ಒಪ್ಪಂದ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸೀಕೆ
ಪ್ರಸನ್ನ ಕುಮಾರ್
27 ವರ್ಷಗಳ ಕಾಲ ಅಧಿಕಾರ ನಿರ್ವಹಿಸಿದ ಪ್ರಸನ್ನ ಕುಮಾರ್
ಮಹತ್ವದ ಬೆಳವಣಿಗೆಯಿಂದಾಗಿ ತಾಲ್ಲೂಕಿನ ಅತ್ಯಂತ ಪ್ರತಿಷ್ಠಿತ ಮಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸೀಕೆ ಪ್ರಸನ್ನ ಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ.
ಸುಮಾರು ಏಳೆಂಟು ಕೋಟಿ ವಾರ್ಷಿಕ ವಹಿವಾಟು ಹೊಂದಿರುವ ಮಾಳೂರು ಪ್ರಾಥಮಿಕ
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸುಮಾರು 27 ವರ್ಷ ಕಾರ್ಯ ನಿರ್ವಹಿಸಿದ ಪ್ರಸನ್ನ ಕುಮಾರ್
ಸಂಘಕ್ಕೆ ಪ್ರಸಿದ್ಧಿಯ ಹೆಗ್ಗಳಿಕೆ ತಂದು ಕೊಟ್ಟಿದ್ದರು. ನಷ್ಟದಲ್ಲಿದ್ದ ಸಂಘಕ್ಕೆ ವ್ಯವಹಾರಿಕವಾಗಿ
ಚುರುಕು ಮುಟ್ಟಿಸಿ ರೈತರ ವಿಶ್ವಾಸ ಸಂಪಾದಿಸಿ ಸಂಘವನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸುವಲ್ಲಿ ಪ್ರಸನ್ನ
ಕುಮಾರ್ ಯಶಸ್ವಿಯಾಗಿದ್ದರು.
3 ವರ್ಷದ ಹಿಂದೆ ಆಡಳಿತ ಮಂಡಳಿಯ ನಿರ್ದೇಶಕ ಮಂಡಳಿಯ ಸ್ಥಾನಕ್ಕೆ ನಡೆದ
ಚುನಾವಣೆ ಅತ್ಯಂತ ಪೈಪೋಟಿಯಿಂದ ಕೂಡಿತ್ತು. ಈ ಸಂದರ್ಭ ಸಂಘದೊಳಗೆ ಕೆಲವೊಂದು ರಾಜಕೀಯ ಚಟುವಟಿಕೆಯ
ಬೆಳವಣಿಗೆಗಳು ಆರಂಭವಾಯಿತು. ಚುನಾವಣೆಯಲ್ಲಿ ಗೆಲುವು ಸೋಲಿನ ಲೆಕ್ಕಾಚಾರಗಳು ಬಲವಾಗಿ ನಡೆದು ಪ್ರತಿಷ್ಠೆಯ
ಕಣವಾಗಿ ಹೊರ ಹೊಮ್ಮಿತ್ತು. ಕೊನೆಗೆ ಪ್ರಸನ್ನ ಕುಮಾರ್ ಸೇರಿದಂತೆ ಅನೇಕರು ಗೆಲುವು ಸಾಧಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸಂದರ್ಭ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದ
ಹಿನ್ನೆಲೆಯಲ್ಲಿ ಪ್ರಮುಖರ ಸಮ್ಮುಖ ನಡೆದ ಮಾತುಕತೆ ಮೂಲಕ ಪ್ರಸನ್ನ ಕುಮಾರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ
ಸೂಚಿಸಲಾಗಿತ್ತು. ಒಟ್ಟು ಅಧಿಕಾರವಧಿಯ ಐದು ವರ್ಷದಲ್ಲಿ ಎರಡೂವರೆ ವರ್ಷ ಪ್ರಸನ್ನ ಕುಮಾರ್ ಅಧ್ಯಕ್ಷ
ಸ್ಥಾನ ನಿರ್ವಹಿಸಬೇಕು ಎಂಬ ಒಪ್ಪಂದ ಮಾಡಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿದೆ.
ಒಪ್ಪಂದ ಅವಧಿ ಮುಗಿದು ನಾಲ್ಕಾರು ತಿಂಗಳು ಕಳೆದರೂ ಪ್ರಸನ್ನ ಕುಮಾರ್
ಅಧ್ಯಕ್ಷ ಸ್ಥಾನ ತ್ಯಜಿಸಲು ಮುಂದಾಗಲಿಲ್ಲ. ಅನೇಕ ಕಾರಣ ಮುಂದಿಟ್ಟು ಪ್ರಸನ್ನ ಕುಮಾರ್ ಅಧ್ಯಕ್ಷ
ಸ್ಥಾನದಲ್ಲಿ ಮುಂದುವರೆಯುತ್ತಲೇ ಬಂದರು. ಅನೇಕರ ಮಧ್ಯಸ್ಥಿಕೆಯ ನಂತರ ಸುಮಾರು ಎರಡು ತಿಂಗಳ ಹಿಂದೆ
ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಕುಮಾರ್ ರಾಜೀನಾಮೆ ಸಲ್ಲಿಸಿದ್ದರು. ಅಂಗೀಕಾರದ ಮುನ್ನವೇ ಪ್ರಸನ್ನ
ಕುಮಾರ್ ದಿಢೀರನೇ ಕೊಟ್ಟ ರಾಜೀನಾಮೆಯನ್ನು ಹಿಂಪಡೆದಿದ್ದರು. ನಂತರದಲ್ಲಿ ಸಹಕಾರಿ ಕ್ಷೇತ್ರದ ಘಟಾನುಘಟಿಗಳ
ಗಮನ ಸೆಳೆದ ರಾಜೀನಾಮೆ ಹಿಂತೆಗೆತ ಪ್ರಕರಣ ರಾಜಕೀಯವಾಗಿಯೂ ಕುತೂಹಲಕಾರಿ ಬೆಳವಣಿಗೆ ಸೃಷ್ಟಿಸಿತ್ತು.
ಎಲ್ಲಾ ಒತ್ತಡಗಳ ನಡುವೆ ಮಾತಿನ ಒಪ್ಪಂದಕ್ಕೆ ಬೆಲೆಯೇ ಇಲ್ಲದಂತಹ ಸಂದರ್ಭವೂ ಘಟಿಸಿತು. ಅಂತೂ ಇಂತು
ಕೊನೆಗೆ ಅಳೆದು ತೂಗಿ ಪ್ರಸನ್ನ ಕುಮಾರ್ ಒಪ್ಪಂದದ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ
ಹೊಸ ಅಧ್ಯಕ್ಷರ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
