ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್ ಉಲ್ಲಾ ಅಸಾದಿ ರಾಜೀನಾಮೆ ವಾಪಾಸ್ಸು
ರಾಜೀನಾಮೆ ಕೊಟ್ಟ ಮೇಲು ಸ್ವಪಕ್ಷದವರೇ ಬೆಂಬಲಿಸಿಲ್ಲ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್ ಉಲ್ಲಾ ಅಸಾದಿ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಮಂಗಳವಾರ ಸಂಜೆ ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ಸೆಪ್ಟೆಂಬರ್ 15 ರಂದು ರಾಜೀನಾಮೆ ಸಲ್ಲಿಸಿದ್ದೇನೆ. ಅದಾದ ಮೇಲು ಸೆಪ್ಟೆಂಬರ್ 20 ರಂದು ಅವಿಶ್ವಾಸ ನಿರ್ಣಯವನ್ನು ಸ್ವಪಕ್ಷದ 6 ಸದಸ್ಯರು ಚಲಾವಣೆಗೆ ತಂದಿದ್ದಾರೆ.
ರಾಜೀನಾಮೆ ನೀಡಿದ ನಂತರವು ಪೌರ ಕಾರ್ಮಿಕರ ಸಭೆ, ದಸರಾ ಸಭೆಗೆ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿಲ್ಲ. ಕಾನೂನು ಅಡ್ಡಿಯಾಗುವ ಹಿನ್ನಲೆಯಲ್ಲಿ ಬಂದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಸೋಮವಾರ ನಡೆದ ಕುರುವಳ್ಳಿಯ ಆಟೋ ನಿಲ್ದಾಣ ಉದ್ಘಾಟನೆ, ಡಾ.ಟಿ.ನಾರಾಯಣಸ್ವಾಮಿ ಸಭಾಂಗಣ, ಪೆಡ್ ಲೈಟ್ ವಾಲಿಬಾಲ್ ಕೋರ್ಟ್ ಉದ್ಘಾಟನೆಗೂ 6 ಸದಸ್ಯರು ಬಂದಿಲ್ಲ. ಹಾಗಾದರೆ ಅವರಿಗೆ ನಾನೇನು ಮಾಡಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
"ನನ್ನನ್ನು ಹೆದರಿಸಿ ಅಧ್ಯಕ್ಷ ಸ್ಥಾನದಿಂದ ಇಳಿಸಲು ಆಗಲ್ಲ". ಹಾಗೆ ಮಾಡುವುದಾದರೆ ಅವಿಶ್ವಾಸ ಮೇಲುಗೈ ಸಾಧಿಸಲಿ. ನನಗೆ ಅಧ್ಯಕ್ಷ ಸ್ಥಾನದ ಮೇಲೆ ವ್ಯಾಮೋಹ ಇಲ್ಲ. ನಾನು ಈಗಾಗಲೇ ತಂದಿರುವ ಕಾಮಗಾರಿಗಳನ್ನು ಚಾಲನೆ ಮಾಡಬೇಕಿದೆ. ಅದಕ್ಕೆ ಸ್ವಲ್ಪ ಸಮಯಾವಕಾಶ ಕೇಳಿದ್ದೇನೆ. ಆದರೆ ಅದಕ್ಕೂ ಅವಕಾಶ ಕೊಡದಿದ್ದರೆ ನಾನೇನು ಮಾಡಬೇಕು. ನನ್ನ ತೀರ್ಥಹಳ್ಳಿಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿದ್ದೇನೆ. ನನಗೆ ಲಂಗು, ಲಗಾಮು ಹಾಕಿ ಹಿಂದೆ ಎಳೆಯುವ ಪ್ರಯತ್ನಕ್ಕೆ ನಾನು ಸೆಡ್ಡು ಹೊಡೆಯಲೇಬೇಕಾದ ಅನಿವಾರ್ಯತೆ ಇದೆ ಎಂದು ಬೇಸರಿಸಿದ್ದಾರೆ.
ನಾನೊಬ್ಬ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯವನ್ನು ನನ್ನ ಮೇಲೆ ಪ್ರಯೋಗಿಸಿದ್ದಾರೆ. ಇದು ತೀರ್ಥಹಳ್ಳಿಯ ಕಾರ್ಯಕರ್ತರಿಗೆ ಒಂದು ಪಾಠ ಎಂಬುದು ಸುಳ್ಳು. ಈ ಹಿಂದೆ ಅವಿಶ್ವಾಸ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಮೌನ ವಹಿಸಿದ್ದರು. ಪಕ್ಷದ ನಿರ್ಧಾರಗಳಿಗೆ ಇಂದಿಗೂ ನಾನು ಬದ್ಧನಾಗಿದ್ದೇನೆ. ಪಕ್ಷದಲ್ಲಿ ಇರಲಿ ಬಿಡಲಿ ನಾನು ಇನ್ನು ಮುಂದೆ ಕಾಂಗ್ರೆಸ್ಸಿಗ. ಇವೆಲ್ಲದರ ಕುರಿತು ಪೂರ್ಣ ಮಾಹಿತಿಯನ್ನು ಸೆಪ್ಟೆಂಬರ್ 25ಕ್ಕೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸುತ್ತೇನೆ ಎಂದು ನೆಲದ ಧ್ವನಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.