ಕುಗ್ರಾಮದಲ್ಲಿ ಸಾಕಾರಾಗೊಂಡ ಸಹಕಾರಿ ತತ್ವ
1976ರಲ್ಲಿ ಆರಂಭವಾದ ತೀರ್ಥಹಳ್ಳಿಯ ನೊಣಬೂರು ಅಂಬುತೀರ್ಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 50ರ ಸಂಭ್ರಮದಲ್ಲಿದೆ. ಸುವರ್ಣ ಮಹೋತ್ಸವ ಪ್ರಯುಕ್ತ ಅರಳಸುರಳಿಯಲ್ಲಿ ವ್ಯಾಪಾರ ಶಾಖೆ ಸೆಪ್ಟೆಂಬರ್ 21ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಸಂಘದ ಆವರಣದಲ್ಲಿ ಸುವರ್ಣ ಸಹಕಾರ ಸೌಧ ಶಂಕುಸ್ಥಾಪನೆ ನಡೆಯಲಿದೆ.
15 ಗ್ರಾಮಗಳ ವ್ಯಾಪ್ತಿಯ ಹೊಂದಿದ್ದು ಒಟ್ಟು 2307 ಸದಸ್ಯರನ್ನು ಹೊಂದಿರುವ ಈ ಸಹಕಾರಿಯ ವಹಿವಾಟು ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು ವಸೂಲಾತಿ ಪ್ರಮಾಣ ಶೇಕಡಾ 99 ರಷ್ಟಿದೆ.
ವಿಶೇಷ ಎಂದರೆ ಇಲ್ಲಿ ಸುಸ್ತಿದಾರರು ಎಂಬುದು ಇಲ್ಲ. ಸಂಘದಲ್ಲಿ ವ್ಯವಹಾರ ಮಾಡುವ ಷೇರುದಾರ ಸದಸ್ಯರಿಗೆ ಪುಸ್ತಕವನ್ನು ವಿತರಿಸಿದ್ದು ಯಾವಾಗ ಬೇಕಾದರು ಸಂಘದಲ್ಲಿ ಕಡಿಮೆ ಬಡ್ಡಿದರದಲ್ಲಿ ವ್ಯವಹಾರ ಮಾಡಬಹುದು. ಕೃಷಿ ಉಪಕರಣಗಳನ್ನು ಖರೀದಿ ಮಾಡಿ ವಾರ್ಷಿಕವಾಗಿ ಒಮ್ಮೆ ವಹಿವಾಟಿನ ಮೊತ್ತ ತೀರಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ಸಾಲ ವಿತರಣೆ ಮಾಡುವಾಗ ಕಡ್ಡಾಯವಾಗಿ ನಿರ್ದೇಶಕರ ಸಭೆಯಲ್ಲಿ ಇಡುತ್ತಿದ್ದು ವಸೂಲಾತಿ ಜವಾಬ್ದಾರಿಯನ್ನು ಆಯಾ ನಿರ್ದೇಶಕರಿಗೆ ವಹಿಸಲಾಗುತ್ತದೆ ಸಾಲ ಪಡೆದವರು ಮತ್ತು ಕೊಡಿಸಿದವರು ಸಮಾನ ಜವಾಬ್ದಾರಿ ಹೊರುವ ಕಾರಣ ಇಲ್ಲಿ ತಗಾದೆ ಎನ್ನುವುದು ಇಲ್ಲ ವರ್ಷದ ಕೊನೆಗೆ ಬಡ್ಡಿ ಕಟ್ಟಿ ಬುಕ್ ಅಡ್ಜಸ್ಟ್ ಮಾಡುವ ಪ್ರವೃತ್ತಿ ಇಲ್ಲಿ ಇಲ್ಲ ಹಾಗಾಗಿ ಎಲ್ಲವೂ ಸುಸೂತ್ರ ಎನ್ನುತ್ತಾರೆ ಅಧ್ಯಕ್ಷ ನಾರಾಯಣರವರು .
