ಮನುಷ್ಯರ ಜೀವ ಇಷ್ಟು ಅಗ್ಗವೇ....?
ಈ ನತದೃಷ್ಟರಿಗೆ
600 ರೂಪಾಯಿ ಭಾರಿ ದೊಡ್ಡ ಸಂಬಳ. ಅದಕ್ಕಾಗಿ ಊರಿನಲ್ಲಿ ಎರಡು ಪುಟ್ಟ ಹೆಣ್ಣುಮಕ್ಕಳನ್ನು ಬಿಟ್ಟು
ಪುಟ್ಟ ಕಂದನನ್ನು ಕಂಕುಳದಲ್ಲಿ ಹಾಕಿಕೊಂಡು ಇಲ್ಲಿಗೆ ಬಂದವರು. ದಿನವಿಡೀ ಮೈ ಮುರಿದು ದುಡಿದರೆ ಕ್ಷಣ
ಮಾತ್ರದಲ್ಲಿ ನಿದ್ದೆ ಬರುತ್ತದೆ. ಆ ನಿದ್ದೆಯೇ ಅವರನ್ನು ಜೀವಂತ ಸಮಾಧಿ ಮಾಡಿತು.
ಗಂಡ ಹೆಂಡತಿ ಕೆಲಸ
ಮಾಡಿದರೆ 1,200 ರೂಪಾಯಿ ಸಂಬಳ. ಗಂಗಾವತಿಯ ಬಯಲು ನಾಡಿನಲ್ಲಿ ಮಳೆ ಇಲ್ಲದೆ ಬೆಳೆ ತೆಗೆಯಲಾರದ ಸ್ಥಿತಿಯಲ್ಲಿ
ಸಾಲ ಕಟ್ಟುವ ಕನಸುಗಳನ್ನು ಕಟ್ಟಿಕೊಂಡು ಅದರಲ್ಲಿ ಅರ್ಧ ಉಳಿಸುವ ಕಷ್ಟದ ಹಾದಿ ಗುಡ್ಡದ ಅಡಿಯಲ್ಲಿ
ಕರಗಿ ಹೋಗಿದೆ. ನಮ್ಮ ಊರಿನಲ್ಲಿಯೇ ಇಷ್ಟು ಮಳೆ ಬಂದಿದ್ದರೆ ನಾವ್ಯಾಕೆ ಇಲ್ಲಿಗೆ ಬರುತ್ತೇವೆ ಎಂಬ
ಅಳುಕಿನ ನುಡಿಯಲ್ಲಿ ಮರುಗುವ ಜೀವಗಳು ಅಲ್ಲಿ ವಾಸವಾಗಿದ್ದವು. ವಾಸವೆಂದರೆ ದೊಡ್ಡ ವೈಭೋಗದ ಅರಮನೆಯಲ್ಲ
ನಾಲ್ಕೈದು ಅಡಿಗಳಷ್ಟು ಅಗಲದ ಪುಟ್ಟ ಗುಡಿಸಲೆಂದರೂ ತಪ್ಪೆ. ಅದಕ್ಕೆ ಶೆಡ್ಡುಗಳೆಂದು ಹೆಸರು.
