾ ಭಟ್‌, ಕಿಶೋರ್‌ ಕುಮಾರ್
ನಿರ್ದೇಶನ : ಸುನೀಲ್‌ ಕುಮಾರ್ ವಿ ಎ
ಛಾಯಾಗ್ರಹಣ : ನಾಗೇಶ್ ಆಚಾರ್ಯ 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post