ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಚಾರಕ್ಕೆ
ಶಕ್ತಿ
ನಿಷ್ಠಾವಂತ ಕಾಂಗ್ರೆಸ್
ಕಾರ್ಯಕರ್ತನಿಗೆ ಒಲಿದ ಹುದ್ದೆ
ತೀರ್ಥಹಳ್ಳಿ ವಿಧಾನಸಭಾ
ಕ್ಷೇತದಲ್ಲಿ ಕಳೆದ ನಾಲ್ಕು ದಶಕಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ, ಮುಖಂಡ ಮತ್ತು
ಪಕ್ಷದ ಸಂಘಟನೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಾಂಗ್ರೆಸಿಗ ಡಿ.ಎಸ್. ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ. ಕೆಪಿಸಿಸಿ
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಶಿಫಾರಸ್ಸಿನ ಮೇರೆಗೆ
ಕೆಪಿಸಿಸಿ ಸಹ ಅಧ್ಯಕ್ಷ ಮಂಜುನಾಥ ಭಂಡಾರಿ ನೇಮಕ ಮಾಡಿದ್ದಾರೆ.
ಉತ್ತಮ ವಾಗ್ಮಿ ಆಗಿರುವ
ವಿಶ್ವನಾಥ ಶೆಟ್ಟಿ ತಮ್ಮ
ರಾಜಕೀಯ ಜೀವನದುದ್ದಕ್ಕೂ ಒಮ್ಮೆಯೂ ಪಕ್ಷಾಂತರ ಮಾಡದೆ ನಿಷ್ಠಾವಂತ ಕಾಂಗ್ರೆಸಿಗನಾಗಿ ಪಕ್ಷದ
ಧ್ಯೇಯ ಧೋರಣೆಗಳನ್ನು ಅತ್ಯಂತ ಪ್ರಖರ,
ನಿರ್ಭಯವಾಗಿ ಪ್ರಚೂರ ಪಡಿಸಿಕೊಂಡು ಬಂದವರು.
ಕೊಪ್ಪ ತಾಲೂಕಿನ
ಸೂರ್ಯದೇವಸ್ಥಾನದ ದೋನ್ಸೆ ಗ್ರಾಮದ ದಿ.ಶೇಷಪ್ಪ ಶೆಟ್ಟಿ ಹಾಗೂ ಕಿಟ್ಟಮ್ಮ ಶೆಡ್ತಿ ದಂಪತಿಯ ಪುತ್ರರಾಗಿ ಜನಿಸಿದ ವಿಶ್ವನಾಥ ಶೆಟ್ಟಿ ಎಸ್ಎಸ್ಎಲ್‌ಸಿ ವರೆಗೆ ಗಡಿಕಲ್ಲು ಪ್ರೌಢಶಾಲೆಯಲ್ಲಿ ಓದಿ ತದನಂತರ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ
ಬಿಎಸ್ಸಿ ಪದವಿ ಪೂರೈಸಿದ್ದರು.
ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ
ಓದುತ್ತಿರುವಾಗಲೇ ಓರ್ವ ವಿದ್ಯಾರ್ಥಿ ನಾಯಕನಾಗಿಯೂ ಹೊರ ಹೊಮ್ಮಿದವರು ವಿಶ್ವನಾಥ ಶೆಟ್ಟಿ.
ಕಾಲೇಜು ಯೂನಿಯನ್‌ನ ಚುನಾವಣೆಯ ಸಂದರ್ಭದಲ್ಲಿ ತಮ್ಮ ಮಾತುಗಾರಿಕೆ ಮತ್ತು ಸಂಘಟನಾ
ಚಾತುರ್ಯದಿಂದಾಗಿ ವಿದ್ಯಾರ್ಥಿ ಯೂನಿಯನ್ನ
ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದರು.
ಇದೇ ಹೊತ್ತಿನಲ್ಲಿ ತುಂಗಾ
ಕಾಲೇಜಿನ ವಿದ್ಯಾರ್ಥಿ ಸೀತಾರಾಮ ಅವರ ಕೊಲೆ ನಡೆದಿತ್ತು. ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಮೃತ
ಸೀತಾರಾಮನಿಗೆ ನ್ಯಾಯ ದೊರಕಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳನ್ನು ಸಂಘಟಿಸಿ ಡಿ.ಎಸ್.ವಿ. ತೀವ್ರ
ಹೋರಾಟ ನಡೆಸುವ ಮೂಲಕ ಕಾಲೇಜು ವಿದ್ಯಾರ್ಥಿಯಾಗಿರುವಾಗಲೇ ಹೋರಾಟಗಾರ ಮನೋಭಾವದೊಂದಿಗೆ ನಾಯಕತ್ವದ
ಗುಣ ಬೆಳೆಸಿಕೊಂಡವರು.
