ತೀರ್ಥಹಳ್ಳಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿ

ಕನ್ನಡದ ಭವನದಲ್ಲಿ ಅಭಿನಂದನೆ ಹಾಗೂ ವ್ಯಂಗ್ಯಚಿತ್ರ ಪ್ರಾತ್ಯಕ್ಷಿಕೆ

ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವ್ಯಂಗ್ಯಚಿತ್ರ ಮಿತ್ರರ ಬಳಗದ ಆಶ್ರಯದಲ್ಲಿ ಎಪ್ರಿಲ್ 14 ರಂದು ಸಂಜೆ 4.30ಕ್ಕೆ ಬಾಳೇಬೈಲಿನ ಕನ್ನಡ ಭವನದಲ್ಲಿ ವ್ಯಂಗ್ಯಚಿತ್ರ ಪ್ರಾತ್ಯಕ್ಷಿಕೆ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿಗೆ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ವಹಿಸಲಿದ್ದಾರೆ. ವ್ಯಂಗ್ಯಚಿತ್ರಕಾರ, ಸಾಹಿತಿ, ನಿವೃತ್ತ ಪ್ರಾಧ್ಯಾಪಕ ನಟರಾಜ್ ಅರಳಸುರುಳಿ ಅಭಿನಂದನಾ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುನ್ನೂರು ಮೋಹನ್ ಮತ್ತು ಪತ್ರಕರ್ತ ಹಾಗೂ ವ್ಯಂಗ್ಯಚಿತ್ರಕಾರ ರಾಂಚಂದ್ರ ಕೊಪ್ಪಲು ಇರಲಿದ್ದಾರೆ. ಕಲೆ, ಸಾಹಿತ್ಯ ಮತ್ತು ವ್ಯಂಗ್ಯಚಿತ್ರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ವಿನಂತಿಸಿದ್ದಾರೆ.

ಪ್ರಕಾಶ್ ಶೆಟ್ಟರ ಪರಿಚಯ-

ʼಸಂತೋಷ' ನಿಯತಕಾಲಿಕದಲ್ಲಿ ತಮ್ಮ ಕಾರ್ಟೂನ್ ವೃತ್ತಿಯನ್ನು ಆರಂಭಿಸಿದ ಪ್ರಕಾಶ್ ಅನಂತರ ಬೆಂಗಳೂರಿನ 'ಟೈಮ್ಸ್ ಆಫ್ ಡೆಕನ್' ಆಂಗ್ಲ ದೈನಿಕ, ಬಳಿಕ ಮಂಗಳೂರಿನ 'ಮುಂಗಾರು' ಪತ್ರಿಕೆಯಲ್ಲಿ ವೃತ್ತಿ ಮುಂದುವರಿಸಿದರು. ದೇಶದ ಪ್ರಸಿದ್ಧ ಆಂಗ್ಲ ವಾರ ಪತ್ರಿಕೆ ಕೇರಳದ ಕೊಚ್ಚಿನ್ ನಲ್ಲಿ ಪ್ರಕಟಗೊಳ್ಳುತ್ತಿದ್ದ  'ದಿ ವೀಕ್' ನಲ್ಲಿ ಹಲವು ವರ್ಷಗಳ ಕಾಲ ವ್ಯಂಗ್ಯಚಿತ್ರಕಾರರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ನಾಡಿನ ಪ್ರಸಿದ್ಧ ದೈನಿಕ ಪ್ರಜಾವಾಣಿ ('ಚಿನಕುರುಳಿ' ಖ್ಯಾತಿಯ) ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ನಾಡಿನುದ್ದಗಲ ಪರಿಚಿತರಾಗಿದ್ದಾರೆ. ರಾಜ್ಯದ ಹೆಸರಾಂತ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾಗಿರುವ ಪ್ರಕಾಶ್ ಶೆಟ್ಟಿ, ಹಾಸ್ಯ, ವಿನೋದ ಹಾಗೂ ವಿಡಂಬನಾತ್ಮಕ ಬರಹಗಳಿಂದಲೂ ಪ್ರಖ್ಯಾತರು.

ಪ್ರಕಾಶ್ ಶೆಟ್ಟಿ ಅವರು ಕಾರ್ಟೂನ್ ಕುರಿತಾಗಿ ಹಲವು ಪುಸ್ತಕಗಳನ್ನು ಹೊರತಂದಿದ್ದಾರೆ. ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ 50 ವರ್ಷಗಳಿಗೂ ಹೆಚ್ಚು ಅನುಭವವಿರುವ ಪ್ರಕಾಶ್ ಶೆಟ್ಟಿ, ಸ್ಥಳದಲ್ಲಿಯೇ ವ್ಯಕ್ತಿಗಳ ವ್ಯಂಗ್ಯಭಾವಚಿತ್ರ ಬಿಡಿಸುವುದರಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಪ್ರತಿಭಾವಂತರು. ವ್ಯಂಗ್ಯಚಿತ್ರ ಕಲೆಗಾಗಿಯೇ ತಮ್ಮನ್ನು ಅರ್ಪಿಸಿಕೊಂಡಿರುವ ಪ್ರಕಾಶ್, ಮಂಗಳೂರಿನ ತಮ್ಮ ಮನೆಯನ್ನೇ ಸಂಪೂರ್ಣ ಕಾರ್ಟೂನುಮಯವಾಗಿ ಮಾರ್ಪಡಿಸಿ ಇದಕ್ಕೆ 'ಕಾರ್ಟೂನೆಸ್ಟ್' ಎಂದು ಹೆಸರಿಟ್ಟಿದ್ದಾರೆ.

ಈಗಾಗಲೇ ನೂರಾರು ಮಂದಿ ಗಣ್ಯರು, ಕಲಾ ರಸಿಕರು 'ಕಾರ್ಟೂನೆಸ್ಟ್' ಗೆ ಭೇಟಿ ನೀಡಿ ಪ್ರಕಾಶ್ ಅವರ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸಾಧನೆಯನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ. 'ಕಾರ್ಟೂನೆಸ್ಟ್'  ಕುರಿತಾಗಿ ಹಲವು ಲೇಖನಗಳು ಕೂಡ ನಾಡಿನ ವಿವಿಧ ಪತ್ರಿಕೆಗಳಲ್ಲಿ ಮೂಡಿಬಂದಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post