ತೀರ್ಥಹಳ್ಳಿಗೆ ಆನೆ ಆಘಾತ

ಅಭಿವೃದ್ಧಿಗೆ ಆನೆ ನಡೆವ ದಾರಿಗೆ ಕತ್ತರಿ
ಮೃಗಾವಧೆ ಸಮೀಪ ಜೋಡಿ ಆನೆಗಳು...
ತೀರ್ಥಹಳ್ಳಿ ತಾಲ್ಲೂಕು ಅಭಯಾರಣ್ಯದ ನಡುವಿನ ಪುಟ್ಟ ಹಳ್ಳಿಯಂತಿದ್ದು ಆನೆಗಳ ಓಡಾಟ ಹಳ್ಳಿಯನ್ನೇ ನುಂಗಲಿದೆಯಾ ಎಂಬ ಆತಂಕ ಸೃಷ್ಟಿಯಾಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ತೀರ್ಥಹಳ್ಳಿ ತಾಲ್ಲೂಕಿಗೆ ಮೇಲಿಂದ ಮೇಲಾಗಿ ಆನೆಗಳು ಕಾಲಿಡುತ್ತಿರುವುದನ್ನು ಗುರುತಿಸಬಹುದಾಗಿದೆ.
ಶೆಟ್ಟಿಹಳ್ಳಿ ಅಭಯಾರಣ್ಯ, ಭದ್ರಾ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮೂಕಾಂಬಿಕ ಅಭಯಾರಣ್ಯ, ಸೋಮೇಶ್ವರ ಅಭಯಾರಣ್ಯ, ಶರಾವತಿ ಅಭಯಾರಣ್ಯ ಸೇರಿದಂತೆ ಸುತ್ತಮುತ್ತಲು ವನ್ಯಜೀವಿ ಅರಣ್ಯ ಪ್ರದೇಶಗಳು ಒಳಗೊಂಡಿದೆ. ಇದಕ್ಕೆ ಸರಿ ಹೊಂದುವಂತೆ ಈಗಾಗಲೇ ಅರಣ್ಯ ಪ್ರದೇಶ ಅಕ್ರಮ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಿದಂತೆ ರೈತಾಪಿ ವರ್ಗಗಳ ಜೀವನ ದುಸ್ಥರವಾಗುತ್ತಿದೆ.
ಆಗುಂಬೆ ಕುದುರೆಮಖ ಶೋಲಾ ಕಾಡುಗಳ ನಡುವೆ ಸಂಚಾರ ಹೊಂದಿದ್ದ ಆಗುಂಬೆಯ ಒಂಟಿ ಸಲಗದ ದಾರಿಯನ್ನು ಶೃಂಗೇರಿಯಲ್ಲಿ ಬದಲಾಯಿಸಲಾಗಿತ್ತು. ಆದರ ಮಾರ್ಗ ಬದಲಾಗುತ್ತಿದ್ದಂತೆ ದಿಕ್ಕಾಪಾಲದ ಆನೆ ಬೇಗಾರು-ಹೊಳೆಕೊಪ್ಪ ಸಮೀಪ ಕಾಣಿಸಿಕೊಂಡಿತ್ತು. ಅದಾದ ಬಳಿಕ ಆಗುಂಬೆಯ ತನ್ನ ದಾರಿಯನ್ನು ಬಿಟ್ಟು ಹೊಸ ದಾರಿಯನ್ನು ಬಳಸಿಕೊಂಡು ಆನೆ ಸಂಚಾರ ನಡೆಸಿತ್ತು. ಈಚೆಗೆ ಮುಡುಬ ಸಮೀಪದ ಬಂದ ಆನೆ ತೂದೂರು ಮಾರ್ಗವಾಗಿ ಕೋಣಂದೂರು, ಆರಗ, ಕೊಂಡ್ಲೂರು ದಾರಿಯಲ್ಲಿ ಚಲಿಸಿ ಬೈಂದೂರಿಗೆ ಹೋಗಿತ್ತು. ಕಣಿವೆ ಸಮೀಪ ಆಗಾಗ ಭದ್ರಾ ಅಭಯಾರಣ್ಯದ ಪ್ರದೇಶದಿಂದ ಹೊಸಹಳ್ಳಿ ತನಕವು ಆಗಮಿಸಿತ್ತು. ಕಳೆದ ವರ್ಷ ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಗೆ ಬಂದು ದೇವಂಗಿಯ ಕಿರು ಅರಣ್ಯ ಪ್ರದೇಶವನ್ನು ಸೇರಿಕೊಂಡಿತ್ತು. ಮೂಗುಡ್ತಿ, ಯಡೂರು ಭಾಗಗಳಲ್ಲಿಯೂ ಆನೆಗಳು ಆಗಾಗ ಕಾಣಿಸಿಕೊಂಡಿದೆ.
ಇದೀಗ ಮೃಗಾವಧೆಯ ಸಮೀಪದ ಶೇಡ್ಗಾರು-ಕೌರಿ ಬಳಿ ಎರಡು ಆ‌ನೆಗಳು ಬಂದಿದೆ‌. ಕೊಪ್ಪದಲ್ಲಿ ಕಾಣಿಸಿಕೊಂಡಿದ್ದ ಆನೆ ಈಗ ಮಕ್ಕಿಮನೆ, ಬಂಡಿಗಡಿ ಮಾರ್ಗವಾಗಿ ತೀರ್ಥಹಳ್ಳಿಯ ಅಂಚಿನ ಗ್ರಾಮಗಳಿಗೆ ಲಗ್ಗೆ ಇಟ್ಟಿವೆ. ಈಗಾಗಲೇ ಪಟಾಕಿ ಸಿಡಿಸುವ ತಂತ್ರಗಾರಿಕೆ ನಡೆಯುತ್ತಿದ್ದು ಆನೆ ಇನ್ನೆಲ್ಲಿ ಓಡಿ ಹೋಗಲಿದೆ ಎಂಬ ಆತಂಕ ಗ್ರಾಮಗಳಲ್ಲಿ ಸೃಷ್ಟಿಯಾಗಿದೆ. 
ಒಟ್ಟಿನಲ್ಲಿ ತೀರ್ಥಹಳ್ಳಿ ಪಟ್ಟಣ ಸುತ್ತುವರಿದು ಆನೆಗಳು ತಮ್ಮ ಆವಾಸ ಸ್ಥಾನವನ್ನು ಮರು ರೂಪಿಸಿಕೊಳ್ಳುತ್ತಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಆನೆಗಳು ತೀರ್ಥಹಳ್ಳಿಯ ಸುತ್ತಲು ನಿತ್ಯ ಓಡಾಟ ಮಾಡಿದರು ಅಚ್ಚರಿ ಪಡಬೇಕಿಲ್ಲ. ಆನೆ, ಹುಲಿ, ಕಾಳಿಂಗ, ಚಿರತೆ, ಕಾಡುಕೋಣ, ಹಂದಿ, ಕುರ್ಕ ಮುಂತಾದ ಪ್ರಾಣಿಗಳಿಂದ ರೈತಾಪಿ, ಜನಜೀವನ ಅಲ್ಲೋಲ ಕಲ್ಲೋಲ ಆಗುವ ಸಾಧ್ಯತೆ ಹೆಚ್ಚಳವಾಗುತ್ತಿದೆ.‌
ಸಕಲೇಶಪುರ ಭಾಗದಲ್ಲಿ ಆನೆ ಕಾರಿಡಾರ್ ಕಡಿದು ದೊಡ್ಡ ಅಭಿವೃದ್ಧಿ ಯೋಜನೆಗಳು ಜಾರಿಯಾಗಿದ್ದವು. ರೈಲ್ವೆ, ರಸ್ತೆಯ ಮಾರ್ಗಗಳು ಆದಂತೆ ಪ್ರಾಣಿಗಳ ನಿತ್ಯ ಓಡಾಟಕ್ಕೆ ತೊಂದರೆಯಾಗುತ್ತಿದ್ದವು. ಅದಾದ ಬಳಿಕ ಇದೀಗ ಅದೇ ರೀತಿಯ ಯೋಜನೆಗಳು ಶೃಂಗೇರಿ ಭಾಗದಲ್ಲಿ ನಡೆಯುತ್ತಿದ್ದು ಪ್ರಾಣಿಗಳ ದಾರಿ ಬದಲಾಗುತ್ತಿದೆ‌.‌ ಜೊತೆಗೆ ಅವುಗಳ ಆವಾಸಸ್ಥಾನ ಬದಲಾವಣೆ ಮಾನವ ಪ್ರಾಣಿ ಸಂಘರ್ಷವನ್ನು ಹೆಚ್ಚಿಸುತ್ತಿದೆ‌.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post