ಅತಿಯಾದ ನೀರಿನಿಂದಲೂ ಸಮಸ್ಯೆ ಉಲ್ಬಣ – ಡಾ.ಬಿ. ಗಂಗಾಧರ ನಾಯ್ಕ
ನದಿ,
ಕೆರೆ, ತೊರೆ ಮುಂತಾದ ನೀರಿನ ಮೂಲವಿರುವ ತೋಟಗಳಲ್ಲಿ ಹೆಚ್ಚಾಗಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ.
ತೇವಾಂಶ ಹೆಚ್ಚಿರುವುದು ಮತ್ತು ಮುಂಜಾನೆಯ ಇಬ್ಬನಿ ಸಹಿತ ವಾತಾವರಣದಲ್ಲಿ ಈ ರೋಗ ಅತಿ ಹೆಚ್ಚಿನ ವೇಗದಲ್ಲಿ
ಹರಡುತ್ತದೆ. ಇದನ್ನು ತಡೆಗಟ್ಟಲು ರೈತರು ಅಡಿಕೆ ಮರದ ಬುಡವನ್ನು ತಜ್ಞರು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ
ಬುಡವನ್ನು ಬಿಡಿಸಿ ಗೊಬ್ಬರವನ್ನು ನೀಡಬೇಕು. ನೀಡಿದ ಗೊಬ್ಬರ ವ್ಯರ್ಥವಾಗದಂತೆ ಹೆಚ್ಚೆಂದರೆ ಒಂದು
ಮರಕ್ಕೆ 25 ಲೀಟರ್ ನೀರು ಮಾತ್ರ ದೊರಕುವಂತೆ ಮಾಡಬೇಕು ಹಾಗಾದಾಗ ಗಿಡವು ಗೊಬ್ಬರವನ್ನು ಸರಿಯಾದ ಪ್ರಮಾಣದಲ್ಲಿ
ಪಡೆದುಕೊಂಡು ಚೆನ್ನಾಗಿ ಬೆಳೆಯುತ್ತದೆ ಮತ್ತು ರೋಗಗಳು ಕಡಿಮೆಯಾಗುತ್ತದೆ ಎಂದು ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ
ಸಸ್ಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ. ಗಂಗಾಧರ ನಾಯ್ಕ ಹೇಳಿದರು.
ಗುರುವಾರ ದೇವಂಗಿ
ಮಾನಪ್ಪ ಸಭಾ ಭವನದಲ್ಲಿ ತೋಟಕಾರಿಕೆ ಇಲಾಖೆ, ಕುಪ್ಪಳಿ ಕುವೆಂಪು ತೋಟಗಾರಿಕೆ ಉತ್ಪದನಾ ಕಂಪನಿ ಲಿಮಿಟೆಡ್
ಸಹಯೋಗದಲ್ಲಿ ಆಯೋಜಿಸಿದ್ದ “ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದ ನಿಯಂತ್ರಣ” ವಿಚಾರ ಸಂಕೀರ್ಣ ಉದ್ಘಾಟಿಸಿ
ಅವರು ಮಾತನಾಡಿ, ಎಲೆಚುಕ್ಕಿ ರೋಗ ನಿಸಂಶಯವಾಗಿ ವಾತಾವರಣದ ಏರುಪೇರಿನಿಂದ ವ್ಯಾಪಕವಾಗಿ ಹರಡಿದೆ. ವಾತಾವರಣದ
ನಿಯಂತ್ರಣ ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ವ್ಯಾಪಕ ಸಂಶೋಧನೆ ಬಳಿಕ ಇದರ ರೋಗ ಲಕ್ಷಣಗಳು ಮತ್ತು ಅದರ
ಬೆಳವಣಿಗೆ ಹಂತಗಳನ್ನು ಗುರುತಿಸಲಾಗಿದೆ. ವ್ಯರ್ಥವಾಗಿ ಉಳಿದ ಸಿಂಗಾರ, ಅಡಿಕೆ, ಹಾಳೆ, ಸೋಗೆ ಮುಂತಾದವನ್ನು
ಸುಡುವ ಮೂಲಕವೂ ರೋಗವನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು. ರಾಸಾಯನಿಕ ಗೊಬ್ಬರದ ಜೊತೆಗೆ ಸರಿಯಾದ
ಪ್ರಮಾಣದ ಕೊಟ್ಟಿಗೆ ಗೊಬ್ಬರ ನೀಡುವುದು ಮರದ ದೃಢತೆ ಹೆಚ್ಚಿಸಿ ರೋಗ ನಿರೋಧಕ ಶಕ್ತಿ ಬೆಳೆಸುತ್ತದೆ
ಎಂದು ಅವರು ವಿವರಿಸಿದರು.
ಹಿರಿಯ ತೋಟಗಾರಿಕೆ
ಸಹಾಯಕ ನಿರ್ದೇಶಕರು ಸೋಮಶೇಖರ್ ಕೆ. ಮಾತನಾಡಿ, ಶೇಕಡಾ 80 ರಷ್ಟು ಅಡಿಕೆ ಈ ಭಾಗದಲ್ಲಿ ಮುಖ್ಯ ಬೆಳೆಯಾಗಿದ್ದು
ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಗುಂಬೆ ಹೋಬಳಿಯಲ್ಲಿ ಶೇಕಡಾ 80, ಮತ್ತೂರು ಶೇಕಡಾ 60 ರಷ್ಟು
ಬೆಳೆಗೆ ಹಾನಿಯಾಗಿದೆ. ಎಲೆಚುಕ್ಕಿ ಹಾನಿಯ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಾಸಾಯನಿಕ
ಗೊಬ್ಬರದ ಜೊತೆ ಈ ಬಾರಿ ಜೈವಿಕ ಗೊಬ್ಬರ ವಿತರಿಸಿದ್ದೇವೆ ಎಂದು ತಿಳಿಸಿದರು.
ಶಾಸಕ ಆರಗ ಜ್ಞಾನೇಂದ್ರ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಮಟ್ಟದಲ್ಲಿ ಎಲೆಚುಕ್ಕಿ ರೋಗದ ಕುರಿತು ಸಂಶೋಧನೆಗೆ
ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದ್ದು ಸಕರಾತ್ಮಕ ಸ್ಪಂದನೆ ದೊರೆಯುತ್ತಿದೆ ಎಂದರು.
ದೇವಂಗಿ ಎಫ್‌ಪಿಓ
ಅಧ್ಯಕ್ಷ ಎಚ್.ಎಂ.ರವೀಂದ್ರ, ಶೇಡ್ಗಾರ್ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಗ್ರಾ.ಪಂ. ಸದಸ್ಯರಾದ
ಮಹೇಶ್, ಅಶೋಕ್, ಸರೋಜ, ಎಫ್‌ಪಿಓ ನಿರ್ದೇಶಕರಾದ ಉಮೇಶ್, ಪೂರ್ಣೇಶ್ ಎಚ್.ಎಂ, ಜಯರಾಂ ಕೆ.ಆರ್. ಪ್ರಮುಖರಾದ
ಡಿ.ಎಂ.ಮನುದೇವ್, ಸೀಬಿನಕೆರೆ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ರವಿರಾಜ್ ಶೆಟ್ಟಿ ಮತ್ತಿತರರು
ಇದ್ದರು.