ಆತ್ಮಸಾಕ್ಷಿಗೆ ವಿರುದ್ಧವಾಗಿ ಬದುಕಬಾರದು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ

ವಿಜೃಂಬಣೆಯಿಂದ ನೆರವೇರಿದ ಆರಗ ಗುತ್ತಿ ರೇಣುಕಾಂಬಾ ದೇವಾಲಯ ಧ್ವಜಸ್ತಂಭ ಸ್ಥಾಪನೆ

ಆರಗ ಭಾಗದ ಸೀಮೆ ದೇವತೆ ಶ್ರೀ ಗುತ್ತಿರೇಣುಕಾಂಬಾ ದೇವಾಲಯದಲ್ಲಿ ನೂತನ ಧ್ವಜಸ್ಥಂಭ ಉದ್ಘಾಟನಾ ಕಾರ್ಯ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಬಣೆಯಿಂದ ಬುಧವಾರ ನೆರವೇರಿತು. ಧ್ವಜಸ್ಥಂಭ ಲೋಕಾರ್ಪಣೆಗೊಳಿಸಿ ಮಾತನಾಡಿ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಆತ್ಮವೇ ದೇವರು. ಯಾವುದೇ ಒಬ್ಬ ಮನುಷ್ಯ ಆತ್ಮಶಕ್ತಿಗೆ ವಿರುದ್ಧವಾಗಿ ಬದುಕಲು ಸಾಧ್ಯವಿಲ್ಲ. ನಮ್ಮೊಳಗಿನ ಚೇತನಶಕ್ತಿ ಸತ್ಯವನ್ನು ಸದಾಕಾಲ ಎಚ್ಚರದಲ್ಲಿ ಇಡುತ್ತದೆ. ಅದನ್ನೇ ನಾವು ದೇವರೆಂದು ಭಾವಿಸಿದರೆ ಕೆಟ್ಟದ್ದು ಇರುವುದೇ ಇಲ್ಲ. ಬದುಕಿಗೆ ಬೇಕಾಗಿರುವುದು ನೆಮ್ಮದಿ ಮತ್ತು ಶಾಂತಿ ಎಂದರು.

ನಿಟ್ಟೂರು ನಾರಾಯಣಗುರು ಮಹಾಸಂಸ್ಥಾನ ಮಠದ ಪೀಠಾಧ್ಯಾಕ್ಷ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಶಾಂತಿ, ಸಮಾಧಾನ, ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ. ಗುರುಸ್ಥಾನ, ದೇವಸ್ಥಾನಗಳಲ್ಲಿ ಮಾತ್ರ ಸಿಗುತ್ತದೆ. ದುರ್ಗುಣಗಳನ್ನು ನಾಶ ಮಾಡಿಕೊಂಡು ಸದ್ಗುಣವನ್ನು ಹೊಂದಬೇಕು ಎಂದು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಪ್ರಕೃತಿಯಿಂದ ಹುಟ್ಟಿದ ವೇದ, ಉಪನಿಷತ್ತಿಗೆ ಕೃತಿಕಾರರು ಇಲ್ಲ. ಅದರಲ್ಲಿರುವ ಅತ್ಯುತ್ತಮ ಸಂದೇಶವನ್ನು ಉಳಿಸಿಕೊಳ್ಳಬೇಕು. ಜಾತಿ, ಧರ್ಮದ ಮೇಲೆ ಸಮಾಜ ಕಟ್ಟುತ್ತೇವೆ ಎನ್ನುವುದು ಸರಿಯಲ್ಲ. ಯಾವ ದೇವರಿಗೂ ಜಾತಿ, ಧರ್ಮ ಇಲ್ಲ. ಅಹಿಂಸಾತ್ಮಕವಾಗಿ ಬದುಕಲು ಪ್ರಯತ್ನ ಪಡಬೇಕು. ಪ್ರೀತಿ, ನಂಬಿಕೆ, ವಿಶ್ವಾಸ, ಭಾವನೆ ಮಾತ್ರ ಶಾಶ್ವತವಾದ ದೇವರು ಎಂದರು.

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಮಲೆನಾಡಿನಲ್ಲಿ ವಿವಿಧ ಧರ್ಮದ ಪ್ರಭಾವಗಳು ಇದೆ. ಕಾಲಕಾಲಕ್ಕೆ ಅದು ಬದಲಾಗಿದೆ. ಗುತ್ತಿರೇಣುಕಾಂಬಾ ದೇವಾಲಯದಲ್ಲಿ ಒಕ್ಕಲಿಗರು ಪೂಜಾ ಕಾರ್ಯ ನೆರವೇರಿಸುವುದು ವಿಶೇಷ. ನಮ್ಮ ಕುಟುಂಬ ಕೂಡ ಈ ದೇವಾಲಯದ ಭಕ್ತರು ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್‌ ಸಿರಿಬೈಲು ಮಾತನಾಡಿ, ದೇವಾಲಯವು ವರ್ಷದಿಂದ ವರ್ಷಕ್ಕೆ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿರುವುದು ನೆಮ್ಮದಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಸ್ವಾಗತಿಸಿ ಚಂದುವಳ್ಳಿ ಸೋಮಶೇಖರ್‌ ಮಾತನಾಡಿದ ಆರಗ ಪ್ರಾಂತ್ಯವು ಅತಿ ಹೆಚ್ಚಿನ ದೇವಾಲಯಗಳನ್ನು ಹೊಂದಿದ ಪ್ರದೇಶವಾಗಿ ಮಹತ್ವ ಪಡೆದಿದೆ. ಪುರಂದರದಾಸರು ಆರಗದವರು ಎಂಬುದು ಅತೀವ ಹೆಮ್ಮೆಯ ವಿಚಾರ. ಗುತ್ತಿ ರೇಣುಕಾಂಬಾ ದೇವಾಲಯ ಇತಿಹಾಸ ಹಾಗೂ ಪೌರಾಣಿಕವಾಗಿಯೂ ಮಹತ್ವ ಪಡೆದಿದ್ದು ಊರಿಗೆ ಗೌರವ ತಂದುಕೊಟ್ಟಿದೆ ಎಂದರು.

ಶಿವಮೊಗ್ಗ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ಗುತ್ತಿ ರೇಣುಕಾಂಬಾ ಸೇವಾ ಸಮಿತಿ ಗೌರವಾಧ್ಯಕ್ಷ ಸುರೇಂದ್ರ ಗೌಡ, ಖಜಾಂಚಿ ಧನಂಜಯ ಡಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್‌ ಸಿರಿಬೈಲು, ಆರಗ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ್‌ ಮತ್ತಿತರರು ಇದ್ದರು. ಸುಷ್ಮಾ ಪ್ರಕಾಶ್‌ ಪ್ರಾರ್ಥಿಸಿದರು. ಶಾಮಣ್ಣ ಕಾಳಮ್ಮನಗುಡಿ ನಿರೂಪಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post