ಮಾತು ತಪ್ಪಿದರೆ ಕಾಂಗ್ರೆಸ್‌ನಲ್ಲಿ ನಡೆಯುವುದೇ ಗಲಾಟೆ..?
ಊಹಾಪೋಹಗಳಿಗೆ ಕಾರಣವಾದ ಜಯಪ್ರಕಾಶ್ ಶೆಟ್ಟಿ ಮೌನ
ರೇಸ್‌ನಲ್ಲಿ ರತ್ನಾಕರ್ ಶೆಟ್ಟಿ, ರಹಮತುಲ್ಲಾ ಅಸಾದಿ,
ಬಿ.ಗಣಪತಿ

ಹಾಗೆ ನೋಡಿದರೆ ಸುಮಾರು 25 ವರ್ಷಗಳ ಬಳಿಕ ಕಳೆದ ವರ್ಷ
ಕಾಂಗ್ರೆಸ್ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿತ್ತು. ತೀರ್ಥಹಳ್ಳಿಯಲ್ಲಿ ಯಾರೇ ಶಾಸಕರಾದರೂ
ಪಟ್ಟಣ ಪಂಚಾಯಿತಿ ಅಧಿಕಾರ ಮಾತ್ರ ಬಿಜೆಪಿಯದ್ದು ಎಂಬ ವಾತಾವರಣ ಇತ್ತು. ಈ ಬಾರಿಯೂ ಕೂಡ ಪಟ್ಟಣ ಪಂಚಾಯಿತಿಯಲ್ಲಿ
ಅಧಿಕಾರ ಹಿಡಿಯಲೇಬೇಕು ಎಂದು ಕಡಿಮೆ ಎಂದರೂ ಎರಡು ವರ್ಷಗಳ ತಾಲೀಮು ನಡೆಸಿದ್ದ ಬಿಜೆಪಿ ಮತದಾರರಿಂದ
ತಿರಸ್ಕರಿಸಲ್ಪಟ್ಟಿತ್ತು. ವಿಶೇಷವೆಂದರೆ ಆ ಹೊತ್ತಿಗಾಗಲೇ ಆರ್.ಎಂ. ಮಂಜುನಾಥ ಗೌಡರು ಕಾಂಗ್ರೆಸ್‌ಗೆ
ಆಗಮಿಸಿದ ಕಾರಣ ಅವರ ಹಾಗೂ ಕಿಮ್ಮನೆ ರತ್ನಾಕರ್ ಅವರ ಹೊಂದಾಣಿಕೆ ಕೊರತೆಯ ಕಾರಣ ಚುನಾವಣೆಗೆ 15 ದಿನ
ಇರುವಾಗಲೂ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ಆಗಿರಲಿಲ್ಲ.
ಈ ಸಂದರ್ಭದಲ್ಲಿ ಬಹುತೇಕ ಅಭ್ಯರ್ಥಿಗಳ ಆಯ್ಕೆಯಿಂದ
ಹಿಡಿದು ಚುನಾವಣಾ ತಂತ್ರ ರೂಪಿಸುವ ತನಕ ತಮ್ಮ ಬೆಂಬಲಿಗರೊಂದಿಗೆ ಓಡಾಡಿದ ಮಂಜುನಾಥ ಗೌಡರ ಲೆಕ್ಕಾಚಾರ
ಮತ್ತು ಸತತ ಅಗತ್ಯ ವಸ್ತುಗಳ ಹಾಗೂ ಪೆಟ್ರೋಲ್, ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಕಾರಣ ಹೆಚ್ಚಾಗಿ
ಮಧ್ಯಮ ವರ್ಗದಲ್ಲಿ ವಾಸಿಸುವ ತೀರ್ಥಹಳ್ಳಿ ಪಟ್ಟಣ ಸುಧೀರ್ಘ ಕಾಲದ ನಂತರ ಬಿಜೆಪಿಯನ್ನು ತಿರಸ್ಕರಿಸಿ
ಕಾಂಗ್ರೆಸ್ ಜಯಭೇರಿ ಬಾರಿಸಿ ಆಡಳಿತ ಹಿಡಿಯಿತು.
ಆದರೆ ಹೆಚ್ಚಿನ ಸಂಖ್ಯೆಯ ಬಹುಮತವೇನು ಇರದ ಕಾರಣ ಆ
ಸಂದರ್ಭದಲ್ಲಿ ಆಪರೇಷನ್ ಕಮಲ ಭೀತಿ ಇದ್ದುದ್ದರಿಂದ ಗೆದ್ದ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳನ್ನು
ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿಸಿ ಯಾರೂ ಕೂಡ ಪಕ್ಷಾಂತರ ಮಾಡದಂತೆ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೂ
ಕೂಡ ಆರ್.ಎಂ. ಮಂಜುನಾಥ ಗೌಡ. ಮುಂದೆ ಮೊದಲ ಅವಧಿಯಲ್ಲಿ ಶಬನಮ್ ಅಧ್ಯಕ್ಷರಾಗಿ ಆಯ್ಕೆಯಾದರೆ ಎರಡನೇ
ಅವಧಿಯಲ್ಲಿ ಸುಶೀಲ ಶೆಟ್ಟಿ ಲಾಟರಿ ಮೂಲಕ ಅಧ್ಯಕ್ಷ ಪಟ್ಟ ಏರಿದ್ದಾರೆ. ಅದೇ ಸಂದರ್ಭದಲ್ಲಿ ಉಪಾಧ್ಯಕ್ಷ
ಸ್ಥಾನವನ್ನೂ ಕೂಡ ವಾಗ್ದಾನದಂತೆ ಬದಲಾಯಿಸಬೇಕೆಂಬ ಮಾತುಕತೆ ಆಗಿತ್ತು ಎನ್ನುತ್ತವೆ ಪಕ್ಷದ ಮೂಲಗಳು.
