ಸಕಲೇಶಪುರದಲ್ಲಿ ಹಿಡಿದು ಬಿಟ್ಟ ಆನೆ ?

ಕಲ್ಗುಂಡಿ, ಪಟಮಕ್ಕಿಯಲ್ಲಿ ದಾರಿಗಾಗಿ ಹುಡುಕಾಟ
ರೇಡಿಯೋ ಕಾಲರ್ ಅಳವಡಿಸಿದ ಆನೆ
ಶಾಸಕರ ಊರಿಗೂ ಬಂತು ಒಂಟಿ ಕಾಡಾನೆ


ತೀರ್ಥಹಳ್ಳಿ ತಾಲ್ಲೂಕಿನ ಕುಚ್ಚಲು ಸಮೀಪ ಕಾಣಿಸಿಕೊಂಡಿದ್ದ ಕಾಡಾನೆ ಇದೀಗ ಆರಗದ ಕಲ್ಗುಂಡಿ ಸಮೀಪ ಕಾಣಿಸಿಕೊಂಡಿದೆ. ಬೆಳಗಿನ ಜಾವ ಓಡಾಟ ಆರಂಭಿಸಿರುವ ಆನೆ ಸುಮಾರು 50 ಕಿ.ಮೀ. ಕ್ರಮಿಸಿದೆ‌. ಬೆಳಗ್ಗೆ ವಾಸ್ತವ್ಯ ಹೂಡಲು ಸರಿಯಾದ ಜಾಗ ಹುಡುಕುತ್ತಿದ್ದು ಎಲ್ಲಿ ನಿದ್ರಿಸಲಿದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಆನೆಗೆ ರೇಡಿಯೋ ಕಾಲರ್ ಅಳವಡಿಸಿದ್ದು ಆನೆ ನಡೆದ ದಾರಿಗಳ ಬಗ್ಗೆ ಅರಣ್ಯ ಇಲಾಖೆಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿದೆ. ಆದರೆ ರೇಡಿಯೋ ಕಾಲರ್ ಅಪ್ಡೇಟ್ ವಿಚಾರದಲ್ಲಿ ತೀರಾ ನಿಧಾನವಾಗಿದ್ದು ಮೂರು, ನಾಲ್ಕು ಗಂಟೆಗಳಿಗೊಮ್ಮೆ ಮಾತ್ರ ಅಪ್ಡೇಟ್ ಆಗುತ್ತಿರುವುದು ತಲೆಬಿಸಿಗೆ ಕಾರಣವಾಗುತ್ತಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿದೆ.

ಈಗ ಭದ್ರ ಅಭಯಾರಣ್ಯ ವ್ಯಾಪ್ತಿಯಿಂದ ತಪ್ಪಿಸಿಕೊಂಡ ಸುಮಾರು 15 ವರ್ಷದ ಈ ಗಂಡಾನೆ ಸಕಲೇಶಪುರದಲ್ಲಿ ಈಚೆಗೆ ಕಂಡುಬಂದಿತ್ತು. ಅಲ್ಲದೇ ಆನೆಯ ಕಾಲ್ತುಳಿತಕ್ಕೂ ಜನ ಸತ್ತಿದ್ದಾರೆಂಬ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ಹಿಡಿದ ಪುಂಡಾನೆಗಳನ್ನು ಭದ್ರಾ ಆಭಯಾರಣ್ಯಕ್ಕೆ ತಂದು ಬಿಡಲಾಗುತ್ತಿದ್ದು ಅದನ್ನು ಸರಿಯಾಗಿ ವನ್ಯಜೀವಿ ವಿಭಾಗದ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪುಂಡಾಟದ ಆನೆ ಊರಿಗೆ ನುಗ್ಗುತ್ತಿದ್ದರು ವನ್ಯಜೀವಿ ಅರಣ್ಯ ಸಿಬ್ಬಂದಿಗಳು ಹಿಮ್ಮೆಸುವಲ್ಲಿ ಸೋಲುತ್ತಿದ್ದಾರೆ. ಜೊತೆಗೆ ಉಡಾಫೆ ಧೋರಣೆ ಮುಂದುವರೆಸಿದ್ದಾರೆಂದು ಹೇಳಲಾಗುತ್ತಿದೆ.

