ಮ್ಯಾಮ್ಕೋಸ್‌ ಕ್ಷೇತ್ರವಾರು ಚುನಾವಣೆಗೆ ಷೇರುದಾರರಿಂದ ಪ್ರಸ್ತಾಪ ಬಂದಿಲ್ಲ ಎನ್ನುವುದು ಸುಳ್ಳು

ಅನಧಿಕೃತ ಷೇರುದಾರರ ಸಭೆಗೆ ಖರ್ಚಾದ 78 ಲಕ್ಷ ರೂ. ಮರು ಸಂದಾಯವಾಗಬೇಕು –ಹಿರಿಯ ಸಹಕಾರಿ ಕಡ್ತೂರು ದಿನೇಶ್

ಮ್ಯಾಮ್ಕೋಸ್‌ ನಿರ್ದೇಶಕ ಮಂಡಳಿ ಚುನಾವಣೆಯನ್ನು ಹೊಸದಾಗಿ ಕ್ಷೇತ್ರವಾರು ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಬೇಕೆಂಬ ಪ್ರಸ್ತಾಪ ಷೇರುದಾರರಿಂದ ಬಂದಿಲ್ಲ. ಬಂದ ಬಳಿಕ ಅದನ್ನು ಪರಿಶೀಲಿಸಬಹುದು ಎಂದು ಮ್ಯಾಮ್ಕೋಸ್‌ ಉಪಾಧ್ಯಕ್ಷ ಹುಲ್ಕುಳಿ ಮಹೇಶ್‌ ಸುದ್ದಿಗೋಷ್ಟಿಯಲ್ಲಿ ಹೇಳಿರುವುದು ಸತ್ಯಕ್ಕೆ ದೂರವಾಗಿದೆ. ಸ್ವತಃ ನಾನೇ ಈ ಕುರಿತು ಪ್ರಸ್ತಾಪನೆಯನ್ನು ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದೇನೆ ಎಂದು ಹಿರಿಯ ಸಹಕಾರಿ ಕಡ್ತೂರು ದಿನೇಶ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮ್ಯಾಮ್ಕೋಸ್‌ ಆಡಳಿತ ಪಾರದರ್ಶಕವಾಗಿಲ್ಲ. ಇಲ್ಲಿ ಒಂದು ಪಕ್ಷದ ಸಿದ್ಧಾಂತರ ಹಿತಾಸಕ್ತಿ ಕಾಪಾಡಲು ರೈತ ಸಮುದಾಯದ ಏಳಿಗೆಯನ್ನು ಬಲಿಕೊಡಲಾಗುತ್ತಿದೆ. ಇಷ್ಟು ಕಾಲ ಸುಮ್ಮನಿದ್ದ ಷೇರುದಾರರು ಅಲ್ಲಿನ ಲೋಪದೋಷಗಳನ್ನು ಕುರಿತು ಬಹಿರಂಗವಾಗಿ ಮಾತನಾಡಲು ಆರಂಭಿಸಿದ ಬಳಿಕ ಮ್ಯಾಮ್ಕೋಸ್‌ ಉಪಾಧ್ಯಕ್ಷ ಹುಲ್ಕುಳಿ ಮಹೇಶ್‌ ಅನಿವಾರ್ಯ ಸಮರ್ಥನೆಗೆ ಇಳಿದಿರುವುದು ವಿಪರ್ಯಾಸ. ಕಳೆದ ಸೆಪ್ಟೆಂಬರ್‌ 18ರಲ್ಲಿಯೇ ಶಿವಮೊಗ್ಗ ಮ್ಯಾಮ್ಕೋಸ್‌ಗೆ ಕ್ಷೇತ್ರವಾರು ಚುನಾವಣೆ ನಡೆಸುವಂತೆ ಮತ್ತು ಬೇಕಾದ ಏರ್ಪಾಡು ಮಾಡಿಕೊಳ್ಳುವಂತೆ ಸಹಕಾರ ಇಲಾಖೆ ಉಪನಿಬಂಧಕರು ಸೂಚನೆ ನೀಡಿದ್ದಾರೆ. ಆ ಪ್ರಕಾರ ತುರ್ತು ಸರ್ವ ಸದಸ್ಯರ ಸಭೆ ಕರೆದು ತೀರ್ಮಾನ ಕೈಗೊಳ್ಳಲು ಅವಕಾಶವಿದೆ. ಈಗ ಮ್ಯಾಮ್ಕೋಸ್‌ 3 ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದೆ. ಇಷ್ಟು ದೊಡ್ಡ ವ್ಯಾಪ್ತಿ ಹೊಂದಿರುವ ಸಂಸ್ಥೆಯಲ್ಲಿ ಷೇರುದಾರರ ಹಿತಾಸಕ್ತಿ ದೃಷ್ಟಿಯಿಂದ ಕ್ಷೇತ್ರವಾರು ಚುನಾವಣೆ ಅನಿವಾರ್ಯವಾಗಿದೆ. ಆದರೆ ಹಾಗೊಂದು ವೇಳೆ ಆದಲ್ಲಿ ಅಧಿಕಾರ ಶಾಶ್ವತವಾಗಿ ಕೈತಪ್ಪುವ ಭೀತಿಯಿಂದ ಉಪಾಧ್ಯಕ್ಷ ಮಹೇಶ್‌ ಷೇರುದಾರರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವಂತಹ ಹೇಳಿಕೆ ನೀಡುತ್ತಿದ್ದಾರೆ.

