ಹೆದ್ದೂರು ನಾಗೇಂದ್ರ ನೇತೃತ್ವ : ಅಕ್ಟೋಬರ್‌ 12ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನ

ʼಡಿʼ ವೃಂದಕ್ಕೆ ರಾಷ್ಟ್ರವ್ಯಾಪಿ ಸಮಾನ ವೇತನ, ವೈದ್ಯಕೀಯ ಭತ್ಯೆಗೆ ಒತ್ತಾಯ
ಎಲ್ಲಾ ಸರ್ಕಾರಿ ಕಚೇರಿಯ ಗುತ್ತಿಗೆ ಆಧಾರಿತ ನೌಕರರನ್ನು ಖಾಯಂಗೊಳಿಸಿ

ಸರ್ಕಾರಿ ಇಲಾಖಾ ಆಡಳಿತ ವ್ಯವಸ್ಥೆ ಸರಾಗವಾಗಿ ನಡೆದುಕೊಂಡು ಹೋಗಲು ಡಿ ಗ್ರೂಪ್‌ ನೌಕಕರ ಪಾತ್ರ ಬಹಳ ಮುಖ್ಯ. ಆದರೆ ಈಗಿನ ಸನ್ನಿವೇಶದಲ್ಲಿ ಇಡೀ ದೇಶದಲ್ಲಿಯೇ ಡಿ ಗ್ರೂಪ್‌ ಹುದ್ದೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಇದು ಆಡಳಿತಕ್ಕೆ ಮಾರಕ. ಈ ಕುರಿತು ಡಿ ಗ್ರೂಪ್‌ ನೌಕರರು ರಾಷ್ಟ್ರವ್ಯಾಪಿ ಚಳುವಳಿಗೆ ಮುಂದಾಗಬೇಕು ಎಂದು ಅಖಿಲ ಭಾರತ ಡಿ ಗ್ರೂಪ್‌ ನೌಕರರ ಕೇಂದ್ರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ನಾಗೇಂದ್ರ ಹೆದ್ದೂರು ಹೇಳಿದ್ದಾರೆ.

ಇತ್ತೀಚೆಗೆ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ನಡೆದ ಸನ್ಮಾನ ಸಭೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ತಮಿಳುನಾಡಿನಲ್ಲಿ ಇದೇ ಸಮಸ್ಯೆ ಎದುರಾದಾಗ ತಮ್ಮ ನೇತೃತ್ವದ ಪ್ರಯತ್ನದಲ್ಲಿ ಹೋರಾಟ ಮಾಡಿದರ ಫಲವಾಗಿ 31 ಸಾವಿರ ಡಿ ಗ್ರೂಪ್‌ ಹುದ್ದೆ ಮಂಜೂರಾಗಿದೆ. ಈ ಪ್ರಯತ್ನ ಬೇರೆ ರಾಜ್ಯಗಳಲ್ಲಿಯೂ ನಡೆಯಬೇಕಿದೆ. ಅಕ್ಟೋಬರ್‌ 10 ರಂದು ಚೆನೈನಲ್ಲಿ ಈ ಕುರಿತು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಾಗೇಂದ್ರ ಹೇಳಿದ್ದಾರೆ.

ಕೇಂದ್ರ ಸರ್ಕಾರದ ನೌಕರರಂತೆ ಎಲ್ಲಾ ರಾಜ್ಯಗಳಲ್ಲಿಯೂ ಡಿ ಗ್ರೂಪ್‌ ನೌಕರರಿಗೆ ಸಮಾನ ವೇತನ ವೈದ್ಯಕೀಯ ಭತ್ಯೆ ಸೇರಿದಂತೆ ಎಲ್ಲಾ ಸೌಲಭ್ಯಗಳು ದೊರಕಬೇಕು. ಖಾಸಗಿ ಸಂಸ್ಥೆಗಳ ಗುತ್ತಿಗೆ ನೇಮಕಾತಿಯನ್ನು ರದ್ದುಗೊಳಿಸಿ ಸರ್ಕಾರವೆ ಡಿ ಗ್ರೂಪ್‌ ನೌಕರರನ್ನು ನೇಮಕ ಮಾಡಿಕೊಳ್ಳಬೇಕು. ಅಲ್ಲದೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಆಧಾರಿತ ನೌಕರರನ್ನು ಕೂಡ ಖಾಯಂಗೊಳಿಸಿ ಸರ್ಕಾರಿ ನೌಕರರೆಂದು ಘೋಷಣೆ ಮಾಡಬೇಕು. ವಿದ್ಯಾರ್ಹತೆಗೆ ಅನುಗುಣವಾಗಿ ಬಡ್ತಿ ನೀಡಬೇಕು. ರಾತ್ರಿ ಕಾವಲುಗಾರರು, ಕ್ಲೀನರ್‌ ಹುದ್ದೆಗಳಿಗೆ ಡಿ ವರ್ಗದ ನೌಕರರನ್ನು ಭರ್ತಿ ಮಾಡುವಂತೆ ಅವರು ಆಗ್ರಹಿಸಿದ್ದಾರೆ.

ಇದಲ್ಲದೇ ಕಂದಾಯ ಇಲಾಖೆಯಲ್ಲಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗುತ್ತಿಗೆ ಆಧಾರಿತ ನೌಕರರು, ಅಂಗನವಾಡಿ ಕಾರ್ಯಕರ್ತೆ ಹಾಗೂ ಶಿಕ್ಷಕಿಯರು, ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು ಕೂಡ ನಾಲ್ಕು ದಶಕಗಳ ಕಾಲ ಸೇವೆಯ ನಂತರವು ಡಿ ಗ್ರೂಪ್‌ಗೆ ಸೇರಿಸದೆ ನಿರ್ಲಕ್ಷಿಸಲಾಗುತ್ತಿದೆ. ಅವರನ್ನು ಖಾಯಂಗೊಳಿಸಬೇಕು.

ತಮಿಳುನಾಡಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಅಧ್ಯಕ್ಷರು ನನಗೆ ವಹಿಸಿದ್ದು ಯಶಸ್ವಿಗೊಳಿಸಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್‌ 12 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ಈ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಪ್ರಮುಖರು ಭಾಗವಹಿಸುತ್ತಿದ್ದಾರೆ ಎಂದರು.

ಅಖಿಲ ಭಾರತ ʼಡಿʼ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ರಾಷ್ಟ್ರದ ಅಧ್ಯಕ್ಷ ಗಣೇಶನ್ , ಉಪಾಧ್ಯಕ್ಷ ಆಂಧ್ರಪ್ರದೇಶದ ವೆಂಕಟೇಶವಾರು, ತಮಿಳುನಾಡಿನ ಎಸ್.ಮತ್ತುರಾಂ, ಪಿ.ಮುನಿಯಪ್ಪನ್, ಬಿ.ಎಂ.ನಟರಾಜ್, ಸರೋಜಮ್ಮ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post