ಆನೆ ನಡೆದ ದಾರಿಗಳು :-

ಮುತ್ತಿನಕೊಪ್ಪದ ಮೂಲಕ ತುಂಗಾ ನದಿ ದಾಟಿ ಮುಡುಬ ಪೆಟ್ರೋಲ್ ಬಂಕ್, ಉಬ್ಬೂರು ಘಟ್ಟ, ಮಣಿವೆ, ಉಬ್ಬೂರು, ಕುಚ್ಚಲು, ಬಾಳೇಗುಡ್ಡ ಕಾಡಿನಲ್ಲಿ ನಿದ್ರೆ, ಹಿರೇಬೈಲು, ಸೀಕೆ, ಕಾನಳ್ಳಿ, ದಾನಸಾಲೆ, ಹೊಸಬೀಡು, ಏಳುಮನೆ ಮಾರ್ಗ, ಕೋಣಂದೂರು, ಅರಳಸುರಳಿ, ನೊಣಬೂರು, ಗುಡ್ಡೇಕೊಪ್ಪ, ಕಲ್ಗುಂಡಿ, ಪಟಮಕ್ಕಿ.

ದಾರಿ ತಪ್ಪಿದ ಆನೆ :-

ಸಕಲೇಶಪುರದಿಂದ ಭದ್ರಾ ಅಭಯಾರಣ್ಯಕ್ಕೆ ಆನೆ ತಂದು ಬಿಟ್ಟಿದ್ದು ಅಲ್ಲಿನ ಕಾಡಾನೆ ಹಿಂಡಿನೊಂದಿಗೆ ಆನೆ ಸೇರಿಕೊಳ್ಳಬೇಕು. ಅದು ಅಷ್ಟು ಸುಲಭದ ವಿಚಾರವಲ್ಲ. ಜೊತೆಗೆ ಮರಿಯಾನೆಯಾದ್ದರಿಂದ ದೊಡ್ಡ ಆನೆಗಳು ಕಾಳಗಕ್ಕೆ ಆಹ್ವಾನ ಮಾಡುತ್ತವೆ. ಒಂದುವೇಳೆ ಸೋತರೆ ಹಿಂಡಿನಿಂದ ಹೊರದಬ್ಬುತ್ತವೆ. ಬಲಿಷ್ಟ ಆನೆಗಳ ಜೊತೆಗೆ ಕಾಳಗ ಮಾಡಲು ಹೆದರಿದ ಗಂಡಾನೆ ಭದ್ರಾ ಅಭಯಾರಣ್ಯ ವ್ಯಾಪ್ತಿಯಿಂದ ತಪ್ಪಿಸಿಕೊಂಡಿದೆ. ತನ್ನ ಹಿಂದಿನ ವಾಸಸ್ಥಳಗಳನ್ನು ಹುಡುಕುವುದಕ್ಕೆ ಮುಂದಾಗಿದೆ. ಭದ್ರಾದಿಂದ ಸಕಲೇಶಪುರ ಓಡಾಡಲು ಈಗಾಗಲೇ ಇತರೆ ಆನೆಗಳು ನಡೆದ ದಾರಿಗಳು ಸಿಕ್ಕರೆ ಹೋಗಲು ಸಲೀಸಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಹಾಗಾಗಿಲ್ಲ. ಆ‌ನೆ ಹೊಸ ದಾರಿ ಮಾಡುತ್ತಿದೆ.

