ತೀರ್ಥಹಳ್ಳಿಯಲ್ಲಿ ಗ್ಯಾಂಗ್‌ ಲೈಂಗಿಕ ಕಿರುಕುಳ

ರಾಜಕೀಯ ಮುಖಂಡರಿಂದ ಪ್ರಕರಣ ಮುಚ್ಚಲು ಪ್ರಯತ್ನ
ಆ ದಿನ ಶೃಂಗೇರಿಯಲ್ಲಿ ಏನಾಯ್ತು…? ಅಧಿಕಾರಿಗಳು ಸುಮ್ಮನಾಗಿದ್ಯಾಕೆ…?

ಇತ್ತೀಚಿನ ದಿನಗಳಲ್ಲಿ ತೀರ್ಥಹಳ್ಳಿ ಸೃಜನಾತ್ಮಕವಾಗಿ ಗುರುತಿಸಿಕೊಳ್ಳುವ ಬದಲು ಕ್ರಿಮಿನಲ್‌ ಪ್ರಕರಣಗಳಿಂದಲೇ ರಾಜ್ಯದ ಗಮನ ಸೆಳೆಯುತ್ತಿದೆ. ಮಲೆನಾಡು ಭಾಗವಾಗಿದ್ದರಿಂದ ಅನೇಕ ದುಷ್ಟ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿ ಬದಲಾಗುತ್ತಿರುವುದು ಆಘಾತಕಾರಿ ಬೆಳವಣಿಗೆಯಲ್ಲಿ ಒಂದು. ಇಂತಹ ಅನೇಕ ಕೆಟ್ಟ ಕೆಲಸಗಳಿಗೆ ಆಡಳಿತ, ಅಧಿಕಾರಿಗಳು, ಪ್ರಮುಖ ರಾಜಕೀಯ ಮುಖಂಡರೇ ನೆರವಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಕಳೆದ ಮೂರು ದಿನಗಳ ಹಿಂದಿನಿಂದ ತೀರ್ಥಹಳ್ಳಿಯ ನಾಲೂರು-ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರಗದ್ದೆ ಗ್ರಾಮದಲ್ಲಿ ಕಣ್ಣಮುಚ್ಚಾಲೆ ಪ್ರಕರಣವೊಂದು ನಡೆಯುತ್ತಿದೆ. ತಂದೆ, ತಾಯಿ ಇಲ್ಲದೆ ಸೋದರಮಾವನ ಆಶ್ರಯ ಪಡೆದಿರುವ ಇಲ್ಲಿನ 19 ವರ್ಷದ ಯುವತಿಯನ್ನು ನಾಲ್ವರು ಯುವಕರು ಅಪಹರಿಸಿ ಶೃಂಗೇರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಲಾಡ್ಜ್‌ ಒಂದನ್ನು ಬುಕ್‌ ಮಾಡಿದ್ದು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ತೀರ್ಥಹಳ್ಳಿ ಪಟ್ಟಣದಲ್ಲಿರುವ ನರ್ಸಿಂಗ್‌ ಹೋಂಗೆ ದಾಖಲಿಸಿ ಎರಡು ದಿನ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ ಯುವತಿಗೆ ಯಾವುದೇ ಹೇಳಿಕೆ ನೀಡದಂತೆ ತೀರಾ ಒತ್ತಡ ಹೇರುತ್ತಿದ್ದು ಊರು ಬಿಡಿಸುವ ಪ್ರಯತ್ನದಲ್ಲಿ ಎಲ್ಲರೂ ಸಜ್ಜಾಗಿರುವುದು ದುರಂತದ ಸಂಗತಿ. ಶಿಕ್ಷೆಗೆ ಒಳಗಾಗಬೇಕಾದ ಅಪಾಪೋಲಿಗಳಿಗೆ ಎಲ್ಲರೂ ನೆರವಾಗುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ನಾಲ್ವರು ಯುವಕರು ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ವಿಚಾರ ಆಡಳಿತ ಮತ್ತು ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೂ ಸಂಪೂರ್ಣ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿದ ಪೊಲೀಸರು ಕೂಡ ನರ್ಸಿಂಗ್‌ ಹೋಂಗೆ ಭೇಟಿ ನೀಡಿ ಯುವತಿಯ ಹೇಳಿಕೆ ಪಡೆದಿದ್ದಾರೆ. ಸದ್ಯ ಯುವತಿ ಹೇಳಿಕೆಯನ್ನು ನೀಡಿದ್ದು ನಾಲ್ವರಲ್ಲಿ ಓರ್ವನನ್ನು ವಿವಾಹವಾಗಲು ಒಪ್ಪಿಗೆ ಸೂಚಿಸಿದ್ದಾಳೆಂಬ ಮಾಹಿತಿ ಲಭ್ಯವಾಗಿದೆ. ಆದರೆ ವಿಷಯ ತಿಳಿದ ದ್ವಿಪಕ್ಷಗಳ ರಾಜಕೀಯ ಮುಖಂಡರು ಮಾತ್ರ ಇದಕ್ಕೆ ಭಿನ್ನರಾಗ ವ್ಯಕ್ತಪಡಿಸಿದ್ದು ತಮ್ಮ ರಾಜಕೀಯ ಪ್ರಭಾವ ಬಳಸಿ ಯುವಕರನ್ನು ಬಚಾವ್‌ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇವರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿರುವ ಸಂಬಂಧಪಟ್ಟ ಅಧಿಕಾರಿ ವರ್ಗ ಪ್ರಕರಣ ಹೊರಗೆ ಬಾರದಂತೆ ಎಚ್ಚರವಹಿಸಲು ಜಾಗೃತೆ ನೀಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಳ್ಳುವ ಬದಲು ಪ್ರಭಾವಿಗಳ ಅಣತಿಯಂತೆ ನಡೆದುಕೊಳ್ಳುವ ಆಶ್ವಾಸನೆ ನೀಡಿ ಹಿಂದೆ ಸರಿದಿದ್ದಾರೆ. ಒಟ್ಟಿನಲ್ಲಿ ವಿವಿಧ ಇಲಾಖೆಗಳ ಸಾರಥ್ಯದಿಂದಾಗಿ ಶೀಘ್ರದಲ್ಲೇ ಯುವತಿಯನ್ನು ಊರು ಬಿಡಿಸುವ ಪಿತೂರಿ ಭರ್ಜರಿಯಾಗಿ ಗ್ರಾಮದಲ್ಲಿ ನಡೆಯುತ್ತಿದೆ. ಅಜ್ಜಿಮನೆಯಲ್ಲಿ ರಕ್ಷಣೆ ಸಿಗಲಿದೆ ಎಂಬ ಧೈರ್ಯದಲ್ಲಿದ್ದ ಯುವತಿಗೆ ಇದೀಗ ಆಘಾತ ಎದುರಾಗಿದೆ. ಯಾವ ಕ್ಷಣದಲ್ಲಾದರೂ ಯುವತಿಯನ್ನು ಊರಿನಿಂದ ಎತ್ತಂಗಡಿ ಮಾಡುವ ದುಷ್ಟಕೃತ್ಯ ನಡೆಯಬಹುದು. ಆಡಳಿತ ಕೂಡ ಕಣ್ಮುಚ್ಚಿ ಕುಳಿತಿದ್ದರಿಂದ ದುಷ್ಟರಿಗೆ ನೆರವು ಸಿಗುವುದರಲ್ಲಿ ಅನುಮಾನವೇ ಇಲ್ಲದಂತಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಯುವತಿಯನ್ನು ಅಪರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಜಿಲ್ಲಾಡಳಿತದ ಗಮನದಲ್ಲೂ ಇದೆ. ಆದರೆ ಪ್ರಭಾವಿ ಮುಖಂಡರ ಕಿತಾಪಿಯಿಂದಾಗಿ ಅಧಿಕಾರಿಗಳು ಕೂಡ ಲಜ್ಜೆ ಬಿಟ್ಟು ಕೆಲಸ ಮಾಡುವ ದುಸ್ಥಿತಿ ಎದುರಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಶೀಘ್ರ ಪ್ರಕರಣವನ್ನು ತನಿಖೆಗೆ ಒಳಪಡಿಸಿ ಯುವತಿಗೆ ನ್ಯಾಯ ಒದಗಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post