ಆದರೆ ಈ ಕುರಿತು ಜಯಪ್ರಕಾಶ್ ಶೆಟ್ಟಿ ಮೌನವಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾದಂತಿದೆ.
ವಾಗ್ದಾನದ ಪ್ರಕಾರ ಮುಂದಿನ ಸರದಿಯಲ್ಲಿ ರತ್ನಾಕರ್
ಶೆಟ್ಟಿ, ರಹಮತುಲ್ಲಾ ಅಸಾದಿ, ಪತ್ರಕರ್ತ ಬಿ ಗಣಪತಿ ಈ ಮೂವರಲ್ಲಿ ಒಬ್ಬರು ಉಪಾಧ್ಯಕ್ಷರಾಗಿ ಆಯ್ಕೆಯಾಗಬೇಕಿದೆ.
ಇವರಲ್ಲಿ ರತ್ನಾಕರ್ ಶೆಟ್ಟಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು ಉಳಿದ ಇಬ್ಬರು ಉಪಾಧ್ಯಕ್ಷ ಸ್ಥಾನದ
ರೇಸ್‌ನಲ್ಲಿ ಮುಂದಿದ್ದಾರೆ.
ಮೂಲಗಳ ಪ್ರಕಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್
ಕೂಡ ವಾಗ್ದಾನದಂತೆ ಜಯಪ್ರಕಾಶ್ ಶೆಟ್ಟಿ ಬೇರೆಯವರಿಗೆ ಅವಕಾಶ ಮಾಡಿಕೊಡುವುದು ಉತ್ತಮ ಎಂಬ ಅಭಿಪ್ರಾಯ
ವ್ಯಕ್ತಪಡಿಸಿದ್ದಾರಂತೆ. ಆರ್.ಎಂ. ಮಂಜುನಾಥ ಗೌಡ ಕೂಡ ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ
ಸ್ಥಾನಕ್ಕೂ ಕೂಡ ಅವಧಿ ನಿಗದಿಯಾಗಿತ್ತು ಎಂದಿದ್ದರು.
ಹಾಗಿದ್ದೂ ಕೂಡ ಜಯಪ್ರಕಾಶ್ ಶೆಟ್ಟಿ ಮೌನ ಈಗ ಕುತೂಹಲ ಹುಟ್ಟಿಸಿದೆ. ಸಾರ್ವಜನಿಕವಾಗಿ ಈಗಾಗಲೇ ಗೊತ್ತಿರುವಂತೆ ರಹಮತುಲ್ಲಾ ಅಸಾದಿ ಮತ್ತು ರತ್ನಾಕರ್ ಶೆಟ್ಟಿ ಆರ್.ಎಂ. ಮಂಜುನಾಥ ಗೌಡರೊಂದಿಗೆ ಹೆಚ್ಚು ನಿಕಟವಾಗಿ ಗುರುತಿಸಿಕೊಂಡಿದ್ದಾರೆ. ಜಯಪ್ರಕಾಶ್ ಶೆಟ್ಟಿ ಲಗಾಯ್ತಿನಿಂದಲೂ ಕಿಮ್ಮನೆ ಅವರೊಂದಿಗೆ ಗುರುತಿಸಿಕೊಂಡಿರುವವರು. ಅಲ್ಲದೇ ಅದಕ್ಕಿಂತಲೂ ಕಟ್ಟಾ ಕಾಂಗ್ರೆಸ್ಸಿಗ ಎಂದೇ ಚಿರಪರಿಚಿತರು. ಹಾಗಾಗಿ ಆರ್.ಎಂ. ಮಂಜುನಾಥ ಗೌಡ ಮತ್ತು ಕಿಮ್ಮನೆ ರತ್ನಾಕರ್ ನಡುವೆ ಈ ವಿಚಾರದಲ್ಲಿ ನೇರ ಮುಸಿಕಿನ ಗುದ್ದಾಟ ಇಲ್ಲದಿದ್ದರೂ ಕಿಮ್ಮನೆ ಬೆಂಬಲಿಗರ ಲೆಕ್ಕಾಚಾರದ ಕಾರಣಕ್ಕಾಗಿಯೇ ಜಯಪ್ರಕಾಶ್ ಶೆಟ್ಟಿ ರಾಜೀನಾಮೆ ನೀಡಬಾರದು ಎಂಬ ಒಳ ರಾಜಕೀಯ ಇದೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬಂದಿದೆ. ಮುಂದೆ ಇದು ಅನಿರೀಕ್ಷಿತ ತಿರುವುಗಳನ್ನು ಪಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.