ಗುಳಿಗೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ

ಗುಳಿಗ ದೈವದ ಅವಹೇಳನ ಆರಗ ಯೂಟರ್ನ್
ಕಾಂಗ್ರೆಸ್ ಅನ್ನು ಟೀಕಿಸಿದ್ದೇನೆ, ತುಳು ಸಂಸ್ಕೃತಿ, ದೈವಗಳನ್ನಲ್ಲ
ದಕ್ಷಿಣ ಕನ್ನಡದಲ್ಲೂ ಗೃಹಸಚಿವರ ವಿರುದ್ದ ವ್ಯಾಪಕ ಆಕ್ರೋಶ

ಮುಸ್ಲಿಂ ರಾಷ್ಟ್ರಗಳಲ್ಲಿ ಇಲ್ಲದ ವಿರೋಧ ತೀರ್ಥಹಳ್ಳಿಯಲ್ಲೇಕೆ...?


ಗೃಹಸಚಿವರು ಬುಧವಾರ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಮೂಲದ ಆರಾಧ್ಯ ದೈವ ಗುಳಿಗ ವಿರುದ್ಧ ಅವಹೇಳನಕಾರಿಯಾಗಿ ಗುಳಿಗೆ, ಜಾಪಾಳ್‌ ಗುಳಿಗೆ ಎಂಬ ಪದ ಪ್ರಯೋಗ ಮಾಡಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದೈವಗಳ ವಿಚಾರದಲ್ಲಿ ತೀವ್ರವಾಗಿ ಭಾವನಾತ್ಮಕ ಪ್ರತಿಕ್ರಿಯೆ ನೀಡುವ ತುಳುವರು ಸಾಮಾಜಿಕ ಜಾಲತಾಣಗಳಲ್ಲಿ ಆರಗರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಗಳವಾರ ರಾತ್ರಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಸಾರಥ್ಯದಲ್ಲಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ಶಿವದೂತೆ ಗುಳಿಗೆ ನಾಟಕ 8 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರೆದುರು ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಇದನ್ನು ವೇದಿಕೆಯಲ್ಲಿ ಪರೋಕ್ಷವಾಗಿ ಟೀಕಿಸುವ ಭರದಲ್ಲಿ ಆರಗ ಜ್ಞಾನೇಂದ್ರ ಗುಳಿಗ ದೈವವನ್ನು ಗುಳಿಗೆ ಎಂದು ವ್ಯಂಗ್ಯವಾಡಿದ್ದರು.


ಶಿವದೂತೆ ಗುಳಿಗ ನಾಟಕವೂ ಕೇವಲ ಕರಾವಳಿ ಮಾತ್ರವಲ್ಲದೇ ಮುಸ್ಲೀಂ ರಾಷ್ಟ್ರಗಳಾದ ಮಸ್ಕತ್‌, ಬೆಹರೇನ್‌, ದುಬೈ ಸೇರಿದಂತೆ ವಿದೇಶಗಳಲ್ಲೂ ಯಶಸ್ವಿ ಪ್ರದರ್ಶನಗೊಂಡಿದೆ. ಅಲ್ಲಿನ ಕರಾವಳಿಗರು ಹಿಂದೂ ಮುಸ್ಲಿಂ ಎಂಬ ಬೇಧ ಭಾವವಿಲ್ಲದೆ ಕರಾವಳಿಯ ಯಶಸ್ವಿ ನಾಟಕ ಎಂದು ಹೃತ್ಪೂರ್ವಕ ಬೆಂಬಲ ನೀಡಿದ್ದಾರೆ. ಮುಸ್ಲಿಂ, ಇಸ್ಲಾಮಿಕ್‌ ದೇಶಗಳಲ್ಲೇ ಇಲ್ಲದ ಅವಹೇಳನ ವಿರೋಧ ಕರಾವಳಿಯ ಸೋದರ ತಾಲ್ಲೂಕು ತೀರ್ಥಹಳ್ಳಿ ಅದೂ ಮಾಗಿದ ರಾಜಕಾರಣಿಯಾಗಿರುವ ಆರಗ ಜ್ಞಾನೇಂದ್ರರಿಂದಲೇ ಕೇಳಿ ಬಂದಿರುವುದು ವಿಪರ್ಯಾಸ. ದಕ್ಷಿಣ ಕನ್ನಡದ ಮೂಲದಿಂದ ತೀರ್ಥಹಳ್ಳಿಗೆ ಆಗಮಿಸಿದ ಬಹುತೇಕ ಕರಾವಳಿಗರು ಆರಗ ಜ್ಞಾನೇಂದ್ರರ ಬೆಂಬಲಕ್ಕೆ ಆರಂಭದಿಂದಲೂ ನಿಂತಿದ್ದಾರೆ. ಆ ಸಮುದಾಯ ಮೆಚ್ಚಿ ಆರಾಧಿಸುವ ದೈವದ ವಿರುದ್ಧವೇ ಆರಗ ಜ್ಞಾನೇಂದ್ರ ಸಡಿಲ ಪದಪ್ರಯೋಗ ಕರಾವಳಿಗರಿಗೆ ಹಾಗೂ ಮಲೆನಾಡಿಗರಿಗ ಆತಂಕದ ಜೊತೆಗೆ ಆಕ್ರೋಶ ಹುಟ್ಟಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಗರೂ ಟೀಕಿಸಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದರ ಹಿಂದೆ ಒಂದು ವಿರೋದ ಬರತೊಡಗಿವೆ.

