ತುಂಗಾ – ಮಾಲತಿ ನದಿಗೆ ಆಣೆಕಟ್ಟು ಕಟ್ಟುವ ಯೋಜನೆ ಇಲ್ಲ
ಬಹುಗ್ರಾಮ ಕುಡಿಯುವ ನೀರು ಯೋಜನೆ ಕುರಿತು ಆರಗ ಸ್ಪಷ್ಟತೆ
ತೀರ್ಥಹಳ್ಳಿ ತಾಲ್ಲೂಕಿನಲ್ಲಿ 344 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಯಾವುದೇ ಡ್ಯಾಂ ನಿರ್ಮಿಸುವ ಯೋಜನೆ ಇಲ್ಲ. ಆಣೆಕಟ್ಟು ನಿರ್ಮಿಸಿ ರೈತರನ್ನು ಮುಳುಗಿಸುವುದಾದರೆ ನನ್ನ ವಿರೋಧ ಇದೆ ಎಂದು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಆರಗ ಜ್ಞಾನೇಂದ್ರ ಹೇಳಿದರು.
ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಅನುಷ್ಠಾನದ ಹಂತದಲ್ಲಿರುವ ಶುದ್ಧ ಕುಡಿಯುವ ನೀರು ಯೋಜನೆಯ ಕುರಿತು ರೈತರ ಆತಂಕಗಳಿಗೆ ಸ್ಪಷ್ಟನೆ ನೀಡಿದರು.
ಕೇಂದ್ರ, ರಾಜ್ಯ ಸರ್ಕಾರದ ಜಂಟಿ ಅನುದಾನದಲ್ಲಿ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಭೀಮನಕಟ್ಟೆ ಸಮೀಪದ ಸೌಳಿ ಗ್ರಾಮದಿಂದ ಜಾಕ್ವೆಲ್ ಮೂಲಕ ನೀರು ತೆಗೆದು ಕೋಡ್ಲು ಗ್ರಾಮದಲ್ಲಿ ಶುದ್ಧೀಕರಿಸಲಾಗುತ್ತದೆ. ಶುದ್ಧೀಕರಿಸಿದ ನೀರನ್ನು ಪ್ರತಿ ವ್ಯಕ್ತಿಗೆ 55 ಲೀಟರ್ನಂತೆ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾಮಗಾರಿ ಜಾರಿಯಿಂದ ಮಾಲತಿ, ತುಂಗಾ ನದಿ ತೀರದ ರೈತರ ಸಾಗುವಳಿ ಜಮೀನಿಗೆ ನೀರಿನ ಕೊರತೆ ಉಂಟಾಗುತ್ತದೆ. ನೀರು ಕಡಿಮೆ ಆದ್ದಲ್ಲಿ ನದಿಯಲ್ಲಿರುವ ರೈತರ ಕೃಷಿ ಪಂಪ್ಸೆಟ್ ಹೊರ ತೆಗೆಸಲಾಗುತ್ತದೆ. ಆಣೆಕಟ್ಟು ನಿರ್ಮಾಣ ಮಾಡಲಾಗುತ್ತದೆ ಎಂಬ ಅಪ್ರಚಾರ, ಸುಳ್ಳು ಸುದ್ದಿ ರೈತರ ನಡುವೆ ಹರಿಬಿಡಲಾಗಿದೆ. ಶುದ್ಧಕುಡಿವ ನೀರು ಕಾಮಗಾರಿಯ ಮಹತ್ವ, ಉದ್ದೇಶವನ್ನು ರೈತರು ಅರ್ಥ ಮಾಡಿ ಕೊಳ್ಳಬೇಕು ಎಂದು ಮನವಿ ಮಾಡಿದರು.
ಹಾಲಿ ಮಂಡಗದ್ದೆ, ಸಿಂಗನಬಿದರೆ ಗ್ರಾಮ ಪಂಚಾಯಿತಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಎರಡು ಪಂಚಾಯಿತಿ ಹೊರತು ಪಡಿಸಿ 1616 ಮಜರೆ ಹಳ್ಳಿಯ ಸುಮಾರು 1.30 ಲಕ್ಷ ಜನರಿಗೆ ಶುದ್ಧೀಕರಿಸಿದ ಕುಡಿವ ನೀರು ಪೂರೈಕೆ ಆಗಲಿದೆ. ಉದ್ದೇಶಿತ ಯೋಜನಾ ಸ್ಥಳದಲ್ಲಿ 0.063 ಟಿಎಂಸಿ ನೀರು ಸಂಗ್ರಹಣ ಸಾಮರ್ಥ್ಯದ ಗುಂಡಿಗಳಿವೆ. ಅದರಲ್ಲಿ ಕೇವಲ 0.16 ಟಿಎಂಸಿ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆಯ ಇಇ ರಾಜೇಂದ್ರ ಪ್ರಸಾದ್ ಸಿ, ಎಇಇ ಚಂದ್ರಶೇಖರ್, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ತಾಲೂಕು ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಬೇಗುವಳ್ಳಿ ಕವಿರಾಜ್, ಮುಖಂಡರಾದ ನಂಬಳ ಮುರುಳಿ, ಹೊನ್ನಾಸುಗದ್ದೆ ಮಂಜುನಾಥ್ ಇದ್ದರು.