ಗುಳಿಗೆ ಮಾತ್ರೆ ತೀರ್ಥಹಳ್ಳಿಯಲ್ಲಿ ನಡೆಯೊಲ್ಲ

ದಕ್ಷಿಣ ಕನ್ನಡ ಮೂಲದ ಜನರ ಆರಾಧ್ಯ ದೈವ ಶಿವದೂತೆ ಗುಳಿಗ ವಿರುದ್ಧ ಗೃಹಸಚಿವರ ಅಸಹನೆ…?

ಇಂದು ತೀರ್ಥಹಳ್ಳಿಯಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಭರ್ಜರಿಯಾಗಿ ನಡೆದಿದೆ. ಸದಾಕಾಲ ಕಾವೇರಿದ ಭಾಷಣ ಮಾಡಿದ ಸಿ.ಟಿ. ರವಿ, ಕೆ.ಎಸ್.‌ ಈಶ್ವರಪ್ಪ ಕೂಡ ಎಂದಿನಂತೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಭಾಷಣ ಮಾಡಿ ಸಿಳ್ಳೆ, ಚಪ್ಪಳೆ ಗಿಟ್ಟಿಸಿಕೊಂಡಿದ್ದಾರೆ.

ಕಾಕತಾಳಿಯ ಎಂದರೆ ನಿನ್ನೆ ಸಂಜೆಯಷ್ಟೇ ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳು ನಾಟಕ ರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ವಿಜಯಕುಮಾರ್‌ ಕೋಡಿಯಾಲಬೈಲು ನಿರ್ದೇಶನದ ಶಿವದೂತೆ ಗುಳಿಗ ಎಂಬ ತುಳು ನಾಟಕ ಕೂಡ ಕಡಿಮೆಯಂದರು ಏಳೆಂಟು ಸಾವಿರ ಪ್ರೇಕ್ಷಕರೆದುರು ಪ್ರದರ್ಶನಗೊಂಡು ದಾಖಲೆ ಬರೆದಿದೆ.

ಆದರೆ ಇದು ಆರಗ ಜ್ಞಾನೇಂದ್ರರ ಬದ್ಧ ರಾಜಕೀಯ ವೈರಿ ಕಿಮ್ಮನೆ ರತ್ನಾಕರ್‌ ಸಾರಥ್ಯದಲ್ಲಿ ನಡೆಯಿತು ಎಂಬ ಕಾರಣಕ್ಕಾಗಿ ಕೊಂಚ ರಾಜಕೀಯ ಲೇಪನದ ಛಾಯೆಯೂ ಈ ನಾಟಕದ ಮೇಲೆ ಪ್ರದರ್ಶನಕ್ಕೂ ಮೊದಲೇ ಆವರಿಸಿತ್ತು. ಸಂಘಟಕರು ಹತ್ತು ಸಾವಿರ ಜನ ಸೇರಲಿದ್ದಾರೆ ಎಂದು ಮೊದಲೇ ಘೋಷಿಸಿದ್ದರು.

ನಾಟಕದ ಈ ಭರ್ಜರಿ ಯಶಸ್ಸು ಗೃಹಸಚಿವರ ಮನಸ್ಸು ವಿಚಲಿತಗೊಳ್ಳಲು ಕಾರಣವಾಯಿತೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬರತೊಡಗಿದೆ. ಕಾರಣ ಇಂದು ತೀರ್ಥಹಳ್ಳಿಯ ಎಪಿಎಂಸಿ ಸಮೀಪ ನಡೆದ ರೈತ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಗೃಹಸಚಿವರು ಹತ್ತು ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಮಹಿಳೆಯರ ಕಿವಿ ಮೇಲೆ ಜಾಗವೇ ಇಲ್ಲ. ತೊಗೊಂಡು ಹೋಗಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ ಕೊಟ್ಟಿದ್ದಾರೆ. ಇಲ್ಲಿ ನಾನು ನೋಡಿದೆ ನಿನ್ನೆಯಿಂದ ಎಂಥದೋ ಗುಳಿಗೆ, ಗುಳಿಗೆ ಅಂತ ಹಾಕಿದ್ದಾರೆ. ವಾಲ್‌ ಪೋಸ್ಟ್‌ನಲ್ಲಿ ನಿನ್ನೆ ರಾತ್ರಿ ಎಂಥದೋ ನಾಟಕ. ಬಹಳ ಅಪಾಯ. ಇವರು ಯಾವ ಗುಳಿಗೆ ಕೊಡ್ತಾರೆ ಅಂಥ ಗೊತ್ತಿಲ್ಲ. ಜಾಪಾಳ್‌ ಮಾತ್ರೆ ಗುಳಿಗೆ ಕೊಟ್ರು ಕೊಡಬಹುದು. ಏಕೆಂದರೆ ಇವರು ಹೊಸ ಹೊಸ ನಾಟಕಗಳನ್ನು ಶುರುಮಾಡಿದ್ದಾರೆ ಎಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವಲಸಿಗರಾಗಿ ತೀರ್ಥಹಳ್ಳಿಯಲ್ಲಿ ನೆಲೆಸಿರುವವರನ್ನು ಪರೋಕ್ಷವಾಗಿ ಆರಗ ಜ್ಞಾನೇಂದ್ರ ನಿಂದಿಸಿದರೆ ಎಂಬ ಚರ್ಚೆ ಇದೀಗ ಆರಂಭವಾಗಿದೆ.

ಗುಳಿಗ ದೈವ ದಕ್ಷಿಣ ಕನ್ನಡ ಜನತೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವ ದೈವವಾಗಿದೆ. ಆ ದೈವವನ್ನು ಗುಳಿಗೆ ಎಂದು ಅಸಹನೆ, ವ್ಯಂಗ್ಯದಿಂದ ಮಾತನಾಡಿರುವುದು ಗೃಹಸಚಿವರು ಮಾತಿನಲ್ಲಿ ಸಮತೋಲನ ಕಾಯ್ದುಕೊಳ್ಳುತ್ತಿಲ್ಲ ಎಂಬುದಕ್ಕೆ ಉದಾಹರಣೆ ಎಂಬ ಅಭಿಪ್ರಾಯ ಕೇಳತೊಡಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post