ಆಯುಷ್ಮಾನ್‌ ಬಳಸಿ ಉಚಿತ ರಕ್ತ ಪರೀಕ್ಷೆ ಮಾಡಿಸಿ

ತೀರ್ಥಹಳ್ಳಿಗೆ 50 ಹಾಸಿಗೆ ತಾಯಿ ಮಗು ಆಸ್ಪತ್ರೆ…
ಗ್ರಾಮೀಣ ಪ್ರಾಥಮಿಕ ಕೇಂದ್ರ ಆಸ್ಪತ್ರೆಯ ವೈದ್ಯರಿಗೆ ಹೆಚ್ಚಿನ ವೇತನ

ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಯ ಯಂತ್ರಗಳು ಕೆಲಸ ಮಾಡದಿದ್ದ ಸಂದರ್ಭದಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಖಯಾಲಿ ರೂಢಿಸಿಕೊಳ್ಳಬೇಡಿ. ಬಡವರ್ಗದ ರೋಗಿಗಳ ಉಪಯೋಗಕ್ಕಾಗಿ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಖಾಸಗಿ ಲ್ಯಾಬ್‌ಗಳಲ್ಲಿ ರಕ್ತ ಪರೀಕ್ಷೆಗೆ ಕಳುಹಿಸಿಕೊಡುವ ಮೂಲಕ ಉಚಿತ ತಪಾಸಣೆಯ ಅವಕಾಶವನ್ನು ಕಲ್ಪಿಸಬೇಕು. ಆಗ ಆಸ್ಪತ್ರೆಯ ಯಂತ್ರಗಳು ತಿಂಗಳಿಗೆ ಹಾಳಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಲು ದಾಖಲೆಗಳು ದೊರೆಯಲಿದೆ. ಬದಲಾವಣೆ ಮಾಡಬೇಕಿದ್ದರು ಅದಕ್ಕೂ ಸಹಕಾರಿಯಾಗಲಿದೆ ಎಂದು ಶನಿವಾರ ಜೆಸಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಉದ್ದೇಶಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಚಿವ ಯು.ಟಿ.ಖಾದರ್‌ ಹೇಳಿದರು.

ತೀರ್ಥಹಳ್ಳಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಈಗಿರುವ ಮಕ್ಕಳ ಜನನದ ಆಧಾರದ ಮೇಲೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನೀಡಲು ಅವಕಾಶಗಳಿವೆ. 2023ರಲ್ಲಿಯೇ 20 ಕೋಟಿ ವೆಚ್ಚದ 50 ಹಾಸಿಗೆಯ ಆಸ್ಪತ್ರೆಗೆ ಪ್ರಸ್ತಾವನೆ ಬಂದಿದ್ದು ಶೀಘ್ರ ಆಸ್ಪತ್ರೆ ನೀಡುವ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದರಿಂದ ಬಹಳಷ್ಟು ಜನರಿಗೆ ಸಹಕಾರಿಯಾಗಲಿದೆ ಎಂದರು.

ಗ್ರಾಮೀಣ ಸಮುದಾಯ ಕೇಂದ್ರಗಳು, ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ ಹೆಚ್ಚಿನ ವೇತನ ನೀಡುವ ಮೂಲಕ ಆಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವ ಕೆಲಸ ಮಾಡಲಾಗುವುದು. 10 ಲಕ್ಷ ಖರ್ಚು ಮಾಡಿ ಭರ್ಜರಿಯಾಗಿ ಕ್ರಿಕೆಟ್‌ ಆಯೋಜನೆ ಮಾಡುವ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗೂ ದೇಣಿಗೆ ಸಂಗ್ರಹಿಸುವ ಮಹತ್ತರ ಕಾರ್ಯವನ್ನು ಸಾರ್ವಜನಿಕರು ಮಾಡಬೇಕು. ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಕೆ ಮಾಡುವುದು, ನಿಧಿಯನ್ನು ಆಸ್ಪತ್ರೆಗಾಗಿ ತರುವ ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಮೆಗ್ಗಾನ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡುವ ರೋಗಿಗಳಿಗೆ ಸರಿಯಾದ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಇವೆ. ಅದರ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತಿದ್ದು ಶಿವಮೊಗ್ಗದಿಂದ ಮಣಿಪಾಲ, ಮಂಗಳೂರಿಗೆ ಹೋಗುತ್ತಿರುವ ರೋಗಿಗಳ ಪಟ್ಟಿಯನ್ನು ಪಡೆಯಲಾಗುವುದು. ಜಿಲ್ಲಾ ಆಸ್ಪತ್ರೆ, ಭೋದನಾ ಆಸ್ಪತ್ರೆಯ ಸಮಸ್ಯೆಯನ್ನು ಪರಿಹರಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಎಂಎಡಿಬಿ ಅಧ್ಯಕ್ಷ ಅರ್‌.ಎಂ.ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್‌ ಶೆಟ್ಟಿ, ಉಪಾಧ್ಯಕ್ಷೆ ಗೀತಾ, ಡಿಎಚ್‌ಓ ಡಾ.ನಟರಾಜ್‌ ಮುಂತಾದವರು ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post