ಕೆಲವೇ ಗಂಟೆಯಲ್ಲಿ 10 ಸಾವಿರ ಕುಸಿತ
ಕೇಂದ್ರ ಸರ್ಕಾರ ತಕ್ಷಣ ಆಮದು ನಿರ್ಧಾರ ಕೈಬಿಡಲಿ
ಕನಿಷ್ಠ
ಆಮದು ಬೆಲೆ (ಎಂಐಪಿ) ಷರತ್ತು ಇಲ್ಲದೆ ಕೇಂದ್ರ ಸರ್ಕಾರ ಅಡಿಕೆ ಆಮದು ನಿರ್ಧಾರವನ್ನು ಪ್ರಕಟಿಸಿದ
ಕೆಲವೇ ಗಂಟೆಗಳಲ್ಲಿ ಮಾರುಕಟ್ಟೆ ಧಾರಣೆ 10 ಸಾವಿರಕ್ಕೆ ಕುಸಿದಿದೆ. ಕೇಂದ್ರ ಸರ್ಕಾರ ತಕ್ಷಣ
ಅಮದು ನಿರ್ಧಾರವನ್ನು ಹಿಂಪಡೆಯಬೇಕು ಎಂದು ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಸಂಚಾಲಕ ಕಡ್ತೂರು ದಿನೇಶ್
ಆಗ್ರಹಿಸಿದರು.
ಶನಿವಾರ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಭೂತಾನ್ ಅಡಿಕೆ ಆಮದು ಮಲೆನಾಡು ಭಾಗದ ರೈತರ ಪಾಲಿಗೆ ಮರಣ ಶಾಸನ. ರೈತರು ಇದರ ವಿರುದ್ಧ ಗಟ್ಟಿ ಧ್ವನಿಗೂಡಿಸದೇ ಇದ್ದರೆ ಇನ್ನೊಂದು ತಿಂಗಳಲ್ಲಿ ಅಡಿಕೆ ಬೆಲೆ 25 ಸಾವಿರ ಲಭಿಸುವುದು ಕಷ್ಟ ಎಂದು ಆತಂಕ ವ್ಯಕ್ತಪಡಿಸಿದರು.
ಮಲೆನಾಡು ಭಾಗದಲ್ಲಿ ಅಡಿಕೆ ಕೊಯ್ಲು ಇದೀಗ ಆರಂಭವಾಗುತ್ತಿದೆ. ಹಳದಿ ರೋಗ, ಬೇರುಹುಳು, ಎಲೆಚುಕ್ಕಿ, ಕೊಳೆ ರೋಗಗಳಿಂದ ಫಸಲು ರಕ್ಷಿಸಿಕೊಂಡ ರೈತರನ್ನು ಸರ್ಕಾರ ಸಂಕಷ್ಟಕ್ಕೆ ತಳ್ಳಿದೆ. ಮಾರುಕಟ್ಟೆಗೆ ಅಡಿಕೆ ತಲುಪುವ ಸಂದರ್ಭದಲ್ಲಿ ಇಂತಹ ನಿರ್ಧಾರ ರೈತ ವಿರೋಧಿಯಾಗಿದೆ. ದೇಶದಲ್ಲಿ 12 ಲಕ್ಷ ಟನ್‌ಗೂ ಹೆಚ್ಚು ಅಡಿಕೆ ಉತ್ಪಾದನೆ ಇರುವಾಗ 17 ಸಾವಿರ ಅಡಿಕೆ ಅಮದು ಅವಶ್ಯಕತೆ ಇದೆಯೇ. ಉದ್ಯಮಿಗಳ ಲಾಭಕ್ಕೆ ಮಣಿದು ರೈತರ ಕತ್ತು ಹಿಸುಕುವುದನ್ನು ಒಪ್ಪಿಕೊಳ್ಳಲಾಗದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2007ರಲ್ಲಿ ಅಡಿಕೆ ಬೆಳೆಗೆ ಆತಂಕ ಎದುರಾದಾಗ ಉತ್ತರ ಪ್ರದೇಶದ ನೋಯ್ಡದಲ್ಲಿ ಸಂಸತ್ ಸದಸ್ಯರು ಅಡಿಕೆ ಖರೀದಿ ಕಂಪನಿಯ ಮಾಲೀಕರು ಸಭೆ ನಡೆಸಿ ರೈತರ ಪರವಾಗಿ ಹೋರಾಟ ಮಾಡಿದ್ದರು. ಪರಿಣಾಮವಾಗಿ ಅಡಿಕೆಗೆ ಉತ್ತಮ ಧಾರಣೆ ಲಭಿಸಿತು. ಅಧಿಕಾರಸ್ಥರು ಧಾರಣೆ ಕಡಿಮೆಯಾದಾಗ ಸ್ಪಷ್ಟನೆ ನೀಡಿ ಸರ್ಕಾರವನ್ನು ಸಮರ್ಥಿಸುವುದು ಸರಿಯಲ್ಲ. ರೈತರ ಪರವಾಗಿ ತಕ್ಷಣ ಸಂಸದರು, ಸಚಿವರು, ಶಾಸಕರ ನಿಯೋಗದ ಮೂಲಕ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾರೋಗೊಳಿಗೆ ಪದ್ಮನಾಭ ಇದ್ದರು.



.jpeg)