ರೈತ ಹೋರಾಟಗಾರ ಹಾರೋಗದ್ದೆ ಸುಂದರೇಶ ನಿಧನ

ಹಾಡುಗಳ ಮೂಲಕ ಚಳವಳಿಗೆ ಸ್ಪೂರ್ತಿ ತುಂಬಿದ್ದರು

ರೈತ ಚಳವಳಿ ಉತ್ತುಂಗ ತಲುಪಿದ್ದ 80ರ ದಶಕದಲ್ಲಿ ತಮ್ಮ ತುಂಬು ಕಂಠದ ಮೂಲಕ ರೈತ ಗೀತೆಗಳನ್ನು ಸಾರ್ವಜನಿಕರು ಹೋರಾಟಗಾರರು ರೋಮಾಂಚನಗೊಳ್ಳುವಂತೆ ಹಾಡುತ್ತಿದ್ದ ಹಾರೋಗದ್ದೆ ಸುಂದರೇಶ್‌ ನಿಧನರಾಗಿದ್ದಾರೆ. ರೈತ ಚಳವಳಿಯಲ್ಲಿ ತಮಟೆ ವಾದನ, ಹಾಡು ಇತ್ಯಾದಿಗಳು ಹೋರಾಟದ ಒಂದು ಭಾಗವಾಗಿದ್ದವು. ಆ ಸಂದರ್ಭದಲ್ಲಿ ಹಿ.ಶಿ.ರಾಮಚಂದ್ರೇಗೌಡ ಚಳವಳಿಗಾಗಿ ರಚಿಸಿದ್ದ ರೈತ ಗೀತೆಗಳು ಹಿರಿಯ ಜಾನಪದ ಗಾಯಕ ಕೆ.ಯುವರಾಜ್‌ ಅವರ ಸಂಗೀತ ಮತ್ತು ರಾಗ ಸಂಯೋಜನೆಯಲ್ಲಿ ಹೊಂಬಾಳೆ ಎನ್ನುವ ಹೆಸರಿನಲ್ಲಿ ಕ್ಯಾಸೆಟ್‌ಗಳ ಮೂಲಕ ಜನಪ್ರಿಯಗೊಂಡಿದ್ದವು.

ಅದರಲ್ಲಿ ಎಲ್ಲವನೆಲ್ಲವನೆ… ನಮ್ಮ ಭತ್ತ ರಾಗಿಯನ್ನು ತಿಂದ ಕತ್ತೆ ಸೂಳೆಮಗ…. ಎಲ್ಲವನೆಲ್ಲವನೆ… ತಕ್ಷಣಕ್ಕೆ ಅದರ ರಾಗ ಸಂಯೋಜನೆ ಮತ್ತು ಎತ್ತರದ ಸ್ಥಾಯಿಯಿಂದ ಕೇಳುಗರನ್ನು ಆಕರ್ಷಿಸುತ್ತಿತ್ತು. ಯುವರಾಜ್‌ ಹಾಡಿದ್ದ ಆ ಹಾಡನ್ನು ಸ್ಥಳೀಯವಾಗಿ ಮತ್ತು ಚಳವಳಿಗಳ ಸಂದರ್ಭದಲ್ಲಿ ಸುಂದರೇಶ್‌ ಅದೇ ರೀತಿ ಹಾಡುವ ಮೂಲಕ ಆಕರ್ಷಿಸುತ್ತಿದ್ದರು. ಅದೇ ಧ್ವನಿ ಸುರಳಿಯಲ್ಲಿ ಏನು ಮಾಡಿ ಏನು ಬಂತಣ್ಣ ಓ ರೈತಣ್ಣ ಯಾತಕ್ಕಾಗಿ ಈ ಬದುಕು ಕೇಳಣ್ಣ, ಬಾ ತಂಗಿ ಬಾರವ್ವ, ಬಾರೆ ರೈತನ ಮಗಳೆ ಕೂಡ ಜನಪ್ರಿಯ ಗೀತೆಗಳಾಗಿದ್ದವು.

ರೈತ ಚಳವಳಿ ಎನ್.ಡಿ.ಸುಂದರೇಶ್‌, ಪ್ರೊ.ನಂಜುಡಸ್ವಾಮಿ ಸೇರಿದಂತೆ ಒಂದು ತಲೆಮಾರಿನ ದೈತ್ಯ ಶಕ್ತಿಗಳು ಹಿನ್ನೆಲೆಗೆ ಸರಿದಂತೆ ಆ ಚಳವಳಿಗಳ ಮೂಲಕ ಗುರುತಿಸಿಕೊಂಡವರು ಕೂಡ ನೇಪಥ್ಯಕ್ಕೆ ಸರಿದಿದ್ದರು. ಸುಂದರೇಶ್‌ ತಮ್ಮ ಹಾಡುಗಳ ಮೂಲಕವೇ ಹೋರಾಟದ ಸಂಗಾತಿಗಳ ಭಾವಕೋಶದಲ್ಲಿ ಜೀವಂತವಾಗಿದ್ದವರು. ಕಣ್ಮರೆಯಾಗುವ ಹೊತ್ತಿಗೆ ಸುಮಾರು 12 ವರ್ಷಗಳ ಕಾಲ ಸಹ್ಯಾದ್ರಿ ಶಾಲೆಯ ಬಸ್‌ ಚಾಲಕನಾಗಿ ಅವರು ಕಾರ್ಯ ನಿರ್ವಹಿಸುತ್ತಾ ಮಕ್ಕಳ ಕಲರವದಲ್ಲಿ ಖುಷಿ ಕಾಣುತ್ತಿದ್ದರು. ಮೂಲತಃ ಹಾರೋಗದ್ದೆಯವರಾದರು ಅವರು ಪ್ರಸಿದ್ಧರಾಗಿದ್ದು ಬೆಜ್ಜವಳ್ಳಿ, ಮಂಡಗದ್ದೆ, ಕನ್ನಂಗಿ ಭಾಗಗಳಲ್ಲಿ. ಇತ್ತೀಚೆಗೆ ಸೀಬಿನಕೆರೆಯಲ್ಲಿ ವಾಸವಾಗಿದ್ದರು ಮತ್ತು ಸಾಲೂರಿನಲ್ಲಿ ಹೊಸ ಮನೆ ಕಟ್ಟಿಸಿದ್ದರು. ಅವರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post