ಭಾರತದ ವೈವಿದ್ಯತೆಯನ್ನು ಇಲ್ಲಿ ಕಂಡೆ.....

ವಿದ್ಯೆ ಎಲ್ಲವನ್ನೂ ನೀಡುತ್ತದೆ...

ಭಾರತವನ್ನೇ ಇಲ್ಲಿ ಕಂಡ ಹಾಗಿದೆ. ಇಲ್ಲಿ ಎಲ್ಲ ಧರ್ಮ, ಜಾತಿಯವರು ಸಂಭ್ರಮ ದಿಂದ ಪರಸ್ಪರರ ಮಕ್ಕಳ ಸಾಧನೆ ಕಂಡು ಬೆನ್ನು ತಟ್ಟುವುದು ನೋಡಿದಾಗ ಹೆಮ್ಮೆ ಆಗುತ್ತದೆ. ಇಂತಹ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸುವ ನ್ಯಾಷನಲ್ ಸಂಸ್ಥೆ ಕಾಳಜಿ ಅಭಿನಂದನೀಯ ಎಂದು ಶಿವಮೊಗ್ಗ ಕೆನರಾ ಬ್ಯಾಂಕ್ ಡಿಜಿಎಂ ಸಂಜೀವ್ ಕುಮಾರ್ ಅಭಿಪ್ರಾಯಿಸಿದರು.

ವಿದ್ಯಾಧಿರಾಜ ಸಭಾ ಭವನದಲ್ಲಿ ನ್ಯಾಷನಲ್ ಸಮೂಹ ಸಂಸ್ಥೆ, ಹಾಜಿ ಶೇಖ್ ಅಹಮದ್ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಆರೋಗ್ಯಕರ ಸಮಾಜವನ್ನು ಕಟ್ಟುವಂತಹ ಮನಸ್ಸನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಶೈಕ್ಷಣಿಕವಾಗಿ ತೋರಿದ ಸಾಧನೆಯನ್ನು ಸಾಮಾಜಿಕ ಬದಲಾವಣೆಯ ಆಶಯಗಳಿಗೂ ಬಳಕೆ ಮಾಡಿಕೊಳ್ಳಬೇಕು. ದೂರದೃಷ್ಟಿಯ ಗುರಿ ಇದ್ದಾಗ ಸಾಧನೆಯ ಹಾದಿ ಸುಗಮವಾಗಿರುತ್ತದೆ.ಸಾಮಾಜಿಕ ಜವಾಬ್ದಾರಿ ಹೊಂದುವ ಪ್ರತಿಯೊಬ್ಬ ಮಗುವು ದೇಶದ ಸಂಪತ್ತು. ವೈವಿಧ್ಯಮಯ ಭಾರತದ ಕನಸುಗಳು ನಿಮ್ಮಿಂದ ಇನ್ನಷ್ಟು ಸಕಾರವಾಗಲಿ ಎಂದು ಹಾರೈಸಿದರು.

“2006ರಿಂದ ತಂದೆ ಹಾಜಿ ಶೇಕ್ ಅಹಮದ್ ಸಾಹೇಬ್ ಅವರ ಆಶಯದಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳುತ್ತಿದ್ದೇವೆ.ವಿದ್ಯೆ ಎಲ್ಲವನ್ನು ನೀಡುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಪ್ರಸಕ್ತ ಸಾಲಿನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ₹16.75 ಲಕ್ಷ ವೆಚ್ಚದ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಬೆಳೆದ ನಂತರ ಪುನಃ ಸಮಾಜಕ್ಕೆ ಹಿಂದಿರುಗಿಸಿ ತಮ್ಮಂತೆಯೇ ಬೆಳೆಯುವ ಮಕ್ಕಳಿಗೆ ಪ್ರೋತ್ಸಾಹಿಸುವ ಔದಾರ್ಯತೆ ತೋರಬೇಕು. ಸಾಮಾಜಿಕ ಹೊಣೆಗಾರಿಕೆ ನಿಮ್ಮದಾಗಲಿ” ಎಂದು ಟ್ರಸ್ಟಿ ಯೂಸೂಫ್ ಹೈದರ್ ತಿಳಿಸಿದರು.

“ನ್ಯಾಷನಲ್ ಸಮೂಹ ಸಂಸ್ಥೆ ಉದ್ಯಮದ ಜೊತೆಗೆ ಸಮಾಜದ ಋಣ ತೀರಿಸುವ ಹೊಣೆಗಾರಿಕೆ ನಿರ್ವಹಿಸುತ್ತಿದೆ” ಎಂದು ಟ್ರಸ್ಟಿ ಅಬ್ದುಲ್ ರೆಹಮಾನ್ ಹೇಳಿದರು.

ಸಂಸ್ಥೆಯ ಮುಖ್ಯಸ್ಥ ಇಬ್ರಾಹಿಂ ಷರೀಫ್, ಸುಲೇಮಾನ್, ಅಬ್ದುಲ್ ಕಲಾಂ ಆಜಾದ್, ಮೊಹಿಯುದ್ದೀನ್ ಕಬೀರ್, ತೀರ್ಥಹಳ್ಳಿ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಗೌರವ್ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post