ಗುಳಿಗೆ ಪದ ಬಳಕೆಯ ವಿಚಾರದಲ್ಲಿ ತೀವ್ರ ಆಕ್ರೋಶ ಹೊರಹೊಮ್ಮುತ್ತಿದ್ದಂತೆ ಎಚ್ಚರಗೊಂಡ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿಕೆಯಿಂದ ಯೂಟರ್ನ್‌ ಹೊಡೆದಿದ್ದು ಅವರು ನೀಡಿದ ಹೇಳಿಕೆ ಈ ಕೆಳಕಂಡಂತೆ ಇದೆ.

ನೆರೆಯ ತುಳು ನಾಡಿನಲ್ಲಿ, ಶ್ರದ್ಧಾ ಭಕ್ತಿಯಿಂದ ಆರಾಧಿಸುವ, ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಬಗ್ಗೆ ಮೆಚ್ಚುಗೆ ಇದೆ ಹಾಗೂ ದೈವದ ಬಗ್ಗೆ ಅಪಾರ ಭಕ್ತಿ  ಗೌರವವನ್ನು ಹೊಂದಿದ್ದೇನೆ.

ರಂಗಭೂಮಿಯ ಮೇಲೆ, ಆಧುನಿಕ ತಂತ್ರಜ್ಞಾನವನ್ನು  ಬಳಸಿಕೊಂಡು, ಯಶಸ್ವಿ ಪ್ರದರ್ಶನವನ್ನು ಕಲಾ ರಸಿಕರಿಗೆ ಪರಿಚಯಿಸುತ್ತಿರುವ ಕಲಾವಿದರು ಹಾಗೂ ವಿಶೇಷವಾಗಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಸೃಜನಶೀಲತೆ ಬಗ್ಗೆ ಅಭಿಮಾನ ಇದೆ.

ಆದರೆ ಜನರ ವಿಶ್ವಾಸ ಕಳೆದು ಕೊಂಡಿರುವ ತೀರ್ಥಹಳ್ಳಿಯ ಸ್ಥಳೀಯ ಕಾಂಗ್ರೆಸ್ ನಾಯಕರು ಕೇವಲ ರಾಜಕೀಯ ದುರುದ್ದೇಶದಿಂದ ಶಿವದೂತೆ ಗುಳಿಗ, ನಾಟಕದ ಪ್ರದರ್ಶನದ ಮೂಲಕ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹತಾಶ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದ್ದೇನೆಯೇ ಹೊರತು ನಾಟಕದ ಬಗ್ಗೆ ಅಥವಾ ದೈವದ ವಿರುದ್ಧ  ಮಾತನಾಡಿಲ್ಲ.

ಆದರೆ ನಾನಾಡಿದ ಮಾತುಗಳನ್ನು ಅಪಾರ್ಥ ಬರುವಂತೆ ಮೂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವ  ಕುಹಕಿಗಳ ಉದ್ದೇಶ ಈಡೇರುವುದಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇನೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post