ಮೂರು ದಿನಗಳ ಹಿಂದಷ್ಟೆ
ಉದ್ಯೋಗ ಅರಸಿ ಆಗಮಿಸಿದವರು ತೀರ್ಥಹಳ್ಳಿಯ ಗಾಂಧಿನಗರದಲ್ಲಿ ಬೆಳಗಿನ ಜಾವ ಜರುಗಿದ ಗುಡ್ಡದಡಿ ಗಾಢವಾಗಿ
ನಿದ್ದೆಯಲ್ಲಿದ್ದ ಕುಟುಂಬವನ್ನು ಹಾಗೆಯೇ ಚಿರನಿದ್ದೆಗೆ ಜರುಗುವಂತೆ ಮಾಡಿದೆ. 25 ಜನಗಳು ವಾಸವಾಗಿದ್ದ
ಅಲ್ಲಿ ಜಾತಿಗೆ ಕಟ್ಟುಪಾಡುಗಳು ಇರಲಿಲ್ಲ. ಊರಿಗೆ ಬೇಧಭಾವ ಇರಲಿಲ್ಲ. ರಾಜ್ಯದ ಯಾವ್ಯಾವುದೋ ಮೂಲೆಗಳಿಂದ
ಆಗಮಿಸಿದ್ದ ಉತ್ತರ ಮಂದಿ ಇದ್ದರು. ಏಕತೆಯ ಭಾರತಕ್ಕೆ ಸಾಕ್ಷಿಯಾಗಿತ್ತು. ಯಾರ ರಟ್ಟೆಯಲ್ಲಿ ಕಸುವು
ಇದೆಯೋ ಅವರು ಎಲ್ಲೆ ಮೀರು ದುಡಿಯಬಹುದಾಗಿತ್ತು. ಬೆಳಗಾಗಿದ್ದರೆ ಊರು ಸೇರುವ ಹಂಬಲದಲ್ಲಿದ್ದ ಕಾರ್ಮಿಕರೆಲ್ಲಾ
ಈಗ ಆದ ಘಟನೆಗೆ ಮರುಗುವಂತಾಗಿದೆ.
ಕೊಪ್ಪಳ ಜಿಲ್ಲೆ
ಗಂಗಾವತಿ ತಾಲ್ಲೂಕಿನ ಕಕ್ಕರಗೊಳ ಗ್ರಾಮದ ಮಲ್ಲಿಕಾರ್ಜುನ (30) ಅವರ ಪತ್ನಿ ನಾಗವೇಣಿ (27) ಹಾಗೂ
ಪುತ್ರ ಸಂತೋಷ್ (3) ನೋಡ ನೋಡುತ್ತಿದ್ದಂತೆಯೇ ಅಸುನೀಗಿದರು. ಅವರನ್ನು ರಕ್ಷಿಸಲು ಧಾವಿಸಿದ ಹನುಮಂತ
ಮಣ್ಣಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಗ್ನಿಶಾಮಕ ದಳ,
ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಬೆಳಗ್ಗಿನ 4 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆಯಲ್ಲಿ
ಭಾಗಿಯಾಗಿದ್ದರು.
ದುರಂತದ ಬಳಿಕ ಅನಿಸಿದ್ದು
ಸಮುದಾಯ ಭವನ, ಗೋದಾಮುಗಳ ಹೆಸರಲ್ಲಿ ಎಷ್ಟೋ ಕಟ್ಟಡಗಳು ಬಳಕೆ ಆಗದೆ ಹಾಳು ಸುರಿಯುತ್ತಿವೆ. ಅದನ್ನಾದರೂ
ಇಂತಹ ನತದೃಷ್ಟರಿಗೆ ತಾತ್ಕಾಲಿಕವಾಗಿ ನೀಡಿದರೆ ನಾಗರೀಕ ಸಮಾಜ ಅವರನ್ನು ಮನುಷ್ಯರು ಎಂದು ಕರೆದ ಹಾಗೆ
ಆಗುತ್ತಿತ್ತು. ಈಗ ಅವರ ಜೀವ ಹೋಗಿದೆ ಆದರೆ ಪಶುಗಳ ರೀತಿ ಅಮಾನುಷವಾಗಿ ಸತ್ತಿರುವುದು ಜಿಲ್ಲಾ, ತಾಲೂಕು,
ಆಡಳಿತದ ಮಾನವೇ ಹೋಗುವಂತೆ ಮಾಡಿದೆ ಎಂದರೆ ತಪ್ಪಲ್ಲ. ಈ ನತದೃಷ್ಟರ ಆತ್ಮಕ್ಕೆ ಚಿರಶಾಂತಿ ದೊರಕಲಿ.
