ದಂಧೆಕೋರರಿಗೆ ಸಿಂಹಸ್ವಪ್ನವಾದ ಅಧಿಕಾರಿ
ಮಾರುವೇಷದಲ್ಲಿ ಟಿಪ್ಪರ್ ಲಾರಿ ವಶಕ್ಕೆ ಪಡೆದ ಅಮಿತ್ ಎಸ್.
ಮರಳು ದಂಧೆಕೋರರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಮಂಡಗದ್ದೆ ಅರಣ್ಯ ಅಧಿಕಾರಿಗಳು ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ತಡರಾತ್ರಿ ಟಿಪ್ಪರ್ ಮೂಲಕ ಅಕ್ರಮ ಮರಳು ಸಾಗಿಸುವ ಖಚಿತ ಮಾಹಿತಿ ಮೇರೆಗೆ ಉಪ ವಲಯಾರಣ್ಯಾಧಿಕಾರಿ ಅಮಿತ್ ಎಸ್ ಮಾರುವೇಷದಲ್ಲಿ ಲಾರಿಯನ್ನು ಹಿಡಿಯುವ ಮೂಲಕ ದಂಧೆಗೆ ಕಡಿವಾಣ ಹಾಕಿದ್ದಾರೆ. ಮಂಡಗದ್ದೆ ಭಾಗದಲ್ಲಿ ದನ ಕಳ್ಳತನ, ಅಕ್ರಮ ಮರ ಕಡಿತಲೆ, ಸಾಗಾಟದ ವಿರುದ್ಧ ಕಠಿಣ ಕ್ರಮ ಜರುಗಿಸಿರುವ ಅವರು ಇದೀಗ ಮರಳಿನ ಅಕ್ರಮ ಜಾಡು ಬೇಧಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಮಂಡಗದ್ದೆಯ ಸಮೀಪದ ಮುಡುಬದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಇಲಾಖೆಗೆ ಸ್ಥಳೀಯರಿಂದ ಖಚಿತ ಮಾಹಿತಿ ಲಭಿಸುತ್ತಿದ್ದಂತೆ ಅಮಿತ್ ಎಸ್ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ದಂಧೆಗೆ ಕಡಿವಾಣ ಹಾಕಬೇಕೆಂಬ ನಿಟ್ಟಿನಲ್ಲಿ ವಿವಿಧ ಭಾಗದಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ಮಾರುವೇಷದಲ್ಲಿ ಲಾರಿಗಳ ಆಗಮನದ ನಿರೀಕ್ಷೆಯಿಂದ ದಾಳಿ ನಡೆಸಿ ದಂಧೆಕೋರರನ್ನು ಹಿಡಿಯುವ ಜೊತೆಗೆ ಲಾರಿಯನ್ನು ಜಪ್ತಿ ಮಾಡಿ ಅರಣ್ಯ ಇಲಾಖೆಯ ಸುಪರ್ದಿಗೆ ಪಡೆದುಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ಮಹಾದೇವ, ಕಿರಣ್, ವಾಹನ ಚಾಲಕ ಪ್ರವೀಣ್ ಇದ್ದರು.