ಇದಲ್ಲದೇ 2006ರಿಂದ 2023ರವರೆಗೆ ಷೇರುದಾರರ ಸಭೆಗಾಗಿ 78 ಲಕ್ಷ ರೂಪಾಯಿ ಖರ್ಚು ತೋರಿಸಲಾಗಿದೆ. ಕಾಯ್ದೆ ಪ್ರಕಾರ ಅಧ್ಯಕ್ಷರಿಗೆ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಮಂಜೂರು ಮಾಡುವ ಅಧಿಕಾರವಿಲ್ಲ. ಸಹಕಾರ ಸಂಘಗಳ ಕಾಯ್ದೆ 1959ರ ಪ್ರಕರಣ 27ರನ್ವಯ ಪ್ರತಿಯೊಂದು ಸಹಕಾರ ಸಂಗವು ವರ್ಷಕ್ಕೊಮ್ಮೆ ಸೆಪ್ಟೆಂಬರ್‌ 25ರೊಳಗೆ ತನ್ನ ಸದಸ್ಯರ ಸಾಮಾನ್ಯ ಸಭೆ ನಡೆಸಬೇಕು. ಪ್ರಕರಣ 28 (ಎ) ಪ್ರಕಾರ ವಿಶೇಷ ಸಾಮಾನ್ಯ ಸಭೆಯನ್ನು ಒಟ್ಟು ಸದಸ್ಯರ ಸಂಖ್ಯೆಯ 5ನೇ 1ರಷ್ಟು ಪ್ರಮಾಣದ ಸದಸ್ಯರಿಂದ ಲಿಖಿತ ಕೋರಿಕೆಯನ್ನು ಸ್ವೀಕರಿಸಿದ ತರುವಾಯ ಒಂದು ತಿಂಗಳ ಒಳಗೆ ಕರೆಯಬೇಕೆಂದಿದೆ. ಇದನ್ನು ಬಿಟ್ಟರೆ ಷೇರುದಾರರ ಸಭೆಯನ್ನು ಆಗಿಂದಾಗ್ಗೆ ಕರೆಯಲು ಅವಕಾಶವಿಲ್ಲ. ಪ್ರತ್ಯೇಕವಾಗಿ ಷೇರುದಾರರ ಸಭೆ ನಡೆಸಿದ್ದಲ್ಲಿ ಸಂಘಕ್ಕೆ ಆರ್ಥಿಕ ಹೊರೆ ಹೆಚ್ಚಾದ ಕಾರಣ ಇದು ಸರಿಯಲ್ಲ ಎಂದು ಸಹಕಾರ ಸಂಘಗಳ ಅಪರ ನಿಬಂಧಕ ಎಚ್.ಬಾಲಶೇಖರ್‌ ದಿನಾಂಕ:21-12-2023ರಂದೇ ಆದೇಶ ನೀಡಿದ್ದಾರೆ. ಹಾಗಾಗಿ 2006ರಿಂದ 2023ರ ವರೆಗೆ ನಡೆಸಲಾಗಿರುವ ವಿಶೇಷ ಷೇರುದಾರರ ಸಭೆಗಳು ಅನಧಿಕೃತ ಎಂದು ಸಾಭೀತಾದ ಕಾರಣ 78 ಲಕ್ಷ ರೂಪಾಯಿಯನ್ನು ಆಡಳಿತ ಮಂಡಳಿ ಮರು ಸಂದಾಯ ಮಾಡಬೇಕು. ಈ ಕುರಿತು ತನಿಖೆ ನಡೆಯಬೇಕು ಎಂದು ಕಡ್ತೂರು ದಿನೇಶ್‌ ಒತ್ತಾಯಿಸಿದ್ದಾರಲ್ಲದೇ ಷೇರುದಾರರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಮ್ಯಾಮ್ಕೋಸ್‌ ಅವ್ಯಾವಹಾರಗಳ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post