ಉದಯಕುಮಾರ್ ಟಿ,
ಕರಿಮನೆ ರಾಘವೇಂದ್ರ ಭಟ್, ನವೀನ್ ಯತಿರಾಜ್ ಹೇಳಿಕೆಯಲ್ಲಿ ಹುರುಳಿಲ್ಲ
ಮ್ಯಾಮ್ಕೋಸ್ ಪ್ರಾಮಾಣಿಕ ವ್ಯವಹಾರ ನಡೆಸುತ್ತಿದೆ - ಹುಲ್ಕುಳಿ ಮಹೇಶ್
ಎಪಿಎಂಸಿ ಆವರಣದಲ್ಲಿರುವ
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದ (ಮ್ಯಾಮ್ಕೋಸ್) ಸಭಾಂಗಣದಲ್ಲಿ ಸೋಮವಾರ ಮ್ಯಾಮ್ಕೋಸ್ ಉಪಾಧ್ಯಕ್ಷ
ಹುಲ್ಕುಳಿ ಮಹೇಶ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸಂಸ್ಥೆಯ ವಿರುದ್ಧ ಉದಯಕುಮಾರ್ ಟಿ ತೀರ್ಥಹಳ್ಳಿ,
ಕರಿಮನೆ ರಾಘವೇಂದ್ರ ಭಟ್ ಮತ್ತು ನವೀನ್ ಯತಿರಾಜ್ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಕೆಲವರ
ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಬಾಲಿಶವಾದ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಮ್ಯಾಮ್ಕೋಸ್‌ನಲ್ಲಿ
ಗುಣಮಟ್ಟದ ಅಡಕೆಗೆ ಅತ್ಯುತ್ತಮ ಧಾರಣೆ ಸಿಗುತ್ತಿದೆ. ಕಳಪೆ ದರ್ಜೆಯ ಅಡಕೆಗೆ ಉತ್ತಮ ಧಾರಣೆ ಸಿಗಲು
ಸಾಧ್ಯವಿಲ್ಲ. ಗುಣಮಟ್ಟ ಪರಿಶೀಲನೆಗಾಗಿ ಯಂತ್ರ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಕೆಲವರು ಪತ್ರಿಕಾ
ಹೇಳಿಕೆಗಳ ಮೂಲ ರಾಜಕೀಯ ದುರುದ್ದೇಶಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ. ಕಲ್ಲುಗೋಟು ಅಡಕೆಯನ್ನು ರಾಶಿ
ಇಡಿ ಜತೆ ಮಿಶ್ರಣ ಮಾಡದೆ ಪ್ರತ್ಯೇಕವಾಗಿ ಮಾರಾಟ ಮಾಡಲು ಅವಕಾಶ ಇದೆ. ಇದು ಗುಣಮಟ್ಟ ಕಾಪಾಡಲು ಸಹಕಾರಿಯಾಗಿದೆ.
ರೈತರು ಅಡಿಕೆ ವರ್ಗೀಕರಿಸಿ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಕೋರಿದರು.
ಅಡಕೆ ಬೆಳೆಯುವ ರೈತರ
ಹಿತ ಕಾಪಾಡುವುದು ಮ್ಯಾಮ್ಕೋಸ್ ಸಂಸ್ಥೆ ಮುಖ್ಯ ಉದ್ದೇಶವಾಗಿದೆ. ಸಂಸ್ಥೆ ರೈತಸ್ನೇಹಿ ಯೋಜನೆ
ರೂಪಿಸಿದ ಹೆಗ್ಗಳಿಕೆ ಹೊಂದಿದೆ. ಯಾವುದೇ ಲೋಪ ಎಸಗದೆ ಪ್ರಾಮಾಣಿಕ ವ್ಯವಹಾರ ಹೊಂದಿರುವ ಸಂಸ್ಥೆಗೆ
ಷೇರುದಾರ ಸದಸ್ಯರ ಆರ್ಶೀವಾದ ಇದೆ. ಗುಣಮಟ್ಟದ ಅಡಕೆಗೆ ಸಂಸ್ಥೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ಸಂಸ್ಥೆ ಅಡಿಕೆ ಬೆಳೆಗಾರರ
ಅನುಕೂಲಕ್ಕಾಗಿ ಸ್ಪರ್ಧಾತ್ಮಕ ದರದಲ್ಲಿ ಮೈಲುತುತ್ತ, ರಾಳ, ಸುಣ್ಣ, ಡೋಲೋಮೈಟ್ ಸುಣ್ಣ, ಸಾವಯವ
ಗೊಬ್ಬರ ರೈತರಿಗೆ ನೀಡಲಾಗುತ್ತಿದೆ. ಅಸ್ತ್ರ ಒಲೆ,
ಡ್ರೈಯರ್, ಸ್ಪ್ರೇಯರ್ ಯಂತ್ರಕ್ಕೆ ಸಹಾಯಧನ, ಷೇರುದಾರ ಸದಸ್ಯ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ
5 ಸಾವಿರ ರೂಪಾಯಿ, ಮರಣೋತ್ತರ ನಿಧಿ, ಕೃಷಿ ಕಾರ್ಮಿಕರಿಗೆ ಗುಂಪುವಿಮೆ, ಷೇರುದಾರ ಸದಸ್ಯರಿಗೆ ಆರೋಗ್ಯ
ವಿಮೆ, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ಸೇರಿದಂತೆ ಅನೇಕ ಉಪಯುಕ್ತ ಯೋಜನೆಗಳನ್ನು ನೀಡುತ್ತಿದೆ
ಎಂದರು.
ಕಳೆದ ವಾರ್ಷಿಕ ಅವಧಿಯಲ್ಲಿ
ಶೇಕಡಾ 5 ರಂತೆ 40 ಕೋಟಿ ರೂಪಾಯಿ ಜಿಎಸ್‌ಟಿ ಸಂಸ್ಥೆ ಪಾವತಿಸಿದೆ.
ಎಪಿಎಂಸಿ ಸೆಸ್ 4 ಕೋಟಿ ರೂಪಾಯಿ ಪಾವತಿಸಿದ್ದೇವೆ. ಜಿಎಸ್‌ಟಿ ರಿಯಾಯಿತಿ ನೀಡುವಂತೆ ಕೇಂದ್ರ ಸರಕಾರಕ್ಕೆ
ಸಂಸ್ಥೆ ಮನವಿ ನೀಡಿದೆ. ಮ್ಯಾಮ್ಕೋಸ್ ಚುನಾವಣೆಯನ್ನು ಕ್ಷೇತ್ರವಾರು ನಿಗಧಿಪಡಿಸಲು ಷೇರುದಾರರಿಂದ
ಯಾವುದೇ ಪ್ರಸ್ತಾವನೆ ಬಂದಿಲ್ಲ. ಪ್ರಸಕ್ತ ಅವಧಿಯಲ್ಲಿ ಕ್ಷೇತ್ರವಾರು ಚುನಾವಣೆ ಅಸಾಧ್ಯ. ಕ್ಷೇತ್ರವಾರು
ಚುನಾವಣೆ ಕುರಿತಂತೆ ಸರ್ವಸದಸ್ಯರ ಸಭೆ ಒಪ್ಪಿಗೆ ನಂತರ ಸರಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ
ಮ್ಯಾಮ್ಕೋಸ್ ನಿರ್ದೇಶಕರಾದ ಸಿ.ಬಿ.ಈಶ್ವರ್, ಬಿಳಗಿನಮನೆ ರತ್ನಾಕರ್, ಜಯಶ್ರಿ ಇದ್ದರು.