ಬಿಜೆಪಿಗೆ ಸೆಡ್ಡು ಹೊಡೆದ ಸಹಕಾರಿ ಮುಖಂಡ
ಅಧ್ಯಕ್ಷ ಗಾದಿಗೆ ಪುನಃ ಮುಹೂರ್ತ ಫಿಕ್ಸ್
ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಆಡಳಿತ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಸದ್ಯದಲ್ಲೇ ತಾರ್ಕಿಕ ಅಂತ್ಯ ಕಾಣಲಿದೆ. ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿದ್ದ ದುಗ್ಗಪ್ಪ ಗೌಡರು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತೆರವಾಗಿದ್ದ ಸ್ಥಾನಕ್ಕೆ ಅಂತರಾಷ್ಟ್ರೀಯ ಸಹಕಾರಿ, ನಬಾರ್ಡ್ ಸದಸ್ಯ, ಅಪೆಕ್ಸ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ನೇಮಕಗೊಂಡಿದ್ದಾರೆ.
ಕೋಅಪ್ ನಿರ್ದೇಶಕ ಸ್ಥಾನದ ಅರ್ಹತೆ ಕುರಿತಂತೆ ಪ್ರಕರಣ ನ್ಯಾಯಾಲದಲ್ಲಿ ಇದ್ದು ಸದ್ಯ ಕೋಅಪ್ ನಿರ್ದೇಶಕರಾಗಿದ್ದ ಗುರುರಾಜ್ ಅನರ್ಹಗೊಂಡಿದ್ದಾರೆ ಎನ್ನಲಾಗಿದೆ. ಆ ಸ್ಥಾನಕ್ಕೆ ದುಗ್ಗಪ್ಪ ಗೌಡರನ್ನು ನೇಮಕಗೊಳಿಸಲಾಗಿದ್ದು ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಕರನ್ನಾಗಿ ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ. ಒಟ್ಟಿನಲ್ಲಿ ಅರ್.ಎಂ. ಮಂಜುನಾಥ ಗೌಡರ ನಿರ್ದೇಶಕ ಸ್ಥಾನ ಗಟ್ಟಿಯಾಗಿದೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಆರ್.ಎಂ.ಮಂಜುನಾಥ ಗೌಡರು ಡಿಸಿಸಿ ಬ್ಯಾಂಕ್ ವಹಿವಾಟನ್ನು ಸಾವಿರ ಕೋಟಿಗೆ ಏರಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಇದನ್ನು ಸಹಿಸಲಾಗದ ಕೆಲವರು ಗೌಡರನ್ನು ಹೆಣೆಯಲು ತಂತ್ರಗಳನ್ನು ನಡೆಸಿದ್ದರು. ಬಿಜೆಪಿಯ ಭದ್ರಕೋಟಿ ಶಿವಮೊಗ್ಗದಲ್ಲಿ ಎಲ್ಲವೂ ಕೂಡ ತಮ್ಮ ನೇರಕ್ಕೆ ನಡೆಯಬೇಕು ಎಂಬ ಮಾಜಿ ಸಿಎಂ ಯಡಿಯೂರಪ್ಪ ಕಾರ್ಯಾಚರಣೆ ಪ್ರತಿಫಲ ನೀಡಿದಂತಿಲ್ಲ. ಮಂಜುನಾಥ ಗೌಡರ ವಿರುದ್ಧ ದೊಡ್ಡ ವಿರೋಧಿ ಬಣ ಸ್ಥಾಪನೆ ಮಾಡಲು ಮುಂದಾಗಿದ್ದ ಸಂಸದ ಬಿ.ವೈ. ರಾಘವೇಂದ್ರ ತಂತ್ರವೂ ವಿಫಲವಾದಂತಿದೆ. ಕ್ಷೇತ್ರದಿಂದಲೇ ಹೊರಗೆ ಹೋಗಲು ಬಿಡುವುದಿಲ್ಲ ಎಂಬ ಅಪಪ್ರಚಾರದ ರಣತಂತ್ರ ರೂಪಿಸಿದ್ದ ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರರ ಎಲ್ಲಾ ಪ್ರತಿತಂತ್ರಗಳನ್ನು ಮೂಟೆಕಟ್ಟಿ ಚಿಲುಮೆಯಂತೆ ಹೊಸ ಭರವಸೆ ಹೊತ್ತು ಆರ್.ಎಂ. ಮಂಜುನಾಥ ಗೌಡರು ಡಿಸಿಸಿ ಬ್ಯಾಂಕ್ ಸಾರಥ್ಯ ವಹಿಸಲು ಸಿದ್ಧತೆ ನಡೆಸಿದ್ದಾರೆ.
ಶಿವಮೊಗ್ಗದ ಸಹಕಾರಿ ಕ್ಷೇತ್ರದಲ್ಲಿ ಮತ್ತೊಮ್ಮೆ ಹಿಡಿತ ಸಾಧಿಸಲು ಮುಂದಾಗಿರುವ ಆರ್.ಎಂ. ಮಂಜುನಾಥ ಗೌಡರನ್ನು ಹಣಿಯುವ ಕುತಂತ್ರಗಳಿಗೇನು ಕಡಿಮೆ ಇಲ್ಲ. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಬಿಜೆಪಿ ಯಾವ ಕಾರಣಕ್ಕೂ ಹತಾಶೆಗೆ ತಲುಪದಂತೆ ನೋಡಿಕೊಳ್ಳುವ ಎಚ್ಚರಿಕೆ ವಹಿಸಲಾಗುತ್ತಿದೆ. ಸಣ್ಣ ಬದಲಾವಣೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲಾ ತಂತ್ರಗಳಿಗೂ ಟಕ್ಕರ್ ಕೊಟ್ಟಿರುವ ಗೌಡರು ಇದೀಗ ಅಧ್ಯಕ್ಷ ಗಾದಿಗೆ ನಡೆಯುವ ಚುನಾವಣೆಯ ಮೇಲೆ ನೇರ ದೃಷ್ಟಿ ನೆಟ್ಟಿದ್ದಾರೆ. ಹಾಗೆ ನೋಡಿದರೆ ಡಿಸಿಸಿ ಬ್ಯಾಂಕ್ ನಿರ್ದೇಶಕರ ಪೈಕಿ ಒಂದಿಬ್ಬರು ಬಿಟ್ಟರೆ ಬಹುತೇಕರಿಗೆ ಗೌಡರೆಂದರೆ ಅಚ್ವುಮೆಚ್ಚು. ಸಹಕಾರಿ ಸಂಸ್ಥೆ ಬೆಳವಣಿಗೆಗೆ ಮಂಜುನಾಥ ಗೌಡರ ಅಗತ್ಯ ಇದೆ ಎಂಬ ಸತ್ಯ ಅರಿತವರೇ ಹೆಚ್ಚಿದ್ದಾರೆ. ಹಾಗಾಗಿ ಮತ್ತೊಮ್ಮೆ ಆಡಳಿತ ಮಂಡಳಿಯಲ್ಲಿ ಹಿಡಿತ ಸಾಧಿಸುವುದು ನಿಶ್ಚಲವಾದಂತಿದೆ.