ತೀರ್ಥಹಳ್ಳಿಗೆ ಗಾಂಧೀಜಿ ಭೇಟಿ ನೀಡಿ ಶತಮಾನ ತುಂಬುತ್ತಿರುವುದು ಐತಿಹಾಸಿಕ ವಿದ್ಯಮಾನ

ಭಾರತ ಅಭಿವೃದ್ಧಿ ಹೊಂದಲು ಹಿರಿಯರ ತ್ಯಾಗ ಬಲಿದಾನ ಕಾರಣ

ತೀರ್ಥಹಳ್ಳಿಗೆ ಗಾಂಧೀಜಿ ಭೇಟಿ ನೀಡಿ ಶತಮಾನ ತುಂಬುತ್ತಿರುವುದು ಐತಿಹಾಸಿಕ ಘಟನೆ. ಸತ್ಯ, ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯವನ್ನು ಹೇಗೆ ಪಡೆಯಬೇಕು ಎಂಬುದನ್ನು ಗಾಂಧೀಜಿ ಇಡಿ ವಿಶ್ವಕ್ಕೆ ತೋರಿಸಿಕೊಟ್ಟವರು. ಭಾರತ ವಿಶ್ವದ ಎಲ್ಲಾ ಜನಪರ ಹೋರಾಟಗಳಿಗೆ ನೀಡಿದ ದೊಡ್ಡ ಕೊಡುಗೆ ಗಾಂಧೀಜಿ. ಅವರು 1927ನೇ ಇಸವಿಯಲ್ಲಿ ತೀರ್ಥಹಳ್ಳಿಗೆ ಭೇಟಿನೀಡಿ ಭಾಷಣ ಮಾಡಿದ್ದು ಸಾರ್ವಜನಿಕರಿಂದ ದೇಣಿಗೆ ಸ್ವೀಕರಿಸಿದ್ದು ಸ್ಮರಣೀಯ. ಶತಮಾನ ಕಳೆದರು ಅವರು ಪ್ರಸ್ತುತವಾಗುತ್ತಲೇ ಸಾಗುತ್ತಿದ್ದಾರೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುನ್ನೂರು ಮೋಹನ್‌ ಹೇಳಿದರು.

ಕುರುವಳ್ಳಿಯ ಯುವ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯೆ ಮಂಜುಳಾ ನಾಗೇಂದ್ರ ಮಾತನಾಡಿ, ಸ್ವಾತಂತ್ರ್ಯವನ್ನು ಅದರ ಆಶಯಕ್ಕೆ ಪೂರಕವಾಗಿ ದೇಶದ ಅಭಿವೃದ್ಧಿಗೆ ಬಳಸಿದಾಗ ಸಾರ್ಥಕತೆ ಮೂಡುತ್ತದೆ. ಭಾರತ ಇಂದು ಅಭಿವೃದ್ಧಿ ಪಥದಲ್ಲಿ ಸಾಗಲು ಹಿರಿಯರ ತ್ಯಾಗ ಬಲಿದಾನವೇ ಕಾರಣವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಕ ಸಂಘದ ಅಧ್ಯಕ್ಷ ಹೆಚ್.ಪಿ.ಅನಿಲ್‌, ಕುರುವಳ್ಳಿ ಯುವಕ ಸಂಘ ಸ್ವಾತಂತ್ರೋತ್ಸವ ಸೇರಿದಂತೆ ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ನಿಯಮಿತವಾಗಿ ಆಚರಿಸುತ್ತ ಬಂದಿದೆ. ಪ್ರತಿವರ್ಷವೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಎಳೆಯರು ಮತ್ತು ಯುವಕರಲ್ಲಿ ದೇಶಭಕ್ತಿ ತುಂಬುವ ಕಾರ್ಯದಲ್ಲಿ ನಿರತರಾಗಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆ ಎಲ್ಲರ ಮನೆಯ ಹಬ್ಬದಂತೆ ಆಚರಿಸುವಂತಾಗಬೇಕೆಂದು ಆಶಿಸಿದರು.

ಕಾರ್ಯಕ್ರಮವನ್ನು ಭಾರತ ಸೇನೆಯ ಯೋಧ ಪ್ರಿಯದರ್ಶನ್‌ ಉದ್ಘಾಟಿಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಬಿ.ಎನ್.ಗುರುರಾಜ್‌, ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕಿ ಸುರೇಖ ಇನ್ನಿತರರು ಉಪಸ್ಥಿತರಿದ್ದರು. ರಮ್ಯ ಅನಿಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕುರುವಳ್ಳಿ ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು. ಕುರುವಳ್ಳಿ ಸರ್ಕಾರಿ ಶಾಲೆಯ ಮಕ್ಕಳು ರಾಷ್ಟ್ರಗೀತೆಗಳನ್ನು ಹಾಡಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post