ಅರಣ್ಯ ಇಲಾಖೆ ಕಿರುಕುಳ ಖಂಡನೀಯ

ತೀರ್ಥಹಳ್ಳಿ ಅಕ್ರಮ ಹೆಂಡ ಪ್ರಾಂತ್ಯವಾರು ಹಂಚಿಕೆ
ಚಪ್ಪರ ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದ ಶ್ರೀಮಂತರಿಂದ ಬಡವರ ಮೇಲೆ ದೌರ್ಜನ್ಯ
ಹಿಂದೆ ಆಗರ್ಭ ಶ್ರೀಮಂತರಾಗಿದ್ದ ಜಮೀನ್ದಾರರು ಬಡವರನ್ನು ಚಪ್ಪರ ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದರು. ಅದೇ ಕುಟುಂಬದವನೊಬ್ಬ ಈಗಾಗಲೇ ನಡೆಸುತ್ತಿರುವ ಹೆಂಡದಂಗಡಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಅರಣ್ಯ ಇಲಾಖೆ ಮುಂದಿಟ್ಟುಕೊಂಡು ಇಂತಹ ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ. ಅವರೆಂದಿಗೂ ಬಡವರು ತಮ್ಮೆದುರು ತಲೆ ಎತ್ತಿ ನಿಲ್ಲುವುದನ್ನು ಸಹಿಸಿದವರೇ ಅಲ್ಲ. ಈಗಾಗಲೇ ತೀರ್ಥಹಳ್ಳಿಯಲ್ಲಿ ಹೆಂಡದ ವಹಿವಾಟು ಇವರ ಸುಪರ್ದಿಗೆಯಲ್ಲಿ ಪ್ರಾಂತ್ಯವಾರು ಹಂಚಿಕೆಯಾಗಿದೆ. ಕೋಣಂದೂರು, ಮೇಗರವಳ್ಳಿ, ಕಟ್ಟೇಹಕ್ಕಲು, ಮಂಡಗದ್ದೆ ಹೀಗೆ ಒಂದೊಂದು ಕಡೆ ಒಬ್ಬೊಬ್ಬರು ದಂಧೆ ಮಾಡುತ್ತಿದ್ದಾರೆ. ಹಾಗಾಗಿ ಕಡ್ತೂರಿನಲ್ಲಿ ಬೇರೆಯವರು ಉದ್ಯಮ ಶುರು ಮಾಡುವುದನ್ನು ಇವರಿಗೆ ಸಹಿಸಲು ಆಗುತ್ತಿಲ್ಲ ಎಂದು ಮೇಗರವಳ್ಳಿಯ ಆಗುಂಬೆ ವಲಯಾರಣ್ಯಧಿಕಾರಿ ಕಚೇರಿ ಮುಂಭಾಗ ಸೋಮವಾರ ಅರಣ್ಯ ಇಲಾಖೆ ಕಿರುಕುಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಕಡ್ತೂರು ಗ್ರಾಮದಲ್ಲಿ ಅರೇಹಳ್ಳಿ ಗ್ರಾಮ ಪಂಚಾಯಿತಿ ರಸ್ತೆ ದುರಸ್ತಿ ಮಾಡಿಸಿದ ಕಾರಣಕ್ಕೆ ಮೂರು ಜನ ಸದಸ್ಯರ ಮೇಲೆ ಅರಣ್ಯ ನಾಶ ಪ್ರಕರಣ ದಾಖಲಿಸಿರುವುದು ಸರಿಯೇ? ರಸ್ತೆ ನಿರ್ಮಾಣ ಪ್ರದೇಶದ ಕುರಿತಂತೆ ಕಂದಾಯ, ಅರಣ್ಯ ಇಲಾಖೆ ಜಂಟಿ ಸರ್ವೆ ಆಗಿಲ್ಲ. ಹಳೆಯ ಹೆಂಡದಂಗಡಿ ಜಾಗ ಅರಣ್ಯ ಜಾಗದಲ್ಲಿದ್ದು ಇದರ ವಿರುದ್ಧ ಕ್ರಮ ಏಕಿಲ್ಲ. ಕ್ರಮಬದ್ಧ ದಾಖಲೆ ಇಲ್ಲದೆ ನಿವೇಶನ ಹಕ್ಕುಪತ್ರ ರದ್ದತಿಗೆ ಕಂದಾಯ ಇಲಾಖೆಗೆ ಪತ್ರ ಬರೆಯಲು ಅರಣ್ಯ ಇಲಾಖೆಗೆ ಅಧಿಕಾರ ಎಲ್ಲಿದೆ. ಹೀಗೆ ವಿನಾಕಾರಣ ಕಿರುಕುಳ ನೀಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಆರಗ ಜ್ಞಾನೇಂದ್ರ ಎಚ್ಚರಿಸಿದರು.