ವಾರ್ಷಿಕ 110 ಕೋಟಿ ವ್ಯವಹಾರ ನಡೆಸಿ 73 ಲಕ್ಷ ನಿವ್ವಳ ಲಾಭಗಳಿಸಿದೆ. ಸಂಘದ ಕಾರ್ಯಶೈಲಿ ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಸಹಕಾರಿಗಳು ಆಗಮಿಸುತ್ತಾರೆ .ಹಾಗೆ ಸಹಕಾರಿ ಆಡಳಿತ ಮಂಡಳಿ ಕೂಡ ರಾಜ್ಯ ಹೊರಗಡೆ ರಾಜ್ಯ ಗಳ ಮಾದರಿ ಸಹಕಾರಿ ಸಂಸ್ಥೆ ಗಳಿಗೆ ಭೇಟಿ ನೀಡಿ ಒಳ್ಳೆಯ ಅಂಶಗಳನ್ನು ಅಳವಡಿಸಿ ಸಾಗುತ್ತಿದೆ ಎಂಬುದು ನಾರಾಯಣ ರವರ ಹೆಮ್ಮೆಯ ನುಡಿ.
ಮಾದರಿ ಸಹಕಾರಿ ಎಂಬ ಕಾರಣಕ್ಕೆ ನವದೆಹಲಿಯ ಗಣರಾಜೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ಪ್ರಸಕ್ತ ಸಾಲಿನಲ್ಲಿ ಲಭಿಸಿತ್ತು ನಾರಾಯಣ ವಿವರಿಸುತ್ತಾರೆ. ಇನ್ನೊಂದು ವಿಶೇಷ ಎಂದರೆ ಚುನಾವಣೆ ಅಗತ್ಯವಿದ್ದಾಗ ಮಾತ್ರ ಇಲ್ಲಿ ರಾಜಕಾರಣ ಬಳಿಕ ಎಲ್ಲರೂ ಒಂದೇ ಎಂಬ ಭಾವವಿದೆ ಕ್ರಿಯಾಶೀಲ ಹಾಗೂ ಸಾಮಾಜಿಕ ಕಾಳಜಿಯ ಉಪಾಧ್ಯಕ್ಷ ರಾಘವೇಂದ್ರ ಸೇರಿದಂತೆ ಬಹುತೇಕರು ಉತ್ಸಾಹಿ ಯುವಕರು.
ಪಡಿತರ ಮಾತ್ರವಲ್ಲದೆ ಇಲ್ಲಿ ಎಲ್ಲ ಬಗೆಯ ಕೃಷಿ ಹಾಗೂ ಗೃಹಉಪಯೋಗಿ ವಸ್ತುಗಳನ್ನು ಮಾಲ್ ರೀತಿಯಲ್ಲಿ ಆಕರ್ಷಕವಾಗಿ ಜೋಡಿಸಿ ಇಡಲಾಗಿದೆ ಇವೆಲ್ಲವನ್ನೂ ಅತೀ ಕಡಿಮೆ ಲಾಭಕ್ಕೆ ಮಾರಾಟ ಮಾಡಲಾಗುತ್ತಿದೆ. ರಸಗೊಬ್ಬರಹಾಗೂ ಸಾವಯವ ಗೊಬ್ಬರ ಮಾರಾಟಕ್ಕೆ ಕೂಡ ಪ್ರತ್ಯೇಕ ಗೋದಾಮುಗಳಿವೆ.
ನಿರ್ದೇಶಕರಾದ ಚಂದ್ರಶೇಖರ್ ಎಸ್.ಎಂ., ಬಿ.ಆರ್.ಚಂದ್ರಪ್ಪಗೌಡ, ಬಾಲಸುಬ್ರಹ್ಮಣ್ಯ ಎಚ್.ಎಸ್., ಲಿಂಗರಾಜು ಕೆ.ಸಿ., ಪ್ರಸನ್ನ ಎಚ್.ಟಿ., ರವಿ ಕೆ.ಟಿ., ವಿಜೇಂದ್ರ ಎಚ್.ವಿ., ಯೋಗೇಂದ್ರ ನಾಯ್ಕ, ವೇದಾವತಿ ಕೃಷ್ಣಮೂರ್ತಿ, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಆದರ್ಶ ಎ.ಎಂ. ನಿವೃತ್ತ ಸಿಇಓ ಎಂ.ದೇವರಾಜ್ ಸೇರಿದಂತೆ ಇಡೀ ತಂಡ ಸುವರ್ಣ ಸಂಭ್ರಮವನ್ನು ಸ್ಮರಣಿಯಗೊಳಿಸಲು ಹಗಲಿರುಳು ಶ್ರಮಿಸುತ್ತಿದೆ.
