ಫೆಬ್ರವರಿ 5 ಎಪಿಎಂಸಿ ಆವರಣದಲ್ಲಿ ಡಿಸಿಸಿ ಬ್ಯಾಂಕ್ ನೂತನ ಶಾಖೆ ಆರಂಭ

2027ಕ್ಕೆ 50 ಶಾಖೆಯ ಗುರಿ, ಹಳ್ಳಿಯಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ - ಡಾ.ಆರ್.ಎಂ.ಮಂಜುನಾಥ ಗೌಡ

ಡಿಸಿಸಿ ಬ್ಯಾಂಕ್ ತೀರ್ಥಹಳ್ಳಿಗೆ ಸದಾಕಾಲ ಎಲ್ಲಾ ರೀತಿಯ ನೆರವನ್ನು ನೀಡಿದೆ. 100 ಕೋಟಿಗೂ ಹೆಚ್ಚಿನ ಸಾಲವನ್ನು ಇಲ್ಲಿನ ರೈತರಿಗೆ ವಿತರಿಸಲಾಗಿದೆ. ಹೆಚ್ಚಿನ ಅನುಕೂಲಕ್ಕಾಗಿ ಫೆಬ್ರವರಿ 5 ರಂದು ಎಪಿಎಂಸಿ ಆವರಣದಲ್ಲಿ ನೂತನ ಶಾಖೆಯನ್ನು ಆರಂಭಗೊಳಿಸಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.

ಎಪಿಎಂಸಿ ಆವರಣದ ಸಹ್ಯಾದ್ರಿ ವಿವಿದೋದ್ದೇಶ ಅಡಿಕೆ ಬೆಳೆಗಾರರ ಸಹಕಾರ ಸಂಘದ ಬಸವಾನಿ ವಿಜಯದೇವ್ ಸಭಾಂಗಣದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಅಥವಾ ಅಫೆಕ್ಸ್ ಬ್ಯಾಂಕ್ ಎಂದಿಗೂ ಕೂಡ ಕೇಂದ್ರ ಅಥವಾ ರಾಜ್ಯ ಸರ್ಕಾರದ ನೆರವನ್ನು ಪಡೆದುಕೊಂಡಿಲ್ಲ. ಈ ವ್ಯವಸ್ಥೆ ಸಂಪೂರ್ಣ ಸ್ವಾಯತ್ತವಾಗಿಯೇ ಬೆಳೆದು ನಿಂತು ರೈತರ ಹಿತಾಸಕ್ತಿ ಕಾಪಾಡುತ್ತಿದೆ. ಆದರೆ ಕಳೆದೆರಡು ದಶಕಗಳಿಂದ ಕೇಂದ್ರ ಸರ್ಕಾರದ ಹಸ್ತಕ್ಷೇಪ ಹೆಚ್ಚುತ್ತಿದೆ ಎಂದರು.

ಉತ್ತಮ ಸೇವೆಗಾಗಿ ಕಟ್ಟೇಹಕ್ಕಲು, ಆರಗ, ದೇವಂಗಿ, ಮೇಗವರಳ್ಳಿಯಲ್ಲಿ ನೂತನ ಶಾಖೆಗಳನ್ನು ಮುಂದಿನ ದಿನಗಳಲ್ಲಿ ಆರಂಭಿಸಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ 2027ರ ಅಂತ್ಯಕ್ಕೆ 50 ಶಾಖೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 1.50 ಲಕ್ಷ ದಾಖಲೆ ಇರುವ ರೈತರಿದ್ದಾರೆ. ಈಗಾಗಲೇ 1.10 ಲಕ್ಷ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಮುಂದಿನ ವರ್ಷ ಶೇಕಡಾ 80 ರಷ್ಟು ರೈತರನ್ನು ಬ್ಯಾಂಕ್ ವಹಿವಾಟು ತಲುಪಲಿದೆ. ಎಟಿಎಂ ಬಳಕೆ ಕಡಿಮೆಯಾಗುತ್ತಿದ್ದು ಎನ್ಪಿಸಿಐ ಅನುಮತಿ ಪಡೆಯಲಾಗಿದ್ದು ಯುಪಿಐ ಸೇವೆ ಆರಂಭಿಸುತ್ತಿದ್ದೇವೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ತಾಲ್ಲೂಕಿಗೆ 500 ಕೋಟಿ ವಿವಿಧ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಬೆಳೆಸಾಲ, ಮದ್ಯಮ ಅವಧಿ, ಸ್ವಸಹಾಯ ಗುಂಪು, ಕೃಷಿಯೇತರ, ಮಾರ್ಕೆಟಿಂಗ್, ಜಮೀನು ಅಭಿವೃದ್ಧಿ ಸಾಲ, ಸಂಘ ಸಂಸ್ಥೆಗಳಿಗೆ ನೆರವು ನೀಡಲಾಗಿದೆ. ಶೇಕಡಾ 99 ರಷ್ಟು ವಸೂಲಾತಿಯಾಗುತ್ತಿದೆ. ಸರ್ಕಾರದ ಯಾವುದೇ ಬಂಡವಾಳ ಇಲ್ಲದಿದ್ದರು ಡಿಸಿಸಿ ಬ್ಯಾಂಕ್ ಅನ್ನು ಸದೃಢವಾಗಿ ಕಟ್ಟಲಾಗಿದೆ ಎಂದು ತಿಳಿಸಿದರು. 

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್. ಶೆಟ್ಟಿ ಇದ್ದರು.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post