ಮಾಜಿ ಶಾಸಕರು, ಮತ್ತವರ ಕಡೆಯವರ ಪ್ರಭಾವಕ್ಕೆ ಮಣಿದು ಪ್ರಕರಣ ದಾಖಲಿಸಲು ನಿಮಗೆ ನಾಚಿಕೆ ಆಗುವುದಿಲ್ಲವೆ. ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಮಣಿದು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ನಾನು ಸುಮ್ಮನಿರುವುದಿಲ್ಲ. ಕ್ಷೇತ್ರದಲ್ಲಿ ಒಂದೇ ನಾನಿರಬೇಕು ಇಲ್ಲ ಅಂತಹ ಅಧಿಕಾರಿ ಇರಬೇಕು. ಶಾಸಕ ಸ್ಥಾನ ದೊಡ್ಡದಲ್ಲ. ನನಗೆ ಕಾರ್ಯಕರ್ತರೇ ದೊಡ್ಡವರು ಎಂದು ಹೇಳಿದರು.
ಬಡ್ತಿ ಆಸೆಯಲ್ಲಿರುವ ಆಗುಂಬೆ ವಲಯಾರಣ್ಯಾಧಿಕಾರಿ ಕಾಂಗ್ರೆಸ್ ನಾಯಕರ ಮಾತಿಗೆ ಮಣೆ ಹಾಕುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ನಿಮಗೆ ಸುಲಭಕ್ಕೆ ಬಡ್ತಿ ಸಿಗಲು ಬಿಡುವುದಿಲ್ಲ. ಗೃಹಸಚಿವ, ಶಾಸಕನಾಗಿ 45 ವರ್ಷ ರಾಜಕಾರಣ ಮಾಡಿದ ನನಗೆ ರಾಜಕೀಯ ಪ್ರಭಾವ ಇದೆ. ಅಂತಹ ಸಂದರ್ಭ ಎದುರಾದರೆ ಶಾಸಕ ಸ್ಥಾನ ತ್ಯಾಗಕ್ಕೂ ಸಿದ್ಧ. ಡಿಸಿಎಫ್ಓ ಆಗಮಿಸುವ ವರೆಗೂ ಪ್ರತಿಭಟನೆ ಮುಂದುವರೆಸುತ್ತೇನೆ ಎಂದು ಸವಾಲು ಹಾಕಿದರು.
ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕುರಿತಾಗಿ ಲಿಖಿತ ದೂರು ಬಂದಿತ್ತು. ಸ್ಥಳಕ್ಕೆ ಭೇಟಿ ಮಾಹಿತಿ ಪಡೆಯಲಾಗಿದೆ. ಗ್ರಾ.ಪಂ. ಸದಸ್ಯರು ಕಾಮಗಾರಿ ಮಾಡಿಸಿದ್ದು ಗ್ರಾ.ಪಂ. ಅನುದಾನ ನೀಡಿಲ್ಲ ಎಂದು ಪಿಡಿಓ ತಿಳಿಸಿದ್ದಾರೆ. ಸ್ಥಳೀಯರು ಇದೇ ಮಾಹಿತಿ ನೀಡಿದ್ದು ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ಎಫ್ಓ ಹೇಮಗಿರಿ ಅಂಗಡಿ, ಡಿಆರ್ ಎಫ್ಓ ಯಲ್ಲಪ್ಪ  ಸಮಜಾಯಿಷಿ ನೀಡಿದರು. ಇದಕ್ಕೆ ಸಿಟ್ಟಾದ ಆರಗ ಜ್ಞಾನೇಂದ್ರ ಗ್ರಾ.ಪಂ.ರಸ್ತೆ ಅಭಿವೃದ್ಧಿಗೆ 5 ಸಾವಿರ ರೂಪಾಯಿ ಅನುದಾನ ಮೀಸಲಿಟ್ಟು ಕ್ರಿಯಾಯೋಜನೆ ಸಿದ್ಧಪಡಿಸಿ ನಿರ್ಣಯ ಸ್ವೀಕರಿಸಿದ ದಾಖಲೆ ತೋರಿಸಿದರು.
