ಆದೇಶ ಹಿಂಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಗುಟ್ಕಾ ಹಾಗೂ ಪಾನ್ ಮಸಾಲ ಉತ್ಪನ್ನಗಳ ಮೇಲೆ ಕರ್ನಾಟಕ ಸರ್ಕಾರ ಹೇರಿದ್ದ ಒಂದು ವರ್ಷದ ನಿಷೇಧವನ್ನು ಹಿಂಪಡೆಯಲು ನಿರ್ಧರಿಸಿದೆ. ನಿಷೇಧ ಜಾರಿಗೆ ಬಂದ ಕೇವಲ ಎರಡು ದಿನಗಳಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ.
ರಾಜ್ಯಾದ್ಯಂತ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟಕ್ಕೆ ಆಹಾರ ಸುರಕ್ಷತಾ ಆಯುಕ್ತರು ಒಂದು ವರ್ಷದ ನಿಷೇಧ ವಿಧಿಸಿದ್ದರು.
'ಅಡಿಕೆ ಉಪ ಉತ್ಪನ್ನ ನಿಷೇಧ ಮಾಡುವ ಸರ್ಕಾರದ ಆದೇಶದಿಂದ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ಆದ್ದರಿಂದ ಈ ಆದೇಶವನ್ನು ಹಿಂಪಡೆಯಬೇಕು' ಎಂದು ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾ ಮಂಡಲದ ಅಧ್ಯಕ್ಷರಾಗಿರುವ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಅಡಿಕೆ ಬೆಳೆಯುವ ಕ್ಷೇತ್ರಗಳ ಶಾಸಕರ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಗುರುವಾರ ಮನವಿ ಸಲ್ಲಿಸಿದ್ದರು.
'ರಾಜ್ಯದಲ್ಲಿ 144 ತಾಲ್ಲೂಕುಗಳಲ್ಲಿ ಶೇ 60ಕ್ಕಿಂತ ಹೆಚ್ಚು ಅಡಿಕೆ ಬೆಳೆಯಲಾಗುತ್ತಿದೆ. ಅಂದಾಜು 5.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗಿದೆ. 10 ಲಕ್ಷಕ್ಕಿಂತ ಹೆಚ್ಚು ಕುಟುಂಬಗಳು ಅಡಿಕೆ ಬೆಳೆಯನ್ನು ಅವಲಂಬಿಸಿವೆ' ಎಂದು ಮನವಿಯಲ್ಲಿ ತಿಳಿಸಲಾಗಿದೆ.
'ಈ ಆದೇಶ ಅಡಿಕೆ ಮಾರುಕಟ್ಟೆ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಅಡಿಕೆ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಆಹಾರ ಸುರಕ್ಷತೆ ಆಯುಕ್ತರು ಜೂನ್ 15ರಂದು ಅಧಿಸೂಚನೆ ಹೊರಡಿಸಿದ್ದು, ಅದನ್ನು ಹಿಂಪಡೆಯಬೇಕು. ಆ ಮೂಲಕ ಬೆಳೆಗಾರರಿಗೆ ರಕ್ಷಣೆ ಕೊಡಬೇಕು' ಎಂದು ವಿನಂತಿಸಲಾಗಿದೆ.
ಶಾಸಕರಾದ ಗುರ್ಮೆ ಸುರೇಶ್, ವಿ.ಸುನೀಲ್ ಕುಮಾರ್, ಡಿ.ದೇವದಾಸ್ ಕಾಮತ್, ಕಿರಣ್ ಕುಮಾರ್, ಯಶ್ವಾಲ್ ಸುವರ್ಣ, ಡಿ.ಜಿ.ಶಾಂತನಗೌಡ, ಗುಬ್ಬಿ ಶ್ರೀನಿವಾಸ್, ಕೋನರೆಡ್ಡಿ, ಭರತ್ ಕುಮಾರ್ ಶೆಟ್ಟಿ ಭೇಟಿಯಾಗಿದ್ದರು.
ತಮ್ಮ ಗಮನಕ್ಕೆ ತಾರದೆ ಈ ಆದೇಶ ಹೊರಡಿಸಿರುವುದಕ್ಕೆ ಡಿಕೆ ಶಿವಕುಮಾರ್ ಅಸಮಾಧಾನಗೊಂಡಿದ್ದರು. ಈ ನಿಷೇಧದಿಂದ ಹಲವು ರೈತರಿಗೆ ನಷ್ಟ ಉಂಟಾಗಬಹುದು ಎಂಬ ಕಾರಣ ನೀಡಿ, ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಗುರುವಾರ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಿಯೋಗವೊಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿತ್ತು. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನಗೌಡ ಅವರು ನಿಯೋಗದ ನೇತೃತ್ವ ವಹಿಸಿದ್ದರು.
ಸರ್ಕಾರದ ಆದೇಶದಿಂದ ರೈತರಲ್ಲಿ ಆತಂಕ ಉಂಟಾಗಿದ್ದು, ಮಾರುಕಟ್ಟೆಯ ಮೇಲೂ ಪರಿಣಾಮ ಬೀರಬಹುದು ಎಂದು ನಿಯೋಗವು ಮುಖ್ಯಮಂತ್ರಿಗೆ ತಿಳಿಸಿತು. ಈ ನಿರ್ಧಾರದಿಂದ ಉಂಟಾಗಬಹುದಾದ ನಷ್ಟದಿಂದ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು.