ಮೇಲಿನ ಕುರುವಳ್ಳಿ
ಗ್ರಾಮ ಪಂಚಾಯತಿಗೆ ಅಹ್ವಾನವಿಲ್ಲ..!
ತಾಲೂಕು ಪಂಚಾಯತ್
ಇಓ ಶೈಲಾ ಲೆಕ್ಕಕ್ಕಿಲ್ಲ ...!
ಮಂಜುನಾಥ್ ಗೌಡರ
ಎದುರೇ ಕಾಂಗ್ರೆಸ್ ಮೇಲೆ ಆರಗ ತೀವ್ರ ವಾಗ್ದಾಳಿ...!
ಕುರುವಳ್ಳಿಯ ಜೋಪಡಿ
ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ದಿಢೀರ್ ನಡೆದಿದ್ದು ಅಂತೂ ಕಳೆದ ನಾಲ್ಕು ದಶಕಗಳ ಕಾಲ
ತುಂಗಾ ಸೇತುವೆ ಪಕ್ಕ ಟೆಂಟ್ ಹಾಕಿಕೊಂಡು ನಾಗರೀಕ ಸಮಾಜದ ತಲೆಗೆ ಹೊಡೆದಂತೆ ಬದುಕುತ್ತಿದ್ದ ದೊಂಬರ
ಜನಾಂಗ ಕಡೆಗೂ ಅಧಿಕೃತವಾಗಿ ತುಂಡು ಭೂಮಿ ಪಡೆದು ಬದುಕಿನ ಸಾರ್ಥಕತೆ ಪಡೆದುಕೊಂಡಿದೆ.
ಆದರೆ ಇಂತಹ ಪ್ರಮುಖ
ಕಾರ್ಯಕ್ರಮಕ್ಕೆ ಸ್ಥಳ ಗುರುತು ಮಾಡಿದ್ದಲ್ಲದೆ ಬಳಿಕ ಅದು ಒತ್ತುವರಿ ಆಗದಂತೆ ಕಾಪಾಡಿ ಕಾಳಜಿ ತೋರಿದ
ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿಯನ್ನು ಹಕ್ಕುಪತ್ರ ವಿತರಣೆ ವೇಳೆ ಸಂಪೂರ್ಣವಾಗಿ ಕಡೆಗಣಿಸಿದ್ದು
ಹೊರಬೈಲು ಬುಕ್ಲಾಪುರ ಗ್ರಾಮಸ್ಥರು ಹಾಗೂ ಹಿಂದೆ ಗ್ರಾಮ ಪಂಚಾಯತಿಯಲ್ಲಿ ಜನಪ್ರತಿನಿಧಿಗಳಾಗಿ ಕಾರ್ಯ
ನಿರ್ವಹಿಸಿದವರಲ್ಲಿ ಆಕ್ರೋಶ ಮೂಡಿಸಿದೆ.
ಹಾಗೆ ನೋಡಿದರೆ ಜೋಪಡಿ
ನಿವಾಸಿಗಳಿಗೆ ಸೂರು ನೀಡಬೇಕು ಎಂದು ಮೊದಲು ದನಿ ಎತ್ತಿದ್ದು ಕಲಾವಿದ ಮತ್ತು ಮೇಲಿನ ಕುರುವಳ್ಳಿ ಗ್ರಾಮ
ಪಂಚಾಯತ್ ಸದಸ್ಯನಾಗಿದ್ದ ನಿಶ್ಚಲ್ ಜಾದೂಗಾರ. ನಿಶ್ಚಲ್ ಹಲವು ಹೋರಾಟಗಳನ್ನು ಜೋಪಡಿ ನಿವಾಸಿಗಳ ಪರ
ಮಾಡಿದ್ದರು. ಒಮ್ಮೆ ನಿಶ್ಚಲ್ ಇವರನ್ನು ಗುಡ್ಡೆ ಹಾಕಿಕೊಂಡು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ
ನಡೆಸಿದ್ದರು.
ಡೋಲು, ಬ್ಯಾಂಡ್
ಬಾರಿಸುವುದು, ಪಿಪಿ ಉದುವುದರಲ್ಲಿ ಹುಟ್ಟು ಕಲಾವಿದರಾಗಿದ್ದ ಇವರಿಂದ ಬ್ಯಾಂಡ್ ಬಾರಿಸುವ ಚಳುವಳಿ
ಆರಂಭ ಮಾಡಿದ್ದೆ ತಡ ಹತ್ತಿಪ್ಪತ್ತು ಬ್ಯಾಂಡ್ ಹಾಗೂ ನಾಲ್ಕರು ಪಿಪಿಗಳ ಶಬ್ದಕ್ಕೆ ಬೆಚ್ಚಿಬಿದ್ದ ಅಂದಿನ
ತಹಸೀಲ್ದಾರ್ ಪೊಲೀಸ್ ಕರೆಸಿ ಲಾಠಿ ಬೀಸಿದ ಹೊಡೆತಕ್ಕೆ ನಿಶ್ಚಲ್ ಬಿಟ್ಟು ಉಳಿದ ನಿವೇಶನ ಆಕಾಂಕ್ಷಿಗಳು
ಪರಾರಿಯಾಗಿದ್ದರು..!
ಆದರೂ ಪಟ್ಟು ಬಿಡದ
ನಿಶ್ಚಲ್ ಮುಂದೆ ಅಲ್ಲಿ ಎಲ್ಲ ರಾಷ್ಟೀಯ ಹಬ್ಬಗಳನ್ನು ಆಚರಿಸುವುದು. ತೀರ್ಥಹಳ್ಳಿಗೆ ಬರುವ ಮಂತ್ರಿಗಳ
ಹತ್ತಿರ ಕರೆದುಕೊಂಡು ಹೋಗುವುದನ್ನು ಮಾಡುತ್ತಲೇ ಬಂದಿದ್ದರು. ಆದರೆ ನಿನ್ನೆ ಹಕ್ಕುಪತ್ರ ನೀಡುವಾಗ
ಪಟ್ಟಣ ಪಂಚಾಯತ್ ಮತ್ತು ಹಕ್ಕುಪತ್ರ ಪಡೆದವರು ಕೂಡ ಆತನ ನೆನಪು ಮಾಡಿಕೊಂಡ ಹಾಗೆ ಕಾಣಲಿಲ್ಲ!.
ಇದಕ್ಕಿಂತಲೂ ತಾಲೂಕು
ಪಂಚಾಯತ್ ಇಓ ಶೈಲರನ್ನೂ ಕೂಡ ಅಹ್ವಾನ ನೀಡದೆ ಕಡೆಗಣಿಸಿರುವುದು ಏಕೆ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಇನ್ನು ಈಗ ಜೋಪಡಿ ನಿವಾಸಿಗಳಿಗೆ ಕೆಲಸಕ್ಕೆ ಬರವಿಲ್ಲ ಊಟಕ್ಕೆ ತೊಂದರೆ ಇಲ್ಲ.
ಕೆಲವು ವರ್ಷಗಳ ಹಿಂದೆ
ಮಧ್ಯಾಹ್ನ ಹಾಗೂ ಸಂಜೆ ಊಟವನ್ನು ಒಂದೇ ಸಲ ಸಂಜೆ ನಾಲ್ಕೋ ಅಥವಾ ಐದು ಗಂಟೆಗೆ ತಿಂದು ಬದುಕುವ ದಯನಿಯ
ಸನ್ನಿವೇಶದಲ್ಲಿ ಅನಧಿಕೃತವಾಗಿಯೇ ಆದರೂ ಕರುಣೆಯಿಂದ ಪಟ್ಟಣ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ
ಕಲ್ಪಿಸಿದ್ದು ಅಸಾದಿ, ಲೈಟಿನ ವ್ಯವಸ್ಥೆ ಮಾಡಿದ್ದು ಸಂದೇಶ ಜವಳಿ, ಇನ್ನು ಧರ್ಮಸ್ಥಳ ಗ್ರಾಮಭಿವೃದ್ಧಿ
ಸಂಘದ ಜೊತೆಗೆ ಇದ್ದ ತಮ್ಮ ಸಂಪರ್ಕ ಉಪಯೋಗಿಸಿ ಇವರನ್ನೂ ಸಂಘಕ್ಕೆ ಸೇರಿಸಿ ಸಾಲ ಸೌಲಭ್ಯ ಸಿಗುವಂತೆ
ಮಾಡಿದ್ದು ಸೊಪ್ಪುಗುಡ್ಡೆ ರಾಘವೇಂದ್ರ, ಮತದಾರರ ಚೀಟಿ ಸಿಗಲು ಶ್ರಮಿಸಿದ್ದು ಕಾಂಗ್ರೆಸ್ ಮುಖಂಡ ಕುರುವಳ್ಳಿ
ಪದ್ಮನಾಭ. ಹೀಗೆ ಕಾಳಜಿಯನ್ನು ಅನೇಕರು ತೋರಿದ್ದಾರೆ. ಇವರ ಸಹಕಾರ ಕೂಡ ನೆನಪಿಸಲಿಲ್ಲ.
ಆದರೆ ಹಕ್ಕುಪತ್ರ
ವಿತರಣೆ ಕ್ರೆಡಿಟ್ ಪಡೆದುಕೊಳ್ಳುವಾಗ ಮಾತ್ರ ತಾಮುಂದೆ, ನಾಮುಂದೆ ಎಂಬ ಚರ್ಚೆ ಆರಂಭಗೊಂಡಿದೆ. ಇಡೀ
ಕಾರ್ಯಕ್ರಮ ಯಾರದೋ ಮರ್ಜಿಗೆ ಏರ್ಪಾಡಾಗುವಂತೆ ವ್ಯವಸ್ಥೆ ರೂಪಿಸಲಾಗಿತ್ತು.
ಸಭೆಯಲ್ಲಿ ಶಾಸಕ
ಆರಗ ಜ್ಞಾನೇಂದ್ರ ಯಾವ ಮುಲಾಜು ಇಲ್ಲದೆ 60 ವರ್ಷಗಳಿಂದ ದೇಶದಲ್ಲಿರುವ ಕಾಂಗ್ರೆಸ್ ಸರ್ಕಾರ ಬಡವರಿಗೆ
ಏನು ಮಾಡಿಲ್ಲ, ರಾಜ್ಯ ಸರ್ಕಾರ ಬಾಯಿ ಮಾತಿಗೆ ಮಾತ್ರ ಎಸ್ಸಿ ಎಸ್ಟಿ ಜಪ ಮಾಡುತ್ತಿದೆ. ಆದರೆ ಹಕ್ಕುಗಳನ್ನು
ಕೊಡಿಸುವಾಗ ಮಾತ್ರ ಹಿಂದೆ ಬಿದ್ದಿದೆ. ವಾಲ್ಮೀಕಿ ಹಗರಣ ಸೇರಿದಂತೆ ತಳ ಸಮುದಾಯಕ್ಕೆ ಇಟ್ಟ ಹಣದಲ್ಲಿ
ಗ್ಯಾರಂಟಿ ನೀಡುತ್ತಿದೆ. ಅಭಿವೃದ್ಧಿಗೆ ಹಣ ಕೊಡುತ್ತಿದೆ ಎಂದು ಬಾರಿಸುತ್ತಿದ್ದರೆ ಪಕ್ಕದಲ್ಲೆ ಕುಳಿತಿದ್ದ
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ದಿವ್ಯ ಸ್ಥಿತ ಪ್ರಜ್ಞೆಯಿಂದ ಸುಮ್ಮನೆ ಕುಳಿತಿದ್ದನ್ನು
ಕಂಡ ಕಾಂಗ್ರೆಸ್ ಕಾರ್ಯಕರ್ತರು ಕೈಕೈ ಹಿಚಿಕಿಕೊಳ್ಳಬೇಕಾದ ವ್ಯವಸ್ಥೆ ಸಭೆಯುದ್ದಕ್ಕೂ ಸೃಷ್ಟಿಯಾಗಿತ್ತು.
ಒಟ್ಟಿನಲ್ಲಿ ಎಷ್ಟೋ
ವರ್ಷದ ಬಳಿಕ ತಮ್ಮ ಕಾಂಗ್ರೆಸ್ ಸರ್ಕಾರ ತೀರ್ಥಹಳ್ಳಿಯಲ್ಲಿ ಅದರಲ್ಲೂ ಅತ್ಯಂತ ಅಂಚಿನಲ್ಲಿರುವ ಸಮುದಾಯವೊಂದಕ್ಕೆ
ನಿವೇಶನ ನೀಡಿದೆ ಎನ್ನುವುದು ರಾಜ್ಯ ಮಟ್ಟದ ಸುದ್ದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ಕಾಂಗ್ರೆಸ್
ಆಡಳಿತ ಇರುವ ಪಟ್ಟಣ ಪಂಚಾಯತ್ ಹಾಲಿ ಅಧ್ಯಕ್ಷ ರತ್ನಾಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಹಕ್ಕುಪತ್ರ ನೀಡಿತು
ಎನ್ನುವುದು ಬಿಟ್ಟರೆ ಇದನ್ನು ಸರಿಯಾಗಿ ಸಮರ್ಥನೆ ಕೂಡ ಮಾಡಿಕೊಳ್ಳಲು ಬರದೇ ಆರಗರ ಮಾತಿನ ಹೊಡೆತಕ್ಕೆ
ಪತರಗುಟ್ಟಿದ್ದು ದಯಾನೀಯವಾಗಿ ಕಂಡು ಬಂತು.