ಬಿಎಸ್ಸಿಯಲ್ಲಿ ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆಯಾಗಿದ್ದರೂ, ಸರ್ಕಾರಿ ಕೆಲಸ ಸಿಗುವ ಎಲ್ಲಾ ಅವಕಾಶವಿದ್ದರೂ, ಪತ್ರಿಕಾರಂಗದ ಸೆಳೆತದಿಂದಾಗಿ ಡಿಎಸ್ವಿ 70- 80ರ ದಶಕದಲ್ಲಿ ತೀರ್ಥಹಳ್ಳಿಯಲ್ಲಿ 'ಬೃಹಸ್ಪತಿವಾಣಿ' ಎಂಬ ದಿನ ಪತ್ರಿಕೆ ನಡೆಸುತ್ತಿದ್ದ ಪೆ.ದೇವಣ್ಣ ರಾವ್ ಅವರ ಜೊತೆಯಲ್ಲಿ ಪತ್ರಿಕೋದ್ಯಮ ಆರಂಭಿಕ ತರಬೇತಿ ಪಡೆದುಕೊಂಡರು.
ಮುಂದೆ ತೀರ್ಥಹಳ್ಳಿಯಲ್ಲಿ
ತಮ್ಮದೆ ಸಂಪಾದಕತ್ವದ 'ತುಂಗಾವಾರ್ತೆ' ವಾರಪತ್ರಿಕೆಯನ್ನು 70ರ ದಶಕದ ಕೊನೆಯಲ್ಲಿ ಆರಂಭಿಸಿ ಕಳೆದ ನಾಲ್ಕು ದಶಕಗಳಿಗೂ ಹೆಚ್ಚು
ಕಾಲದಿಂದ ಈವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.
ಶೆಟ್ಟರು
ವಿದ್ಯಾರ್ಥಿಯಾಗಿರುವಾಗಲೇ ಕಾಂಗ್ರೆಸ್ ಪಕ್ಷದತ್ತ ಇವರಿಗೆ ಅಪಾರವಾದ ಒಲವಿತ್ತು. ಹೀಗಾಗಿ
ಪತ್ರಿಕೆಯ ಜೊತೆಗೆ ಅಂದಿನಿಂದ ಇಂದಿನವರೆಗೂ ನಿಷ್ಟಾವಂತ ಕಾಂಗ್ರೆಸಿಗನಾಗಿ ತಮ್ಮನ್ನು
ಗುರುತಿಸಿಕೊಂಡವರು.
ಈ ನಡುವೆ, ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿಯೂ
ಇವರು ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿ ಹಾಗೂ ಕೊಪ್ಪ ಎರಡೂ ತಾಲೂಕುಗಳಲ್ಲಿ ಶೆಟ್ಟರು ತಮ್ಮ
ರಾಜಕೀಯ ಸಂಘಟನಾ ಶಕ್ತಿಯನ್ನು ಬೆಳಸಿಕೊಂಡಿದ್ದಾರೆ.
ತೀರ್ಥಹಳ್ಳಿಯ ಪಟ್ಟಣ ಪಂಚಾಯತಿಯ ನಾಮಕರಣ ಸದಸ್ಯರಾಗಿ, 5 ವರ್ಷ ತಾಲೂಕು ಆಶ್ರಯ ಸಮಿತಿ ಸದಸ್ಯರಾಗಿ, ಶ್ರೀ ಮಾರಿಕಾಂಬ ದೇವಸ್ಥಾನ ಆಡಳಿತ ಮಂಡಳಿ ನಿರ್ದೇಶಕರಾಗಿ, ಶ್ರೀ ರಾಮೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಮಾಜಿ ಶಾಸಕ ದಿ.ಪಟಮಕ್ಕಿ
ರತ್ನಾಕರ ಅವರ ಆಪ್ತರಾಗಿದ್ದ ವಿಶ್ವನಾಥ ಶೆಟ್ಟರು, ಮುಂದೆ ಹಿರಿಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ಅವರು ಶಿವಮೊಗ್ಗ
ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾಗ ಶೆಟ್ಟರೇ ತೀರ್ಥಹಳ್ಳಿ ಚುನಾವಣಾ
ಪ್ರಚಾರದ ಮುಖಂಡತ್ವ ವಹಿಸಿದ್ದರು.
ಹೀಗೆ ಕಳೆದ ನಾಲ್ಕು ದಶಕಗಳಿಗೂ
ಹೆಚ್ಚು ಕಾಲದಿಂದ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಪತ್ರಿಕಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ
ವಿಶ್ವನಾಥ ಶೆಟ್ಟರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಅಪಾರವಾದ ಅನುಭವವಿದೆ.
ಈ ಹಿನ್ನಲೆಯಲ್ಲಿಯೇ ಕಾಂಗ್ರೆಸ್
ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಚುನಾವಣಾ ಸಂದರ್ಭದಲ್ಲಿ ಬಹಳ
ಪ್ರಮುಖವಾಗಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಂಯೋಜಕ ಹುದ್ದೆಗೆ ವಿಶ್ವನಾಥ ಶೆಟ್ಟರನ್ನು ನೇಮಕ ಮಾಡಿದೆ.
ಆಧಾರ -ಟಿ.ಕೆ.ರಮೇಶ್ ಶೆಟ್ಟಿ


