ತೀರ್ಥಹಳ್ಳಿಯ ವೆಂಕಟೇಶ ಚಿತ್ರ ಮಂದಿರದಲ್ಲಿ ನಾಳೆ ಕಲ್ಟ್
'ಬನಾರಸ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟ ಝದ್ ಖಾನ್ ನಟನೆಯ ಹೊಸ ಸಿನಿಮಾ 'ಕಲ್ಟ್' ರಿಲೀಸ್ ಆಗಲಿದ್ದು ಶುಕ್ರವಾರ ತೀರ್ಥಹಳ್ಳಿಯ ವೆಂಕಟೇಶ ಚಿತ್ರ ಮಂದಿರದಲ್ಲಿ ಸಿನಿಮಾ ಪ್ರದರ್ಶನ ಆರಂಭಗೊಳ್ಳಲಿದೆ. ಎಲ್ಲಾ ಸಿನಿ ಪ್ರಿಯರು ಸಿನಿಮಾ ವೀಕ್ಷಿಸುವಂತೆ ಯುವ ಕಾಂಗ್ರೆಸ್ ಮುಖಂಡ ಆಸಿಫ್ ಸೀಬಿನಕೆರೆ ಕೋರಿದ್ದಾರೆ.
'ಉಪಾಧ್ಯಕ್ಷ' ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಈ ಸಿನಿಮಾ 2026ರ ಜ.23ರಂದು ತೆರೆಕಾಣಲಿದೆ. ಇತ್ತೀಚೆಗೆ ಕಿತ್ತೂರು ಉತ್ಸವದಲ್ಲಿ ಚಿತ್ರದ ಎರಡನೇ ಹಾಡು 'ಬ್ಲಡಿ ಲವ್' ಬಿಡುಗಡೆಯಾಯಿತು. ಚಿತ್ರದಲ್ಲಿ ನಾಯಕಿಯರಾಗಿ ರಚಿತಾ ರಾಮ್ ಮತ್ತು ಮಲೈಕಾ ಟಿ.ವಸುಪಾಲ್ ಅಭಿನಯಿಸಿದ್ದಾರೆ. 'ಬ್ಲಡಿ ಲವ್' ಹಾಡಿಗೆ ನಿರ್ದೇಶಕ ಅನಿಲ್ ಕುಮಾರ್ ಅವರೇ ಸಾಹಿತ್ಯ ಬರೆದಿದ್ದು, ಚಂದನ್ ಶೆಟ್ಟಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಈಗಾಗಲೇ ಚಿತ್ರದ 'ಅಯ್ಯೋ ಶಿವನೇ' ಎಂಬ ಹಾಡು ಬಿಡುಗಡೆಯಾಗಿದ್ದು, ಇದರಲ್ಲಿ ಝದ್ ಹಾಗೂ ಮಲೈಕಾ ಹೆಜ್ಜೆ ಹಾಕಿದ್ದಾರೆ. ಪ್ರೀತಿ, ಆ್ಯಕ್ಷನ್, ಭಾವನಾತ್ಮಕ ಅಂಶಗಳುಳ್ಳ ಕಥೆಯೊಂದಿಗೆ ಅನಿಲ್ ಈ ಬಾರಿ ಬರಲಿದ್ದು, ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಅರ್ಪಿಸುತ್ತಿದೆ. ಜೆ.ಎಸ್ ವಾಲಿ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ.