ಅವಸರ, ನಿರ್ಲಕ್ಷ್ಯ, ಆರೋಪಗಳ ಬೇಲಿ ದಾಟುತ್ತಾ…
ರಸ್ತೆ, ಕಟ್ಟಡ, ಸಮುದಾಯಕ್ಕೆ ನೀಡುವ ಆದ್ಯತೆ ಆಸ್ಪತ್ರೆಗೇಕಿಲ್ಲ!
ಶಿವಮೊಗ್ಗದಿಂದ ಮಣಿಪಾಲ ಆಸ್ಪತ್ರೆಗೆ ಶಿಫಾರಸ್ಸು ಮಾಡಿದವರ್ಯಾರು ?
ತೀರ್ಥಹಳ್ಳಿಯಲ್ಲಿ ಜುಲೈ 3ನೇ ತಾರೀಖಿನ ಬೆಳಗ್ಗಿನ ಜಾವ 3 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದ ಸುಮಾ ಆರ್. ಜುಲೈ 10 ರಂದು ಮರಣ ಹೊಂದಿದ ಘಟನೆ ನಿಜಕ್ಕೂ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂತಹ ತಾಯಿ ಸಾವಿನ ಘಟನೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇದು ಮೊದಲನೆಯದು ಅಲ್ಲ ಹಾಗಂತೆ ಕೊನೆಯದು ಎಂದು ಹೇಳಲು ಕೂಡ ಸಾಧ್ಯವಾಗದಂತಹ ಅತ್ಯಂತ ಕೆಟ್ಟ ವ್ಯವಸ್ಥೆಯನ್ನು ನಾಗರೀಕ ಸಮಾಜವೇ ಪೋಷಿಸಿಕೊಂಡು ಬಂದಿದೆ ಎಂದರು ತಪ್ಪಾಗಲಾರದು.
ಹೊಸನಗರ ತಾಲ್ಲೂಕಿನ ಕೋಡೂರಿನ ಸುಮಾ ಆರ್ (27) ಬಾಣಂತನಕ್ಕಾಗಿ ಅರಳಸುರಳಿಯ ತಾಯಿ ಮನೆಯಲ್ಲಿ ತನ್ನ ಗರ್ಭಾವಸ್ಥೆಯನ್ನು ಸೂಕ್ಷ್ಮವಾಗಿ ಜನತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಸಮುದಾಯ ಆರೋಗ್ಯ ಕಾರ್ಯಕರ್ತೆಯರು (ಆಶಾ) ತಪಾಸಣೆ ಮಾಡುವಂತೆ ಜೂನ್ 29ರಂದು 8 ತಿಂಗಳ ಗರ್ಭಾವಸ್ಥೆಯಲ್ಲಿದ್ದ ಅರಳಸುರಳಿಯ ಸುಮಾ ಅವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಜೊತೆಗೆ ಜಾಂಡೀಸ್ ಇದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಿ ಅಲ್ಲಿಂದ ತೆರಳಿದ್ದರು. ಮಾರನೆಯ ದಿನವೂ ಅರಳಸುರಳಿಯ ಅವರ ಮನೆಗೆ ತೆರಳಿದಾಗ ಆಕೆ ಆಸ್ಪತ್ರೆಗೆ ಹೋಗದ ವಿಷಯ ತಿಳಿದ ಆರೋಗ್ಯ ಸಿಬ್ಬಂದಿಗಳು ಆಕೆಯನ್ನು ಒತ್ತಾಯ ಪೂರ್ವಕಾಗಿ ಜೆ.ಸಿ. ಆಸ್ಪತ್ರೆಗೆ ಕರೆತಂದಿದ್ದರು.
ಜುಲೈ 1 ಮತ್ತು 2 ರಂದು ಆಕೆಗೆ ಕಾಮಾಲೆಗೆ ಚಿಕಿತ್ಸೆ ನೀಡಿದ್ದಾರೆ. 9 ತಿಂಗಳು ಪೂರ್ಣಗೊಳ್ಳದಿದ್ದ ಆಕೆಗೆ ಇಲ್ಲಿಯೇ ಚಿಕಿತ್ಸೆ ನೀಡಬಹುದು, ಜಾಂಡೀಸ್ ಕಡಿಮೆ ಮಾಡಬಹುದು ಎಂಬ ಆಶಾವಾದದಲ್ಲಿದ್ದ ವೈದ್ಯರಿಗೆ ಮಧ್ಯರಾತ್ರಿಯೇ ದಿಗಿಲು ಹತ್ತಿದೆ. ರಾತ್ರಿ ಯಾವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಬೇಕು ಎಂದು ತೋಚದಾಗಿದೆ. ಹೆರಿಗೆಯ ನೋವಿಗೆ ಒಳಗಾಗಿದ್ದ ಆಕೆ ಜುಲೈ 3 ರ ಬೆಳಗ್ಗಿನ ಜಾವ 3 ಗಂಟೆಗೆ ಗಂಡು ಮಗುವನ್ನು ಹಡೆದಿದ್ದಾಳೆ. ಹೊಟ್ಟೆಯಲ್ಲಿಯೇ ಮಗು ಮಲ ಮಾಡಿಕೊಂಡು ಅದನ್ನು ತಿಂದಿದೆ. ಇದರಿಂದ ಮಗುವಿನ ಮೂಗಿನ ಒಳಗೆ ಅದರ ಕಣಗಳು ಸೇರಿಕೊಂಡಿದ್ದು ಎನ್‌ಐಸಿಯು ಅಗತ್ಯವನ್ನು ಮನಗಂಡಿದ್ದಾರೆ. ಅಷ್ಟರಲ್ಲಾಗಲೇ ತಾಯಿ ಕೂಡ ರಕ್ತಸ್ರಾವಕ್ಕೆ ತುತ್ತಾಗಿರುವ ವಿಷಯ ಗಮನಕ್ಕೆ ಬಂದಿದೆ. ಅದನ್ನು ನಿಯಂತ್ರಿಸಲು ವೈದ್ಯರು ಹರ ಸಾಹಸ ಪಟ್ಟಿದ್ದಾರೆ.
ಹೆರಿಗೆಯಾದ ಸಂದರ್ಭ 8 ವಾರಗಳ ಕಾಲ ತಕ್ಕ ಮಟ್ಟಿಗೆ ವಿವಿಧ ಹಂತದಲ್ಲಿ ರಕ್ತಸ್ರಾವ ಆಗುವುದು ಸಹಜ. ಆರಂಭದಲ್ಲಿ ಗಾಢ ಕೆಂಪಿದ್ದರೆ ನಂತರ ಗುಲಾಬಿ, ಕಂದು, ಹಳದಿ ಬಣ್ಣ ಬದಲಾಗುತ್ತ ಬಿಳಿಯ ಬಣ್ಣಕ್ಕೆ ತಿರುಗಿ ಗರ್ಭಿಣಿಯ ಗಾಯ ಮಾಗುತ್ತದೆ. ರಕ್ತಸ್ರಾವಕ್ಕೆ ವಿವಿಧ ಕಾರಣಗಳು ಇವೆ. ಮಗುವಿನ ತಲೆ ದೊಡ್ಡದಾಗಿದ್ದಾಗ ಜನನಾಂಗದ ಮೇಲೆ ಆಗುವ ಒತ್ತಡದಿಂದ ಗಾಯಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ತಲೆಯ ಗಾತ್ರ 33 ರಿಂದ 35 ಸೆ.ಮೀ. ವರೆಗೆ ಇದ್ದಾಗಲೂ ಕೆಲವೊಮ್ಮೆ ಸಹಜ ಹೆರಿಗೆಯಾಗುವ ಸಾಧ್ಯತೆ ಇರುತ್ತದೆ. ಸಹಜ ಹೆರಿಗೆಯಾದ ನಂತರವೂ ಅರ್ಧ ಗಂಟೆಯವರೆಗೆ ಪ್ಲಸೆಂಟ (ಹೊಕ್ಕುಳ ಬಳ್ಳಿ) ಕಳಚಿಕೊಳ್ಳಲು ಸಮಯ ತೆಗೆದುಕೊಳ್ಳುವುದಿದೆ. ಸರಿಯಾಗಿ ಹೊಕ್ಕುಳ ಬಳ್ಳಿ ಅಥವಾ ಆಡು ಭಾಷೆಯಲ್ಲಿ ಕರೆಯುವ ಕಸ ಬಾರದಿದ್ದಾಗಲೂ ರಕ್ತಸ್ತ್ರಾವ ಉಂಟಾಗುವುದಿದೆ. ಅಂತಹ ಸಂದರ್ಭದಲ್ಲಿ ತಕ್ಷಣ ಹೆಚ್ಚಿನ ಚಿಕಿತ್ಸೆಗಳು ಅಗತ್ಯವಿರುತ್ತದೆ. ಇನ್ನು ಕೆಲವು ಸಂದರ್ಭದಲ್ಲಿ ತಲೆಸುತ್ತು, ಮೂರ್ಛೆಯಂತಹ ಕಠಿಣ ಕ್ಷಣಗಳನ್ನು ತಾಯಿ ಎದುರಿಸಬೇಕಾಗಬಹುದು.
ವೈದ್ಯರು ಹೇಳುವಂತೆ ಜಾಂಡೀಸ್‌ಗೆ ಒಳಗಾಗಿದ್ದ ಸುಮಾ ಅವರಿಗೆ ಹೆಲ್ಫ್ ಸಿಂಡ್ರೋಮ್ ಕಾಣಿಸಿಕೊಂಡಿದೆ. ತೀವ್ರ ರಕ್ತಸ್ರಾವದ ಜೊತೆಗೆ ಬಿಳಿ ರಕ್ತಕಣಗಳು ಕಡಿಮೆಯಾಗಿವೆ. ಇದೊಂದು ವಿಶೇಷ ಪ್ರಕರಣವೆಂದು ಭಾವಿಸಿದ ಜೆಸಿ ಆಸ್ಪತ್ರೆಯ ವೈದ್ಯರು ಬೆಳಿಗ್ಗೆ 6 ಗಂಟೆಯಾಗುತ್ತಿದ್ದಂತೆ ಫಿಸಿಷಿಯನ್ ಸಲಹೆ ಪಡೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಶಿವಮೊಗ್ಗಕ್ಕೆ ತೆರಳಿದ ಕುಟುಂಬಸ್ಥರು ಮೆಗ್ಗಾನ್ ಆಸ್ಪತ್ರೆಯಲ್ಲಿ ಎನ್‌ಐಸಿಯುಗೆ ದಾಖಲಿಸಿ ತಾಯಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು, ಆದರೆ ಮೆಗ್ಗಾನ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳ ವರ್ತನೆಯಿಂದ ರೋಸಿ ಹೋಗುವಂತಾಯಿತು. ರಕ್ತಸ್ರಾವದಂತಹ ಗಂಭೀರ ಪ್ರಕರಣವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅಲ್ಲಿನ ವೈದ್ಯರು ವಿಫಲರಾದರು.
ಇಂತಹ ಸಂದರ್ಭದಲ್ಲಿ ಅಲ್ಲಿಂದ ನೇರವಾಗಿ ಮಣಿಪಾಲ ಆಸ್ಪತ್ರೆಗೆ ತೆರಳುವಂತೆ ಅದ್ಯಾವ ಮಹಾನುಭಾವ ಸಲಹೆ ಇತ್ತನೋ ಅಲ್ಲಿಂದ ಸುಮಾ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತಾಯಿತು. ಮಣಿಪಾಲದ ಖಾಸಗಿ ಆಸ್ಪತ್ರೆಯಂತೆಯೆ ಶಿವಮೊಗ್ಗದಲ್ಲಿಯೂ ಅಂತಹ ಅನೇಕ ಆಸ್ಪತ್ರೆಗಳು ಇವೆ. ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ತೆಗೆದುಕೊಂಡ ಆತುರದ ನಿರ್ಧಾರದಿಂದ ಶಿವಮೊಗ್ಗದಿಂದ 140 ಕಿ.ಮೀ. ದೂರ ಇರುವ ಮಣಿಪಾಲ ಆಸ್ಪತ್ರೆಗೆ ತೆರಳುವಂತಾಯಿತು. ಇದು ನಿಜಕ್ಕೂ ಸುಮಾ ಪ್ರಾಣಕ್ಕೆ ಕಂಟಕದ ನಿರ್ಧಾರವಾಯಿತೇ? ಮಣಿಪಾಲ ಹೋಗುವಾಗಲೇ ಆಕೆಯ ದೇಹದಲ್ಲಿ ಪೂರ್ಣ ಪ್ರಮಾಣದ ರಕ್ತ ಸ್ರಾವವಾಗಿದೆ. ಮಣಿಪಾಲದಲ್ಲಿ ಹೆಚ್ಚುವರಿ ರಕ್ತ ಹಾಕುತ್ತಿದ್ದಂತೆ ಕಿಡ್ನಿ ಕೆಲಸ ಮಾಡುವುದು ನಿಲ್ಲಿಸುವಂತಹ ಅತ್ಯಂತ ಕಠಿಣ ಸಂದರ್ಭವನ್ನು ಎದುರಿಸಿ ಡಯಾಲಿಸಿಸ್‌ಗೆ ಒಳಗಾಗಬೇಕಾದ ಸಂದರ್ಭ ಎದುರಾಯಿತು. ಅಲ್ಲದೇ ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಿ ತಾಯಿ ಪ್ರಾಣ ಬಿಟ್ಟಿದ್ದಾಳೆ.
ನಮ್ಮ ಸುತ್ತಮುತ್ತಲಿನ ಎಲ್ಲಾ ಪಕ್ಷದ ನಾಯಕರುಗಳು 3 ಸಾವಿರ ಕೋಟಿ ಖರ್ಚಾಗುವ ಆಗುಂಬೆಯ ಸುರಂಗ, ನೂರಾರು ಕೋಟಿಯ ರಾಷ್ಟ್ರೀಯ ಹೆದ್ದಾರಿ, ಕೋಟ್ಯಾಂತರ ರೂಪಾಯಿಯ ವಿವಿಧ ಸಮುದಾಯ ಭವನ, ಅನಾವಶ್ಯಕ ಕಟ್ಟಡ, ಅಭಿವೃದ್ಧಿ ಕಾಮಗಾರಿಗಾಗಿ ಹೊಡೆದುಕೊಳ್ಳುವುದನ್ನು ಬಿಟ್ಟು ನೇರವಾಗಿ ದೂಷಣೆಗಳನ್ನು ಮಾಡುವುದರಲ್ಲಿಯೇ ಬಹುತೇಕ ಕಾಲ ಹರಣ ಮಾಡುತ್ತಾರೆ. ಇತ್ತೀಚೆಗೆ ತೀರ್ಥಹಳ್ಳಿಯಿಂದ ಮಾಳೂರು ವರೆಗೆ 600 ಕೋಟಿಯ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಅದರ ಕಾಲು ಭಾಗದ ಅಂದರೆ 100 ಕೋಟಿಯಷ್ಟಾದರು ತಾಲ್ಲೂಕಿನಲ್ಲಿ ಮಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ನೀಡದರೆ ನೂರಾರು ಪ್ರಾಣ ಉಳಿಯಲಿದೆ. ಜಿಲ್ಲಾ ಮಟ್ಟದಲ್ಲಿಯೇ ಒಂದು ಸುಸ್ಥಿತಿಯಲ್ಲಿ ಇರುವ ಆಸ್ಪತ್ರೆ ಕಟ್ಟಲು ಯಾವ ಪಕ್ಷದ ಮುಖಂಡರುಗಳು ಚರ್ಚಿಸುವುದಿಲ್ಲ. ತಾಲ್ಲೂಕು ಆಸ್ಪತ್ರೆಯ ಹಾಸಿಗೆ ಏರಿಸಲು ಹಣ ಇಲ್ಲದ ಸರ್ಕಾರಗಳಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆಯ ಬಗ್ಗೆಯಾದರು ಯೋಚಿಸವ ಮನಸ್ಥಿತಿ ಹುಟ್ಟುವುದಿಲ್ಲ ಯಾಕೆ. ಇಂತಹ ಕೆಟ್ಟು ಹೋದ ದಾರಿದ್ರ್ಯ ಎಲ್ಲಾ ಪಕ್ಷಗಳ ರಾಜಕೀಯ ವ್ಯವಸ್ಥೆಗೆ ಏನನ್ನಬೇಕು.
ಪ್ರತಿಭಟಿಸಲು ಹೋದರೆ ಅದನ್ನು ಹೇಗೆ ಹತ್ತಿಕ್ಕಬೇಕು ಎಂದು ಯೋಚಿಸುವ ಕೆಟ್ಟ ರಾಜಕೀಯ ವ್ಯವಸ್ಥೆಗೆ ದಿಕ್ಕಾರ ಕೂಗುವವರ್ಯಾರು. ಅದನ್ನು ಪ್ರಶ್ನಿಸುವ ಬದಲು ಪ್ರಚಾರದ ಸರಕಾಗಿ ನೋಡುವ ವ್ಯವಸ್ಥೆಯೂ ನಮ್ಮ ನಡುವೆ ಬೆಳೆದುಕೊಂಡಿರುವುದು ಅಸಹ್ಯವೆನಿಸದೆ ಇರದು. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿ ರೋಗಿಗಳು ಸಾಯುತ್ತಾರೆ. ಹಾವು ಕಡಿದರೆ ಡ್ರಿಪ್ ಹಾಕುವ ವೈದ್ಯಕೀಯ ವ್ಯವಸ್ಥೆಯ ಗಾಢ ನಿದ್ರೆ ಎಚ್ಚರಗೊಳ್ಳುವುದಾದರು ಹೇಗೆ. ಇಂದು ತಾಯಿ ಮೃತಪಟ್ಟಿರಬಹುದು. ನಾಳೆ ಇದೇ ಹಾದಿಗೆ ಮತ್ತೊಬ್ಬರು ಬಲಿಯಾಗಲ್ಲ ಎಂಬ ನಂಬಿಕೆ ಇದೆಯೇ? ಖಂಡಿತವಾಗಿಯೂ ಇಲ್ಲ.
ಸಹಜ ಹೆರಿಗೆಗೂ ದೇವರ ಅಪ್ಪಣೆ ಬೇಕೆ ?
ಗರ್ಭಾವಸ್ಥೆಯಲ್ಲಿ ತಾಯಿ ಮಗುವಿನ ಆರೋಗ್ಯ, ಕ್ಷೇಮ ಭಯಸುವ ನೆಮ್ಮದಿಯ ಭಾವನೆ ಕುಟುಂಬಸ್ಥರಲ್ಲಿ ಉಳಿದಿರಬೇಕು. ಆದರೆ ಆಕೆಗೆ ಸಿಸೇರಿಯನ್ (ಸಿ ಸೆಕ್ಷನ್) ಮಾಡಿಸಬೇಕೇ ಅಥವಾ ಸಹಜ ಹೆರಿಗೆ ಮಾಡಿದರೆ ಒಳ್ಳೆಯದೇ ಎಂಬ ಪ್ರಶ್ನೆಗೆ ದೇವರಾದರು ಉತ್ತರ ಕೊಟ್ಟಾನ. ತಾಯಿಯ ದೇಹ, ಮಗುವಿಗೆ ದೈಹಿಕ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಕೊನೆಯ ಕ್ಷಣದ ವರೆಗೆ ಕಾಯಬೇಕಾಗುತ್ತದೆ. ಸಹಜವೇ ಬೇಕೆಂಬ ಒತ್ತಡಗಳನ್ನು ಮಾಡುವ ಕುಟುಂಬಸ್ತರ ಹುಚ್ಚಾಟಕ್ಕೆ ಏನೆನ್ನಬೇಕೋ….!
ವಾಸ್ತವತೆಯಲ್ಲಿ ಬದುಕುವುದನ್ನು ಕಲಿಯದಿದ್ದರೆ ನಾಗರೀಕ ಸಮಾಜದ ಕಲ್ಪನೆ ವ್ಯರ್ಥ...
.jpg)