ಕೊಡಚಾದ್ರಿ ಮಹಿಳಾ ಸೊಸೈಟಿಗೆ ₹ 39 ಲಕ್ಷ ಲಾಭ
ತೀರ್ಥಹಳ್ಳಿಯ ಕೊಡಚಾದ್ರಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರ ನಿಯಮಿತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡುತ್ತಿದೆ. ಪ್ರಸ್ತುತ ಸಾಲಿನಲ್ಲಿ ₹ 15 ಕೋಟಿಗೂ ಹೆಚ್ಚು ವಹಿವಾಟು ನಡೆಸಿ ₹ 39 ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷೆ ಚೇತನಾ ಶ್ರೀಕಾಂತ್ ಹೆಗ್ಡೆ ತಿಳಿಸಿದರು.ಅಡಿಕೆ ಹಾಳೆ ತಯಾರಿಕಾ ಘಟಕ, ಕೇಟರಿಂಗ್, ಹೋಟೆಲ್ ಉದ್ಯಮ, ಟೈಲರಿಂಗ್, ಮಹಿಳೆಯರ ಪಿಜಿ, ಹೋಳಿಗೆ ರೊಟ್ಟಿ ತಯಾರಿಕಾ ಘಟಕ, ಬ್ಯಾಂಗಲ್ ಸ್ಟೋರ್, ಬೇಕರಿ, ಬ್ಯೂಟಿಪಾರ್ಲರ್, ಬಟ್ಟೆ ಅಂಗಡಿ ಇನ್ನಿತರ ಉದ್ಯಮಕ್ಕಾಗಿ ಗರಿಷ್ಠ ₹ 30 ಲಕ್ಷದವರೆಗೆ ಸಾಲ ಸೌಲಭ್ಯ ನೀಡಿದೆ. ಸಾಲ ಪಡೆದು ಆರ್ಥಿಕ ಸ್ವಾವಲಂಬನೆ ಹೊಂದಿದ ಮಹಿಳೆಯರನ್ನು ಗುರುತಿಸಿ ಗೌರವಿಸಲಾಗಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
3 ಸಾವಿರ ಸದಸ್ಯರಿಂದ 2014ರಲ್ಲಿ ಆರಂಭಗೊಂಡ ಸಂಸ್ಥೆ ಸದೃಢವಾಗಿ ಬೆಳೆಯುತ್ತಿದೆ. ಸ್ವಂತ ಕಟ್ಟಡಕ್ಕಾಗಿ ಕಟ್ಟಡ ನಿಧಿ ಆರಂಭಿಸಲಾಗಿದೆ. ಸದ್ಯ ಜಿಲ್ಲೆಯಾದ್ಯಂತ 5,260 ಮಹಿಳಾ ಸದಸ್ಯರನ್ನು ಹೊಂದಿದ್ದು, ಸದಸ್ಯರಿಗೆ ₹ 5 ಲಕ್ಷದವರೆಗೆ ವಾಹನ ಸಾಲ ನೀಡಲಾಗುತ್ತಿದೆ. ಬಿಪಿಎಲ್ ಷೇರುದಾರ ಕುಟುಂಬದ ಸದಸ್ಯರು ಮರಣ ಹೊಂದಿದರೆ ತಲಾ ₹ 5,000 ಸಹಾಯ ಧನ ನೀಡುವ ಮೂಲಕ ಧೈರ್ಯ ತುಂಬಲಾಗುತ್ತಿದೆ ಎಂದು ಹೇಳಿದರು.ಉಪಾಧ್ಯಕ್ಷೆ ಶಶಿಕಲಾ ಶೆಟ್ಟಿ, ನಿರ್ದೇಶಕರಾದ ಅಚಲ ಹೆಗಡೆ, ಮೈಥಿಲಿ ಸತೀಶ್, ವಿನೋದ ಕಷ್ಣಮೂರ್ತಿ, ಫರ್ಜಾನಾ ಖಾನಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಇದ್ದರು.