ಸ್ಥಳದಲ್ಲಿಯೇ ಅಧಿಕಾರಿಗಳ ಸಭೆ. ವಾಚಮಗೋಚರ ಬೈಸಿಕೊಂಡ ಯಲ್ಲಪ್ಪ
ಪ್ರತಿಭಟನೆ ಮೂರು ಗಂಟೆಗಳಿಗಿಂತಲೂ ಹೆಚ್ಚು ಕಾಲ ನಡೆದಿದ್ದು ಶಾಸಕ ಆರಗ ಜ್ಞಾನೇಂದ್ರ ಕಡೆಯ ಅರ್ಧಗಂಟೆ ಮಾತನಾಡಿದರು. ಉಳಿದ ಎರಡೂವರೆ ಗಂಟೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು ಎಲ್ಲಾ ರೀತಿಯೂ ಅರಣ್ಯ ಇಲಾಖೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದ ಬಳಿಕ ಸ್ಥಳದಲ್ಲಿಯೇ ಎಸಿಎಫ್ ಮಧುಸೂದನ್ ನೇತೃತ್ವದಲ್ಲಿ ಸಭೆ ಸೇರಿಸಲಾಯಿತು. ಎಲ್ಲಾ ಪ್ರತಿಭಟನಕಾರರು ಸುತ್ತುವರೆದಿದ್ದರು. ಅತೀವ ವಿಧೇಯತೆಯಿಂದ ಕುಳಿತಿದ್ದ ಮಧುಸೂದನ್ ಅವರನ್ನು ಆರಗ ಜ್ಞಾನೇಂದ್ರ ಪಾಟಿ ಸವಾಲಿಗೆ ಒಳಪಡಿಸಿದರು‌. ಪ್ರತಿಭಟನಕಾರರು ಸರ್ವ ಸನ್ನದ್ಧರಾಗಿ ಬಂದ ಕಾರಣ ಪಟ ಪಟನೆ ಆರಗರ ವಾದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸುತ್ತಿದ್ದರು. ಹಾಗಾಗಿ ಅವರ ಬಹುತೇಕ ಪ್ರಶ್ನೆಗೆ ಮಧುಸೂದನ್ ನಿರುತ್ತರರಾದರು. ಸ್ಥಳ ಪರಿಶೀಲನೆ ಮಾಡಿ ಕೇಸು ದಾಖಲಿಸಿದ್ದ ಡಿಆರ್ ಎಫ್ಓ ಯಲ್ಲಪ್ಪ ತಮ್ಮ ಸಮರ್ಥನೆಗೆ ಸೂಕ್ತ ದಾಖಲೆಗಳನ್ನು ಹಿಡಿದುಕೊಂಡಿದ್ದರು ಕೂಡ ತಲೆಗೊಂದು ಮಾತನಾಡುತ್ತಿದ್ದ ಪ್ರತಿಭಟನಕಾರರ ಎದುರು ತಬ್ಬಿಬ್ಬಾಗಿ ಎಲ್ಲಾ ಕಡೆಯಿಂದಲೂ ಹಿಗ್ಗಾಮುಗ್ಗಾ ಬೈಸಿಕೊಂಡರು.
ಗ್ರಾಮ ಪಂಚಾಯಿತಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಿದ್ದರೆ ಪಂಚಾಯಿತಿ ಸದಸ್ಯರ ಮೇಲಿನ ಪ್ರಕರಣ ರದ್ದುಪಡಿಸಲು ಕ್ರಮವಹಿಸಲಾಗುತ್ತದೆ. ಪಂಚಾಯಿತಿ ಸದಸ್ಯರು ವೈಯುಕ್ತಿಕವಾಗಿ ರಸ್ತೆ ಮಾಡಿಸಿದ್ದರೆ ಪ್ರಕರಣ ರದ್ದು ಸಾಧ್ಯವಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಸಿಎಫ್ಓ ಶಿವಶಂಕರ್ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಮೇಗರವಳ್ಳಿ, ಮುರುಳಿಭಟ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್ಕುಕ್ಕೆ, ಮುಖಂಡರಾದ ಟಿ.ಜೆ.ಅನಿಲ್, ಚಂದವಳ್ಳಿ ಸೋಮಶೇಖರ್, ಚಕ್ಕೊಡಬೈಲು ರಾಘವೇಂದ್ರ, ಹಸಿರುಮನೆ ಚಂದ್ರಶೇಖರ್, ಮಧುರಾಜಹೆಗ್ಡೆ, ಗಬಡಿ ಪ್ರದೀಪ್, ಕಡ್ತೂರು ಯಶಸ್ವಿ ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post