ಹಾಗಾಗಿಯೇ ತೀರ್ಥಹಳ್ಳಿ ಪ್ರವೇಶಿಸಿರುವ ಆನೆ ಆರಗಕ್ಕೆ ಬಂದಿದೆ. ಅಲ್ಲಿಂದ ಕೊಂಡ್ಲೂರು, ಸಾಲೂರು, ಕವಲೇದುರ್ಗಾ, ಯಡೂರು, ಮಾಸ್ತಿಕಟ್ಟೆ ಮೂಲಕ ವರಾಹಿ ಹಿನ್ನೀರು ತಲುಪುವ ಪ್ರಯತ್ನ ನಡೆಸಬೇಕು. ಹೀಗೆ ಹೋದ ಆನೆ ತೀರ್ಥಹಳ್ಳಿಯ ಹುರುಳಿ, ಗಾರ್ಡರಗದ್ದೆ, ಕೊರನಕೋಟೆ, ನಾಲೂರು, ಇಳಿಮನೆ, ಬೋಳುಗುಡ್ಡ ಮಾರ್ಗವಾಗಿ ಆಗುಂಬೆ ಪ್ರವೇಶಿಸಬೇಕು. ನಂತರ ಸಕಲೇಶಪುರದಿಂದ ವರ್ಷ ಬರುವ ಒಂಟಿ ಕಾಡಾನೆಯ ಹಾದಿ ಹಿಡಿದು ಪುನಃ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಮೂಲಕ ಸಕಲೇಶಪುರ ಪ್ರವೇಶಿಸಬೇಕಿದೆ. ಇಷ್ಟೆಲ್ಲ ಸಾಧ್ಯತೆಗಳು ನಡೆಯಬೇಕಾದರೆ ಕನಿಷ್ಟ ಆನೆಗೆ 15 ದಿನಗಳು ಅವಶ್ಯಕವಾಗಿದೆ. ಅಥವಾ ಎರಡೇ ದಿನದಲ್ಲಿ ನಡೆದು ಮುಗಿಸಲೂ ಬಹುದು. ಒಟ್ಟಿನಲ್ಲಿ ವನ್ಯಜೀವಿ ವಿಭಾಗ, ಸಾರ್ವಜನಿಕರು ಸಹಭಾಗಿತ್ವದಲ್ಲೇ ನಡೆಯಬೇಕಿದೆ. ಇಲ್ಲದಿದ್ದರೆ ಆನೆಯನ್ನು ಸೆರೆಹಿಡಿದು ಪುನಃ ಕಾಡಿಗೆ ಅಟ್ಟಬೇಕು. ಅಥವಾ ಪಳಗಿಸಬೇಕು.

ದೇವಂಗಿ ಕಾಡಿನಲ್ಲಿ ಕಳೆದ ವರ್ಷ ಮರಿಯಾನೆ ಹಿಡಿದು ನಾಗರಹೊಳೆ ವನ್ಯಜೀವಿ ವಿಭಾಗಕ್ಕೆ ಬಿಡಲಾಗಿತ್ತು. ಅದೇ ರೀತಿಯಲ್ಲಿಯೇ ಈ ಆನೆಯನ್ನು ಸಕಲೇಶಪುರದಿಂದ ಇಲ್ಲಿಗೆ ತರಲಾಗಿದೆ. ಆದರೆ ಆನೆಯ ಬಗ್ಗೆ ಭದ್ರಾ ಅಭಯಾರಣ್ಯ ವಿಭಾಗ ತೆಗೆದುಕೊಂಡ ನಿರ್ಲಕ್ಷ ಧೋರಣೆಯಿಂದಾಗಿ ಆನೆ ಪುನಃ ನಗರ ಪ್ರದೇಶಕ್ಕೆ ನುಗ್ಗುತ್ತಿದೆ. ಅಲ್ಲದೇ ಈಗಾಗಲೇ ಡಾಟ್ ಆಗಿರುವ ಆನೆಗೆ ಪದೇ ಪದೇ ಮದ್ದು ಹೊಡೆಯುವುದು ಕೂಡ ಆನೆಯ ಜೀವಕ್ಕೆ ಅಪಾಯವಾಗಿದೆ. ಇವೆಲ್ಲವನ್ನು ಮುಂದಿಟ್ಟುಕೊಂಡು ಆನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಯುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post