ಪಟ್ಟಣ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಹಿಂದಿನ ವಹಿವಾಟು

15+8=23 ಲಕ್ಷ ! - 23-15=8 ಲಕ್ಷ !!?
ದಯೆ ತೋರದ ಸಿಸಿಟಿವಿ ಫೂಟೇಜ್…!

ಕೊನೆ ಬಾಲಿನ ವರೆಗೂ ರೋಚಕತೆ ಕಾಯ್ದುಕೊಳ್ಳುವ ಟಿ 20 ಕ್ರಿಕೆಟ್‌ ಪಂದ್ಯದಂತೆ ಪಟ್ಟಣದ ಜನತೆಯನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಪ್ರಹಸನ ಮುಗಿದು ಎರಡು ದಿನಗಳಾಗಿದೆ. ಆದರೆ ಮಳೆ ನಿಂತರು ಹನಿ ನಿಂತಿಲ್ಲ ಎಂಬಂತೆ ಅದರೊಳಗಿನ ಹಾವು ಏಣಿ ಆಟ ಎರಡೂ ಕಡೆಯ ಅತೃಪ್ತರು ಮತ್ತು ಬ್ಯಾಟ್ಸ್‌ಮನ್‌ ಗಳು ಹಿಟ್‌ ವಿಕೇಟ್‌ ಆಗಲು ಕಾತುರರಾಗಿ ನಿಂತಿದ್ದು ಒಂದೊಂದಾಗಿ ಬೆಳಕಿಗೆ ಬರತೊಡಗಿದೆ. ಒಂದು ಕಡೆ ಕಾಂಗ್ರೆಸ್‌ ತನ್ನದೇ ಪಕ್ಷದ ಸದಸ್ಯರಿಗೆ ದುಡ್ಡ ಕೊಟ್ಟು ಉಳಿಸಿಕೊಳ್ಳಬೇಕಾದ ದೈನೇಸಿ ಅವಸ್ಥೆ ತಲುಪಿದ್ದನ್ನು ಅಗ್ರ ನಾಯಕ ಕಿಮ್ಮನೆ ಅವರೇ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ವ್ಯಾಕುಲಭರಿತರಾಗಿ ಹೇಳಿಕೊಂಡಿದ್ದಾರೆ. ಮತ್ತೆ ಸದ್ಯಕ್ಕೆ ಆ ಮೊತ್ತ ಬರೀ ಎಂಟೇ ಲಕ್ಷ ಎಂದು ಸ್ಪಷ್ಟಪಡಿಸಿದ್ದಾರೆ?

ಆ ಎಂಟು ಲಕ್ಷ ಸಂದಾಯ ಆದ ಬಳಿಕವೂ ಅತೃಪ್ತರ ಆತ್ಮ ಸಂತೃಪ್ತಗೊಳ್ಳದೆ ಜೈಯು ಅಧ್ಯಕ್ಷರ ಖುರ್ಚಿಯಲ್ಲಿ ವಿರಾಜಮಾನರಾಗದೆ ದತ್ತು ಶೆಟ್ಟಿ ಪಟ್ಟಾಭಿಷೇಕ ಆಗಿದ್ದು ಹೇಗೆಂಬುದು ಈಗಲೂ ಸ್ವತಃ ಕಿಮ್ಮನೆ ಸೇರಿದಂತೆ ಎಲ್ಲರಲ್ಲೂ ಗೊಂದಲ ಹುಟ್ಟಿಕೊಂಡಿದೆ. ಇದರ ನಡುವೆ ಮತ್ತೊಂದು ಸ್ವಾರಸ್ಯಕರ ಎಪಿಸೋಡು ಕೂಡ ಇದರೊಳಗೆ ಸೇರಿಕೊಂಡಿದೆ ಎಂಬ ಮಾಹಿತಿ ಬಂದಿದೆ.

ಕಾಂಗ್ರೆಸ್‌ನಲ್ಲಿ ಭಿನ್ನಮತ ಜೋರಾಗಿ ಡಬಲ್‌ ಇಂಜಿನ್‌ಗಳಲ್ಲಿ ಯಾವ ಇಂಜಿನ್‌ ಜೋರಾಗಿ ಎಳೆಯುತ್ತದೋ ಆ ಕಡೆಯವರದ್ದೇ ಅಧ್ಯಕ್ಷತೆ ಎಂಬುದು ಬಿಜೆಪಿಗೆ ಗೊತ್ತಾದಾಗ ಬಿಜೆಪಿ ಇಂಜಿನ್‌ ಕೂಡ ಇದ್ದಕ್ಕಿದ್ದಂತೆ ಚಾಲೂವಾಗಿತಂತೆ. ಅಲ್ಲಿ ಎಂಟಾದರೆ ನಮ್ಮದು 15 ಎಂದು ಬಿಜೆಪಿಯ ಎಂಟೆದೆಯ ಶೂರರೊಬ್ಬರು ಅಣ್ಣ ನಾನು 15 ಲಕ್ಷ ಖಾಲಿ ಮಾಡಲು ತಯಾರಿರುವೆ ಎಂದಾಗ ಅಣ್ಣ ಅವರ ಧೈರ್ಯಕ್ಕೆ ಭೇಶ್‌ ಎಂದು ಗ್ರೀನ್‌ ಸಿಗ್ನಲ್‌ ಕೊಟ್ಟರಂತೆ. ಆದರೆ ಕಲಾವಿದರೊಬ್ಬರು ಸೇರಿ ಮತ್ತೊಬ್ಬ ಹಿರಿಯ ಸದಸ್ಯ ವಿರೋಧಿಸಿದ್ದರಂತೆ. ಆದರೆ ಅಣ್ಣ ಮುಂದು ಹೋಗು ಎಂದು ಹೇಳಿದಾಗ ತಮ್ಮ ಮುಂದೆ ಹೋಗದೆ ಇರಲಿಕ್ಕೆ ಆಗುತ್ತದೆಯೇ?

ಆ ಪ್ರಕಾರ ರೀಯಲ್‌ ಎಸ್ಟೇಟ್‌ ಚತುರರೊಬ್ಬರು ಪೂರಾ 15 ಲಕ್ಷದ ಇಡಿಗಂಟನ್ನು ಹಿಡಿದುಕೊಂಡು ಹೋಗಿ ಕೊಟ್ಟಿದ್ದು ಮಾತ್ರ ಯಾರು ಕಾಂಗ್ರೆಸ್‌ ಪಾಳಯದಲ್ಲಿ ಗೊಂದಲ ಎಬ್ಬಿಸಿದ್ದರೋ ಅವರ ಕೈಗೆ! ಒಪ್ಪಂದ ಏನೆಂದರೆ ಜೈಯು ಪ್ರಹಸನದಲ್ಲಿ ಬಿಜೆಪಿ ಪರ ಸಾಕಾಗುವಷ್ಟು ಹುರಿಯಾಳುಗಳನ್ನು ಕಾಂಗ್ರೆಸ್‌ನಿಂದ ಒಡೆದು ತಂದರೆ 15 ಲಕ್ಷ ಸಂದಾಯ ಇಲ್ಲದಿದ್ದರೆ ದುಡ್ಡು ವಾಪಾಸ್‌.

ಇದಕ್ಕೆ ಎರಡೂ ಪಾರ್ಟಿಗಳು ಪರಸ್ಪರ ಓದಿಕೊಂಡು ಒಪ್ಪಿ ತಿಳಿದುಕೊಂಡು ಮತ್ತೆ ಮತ್ತೆ ಖಚಿತಪಡಿಸಿಕೊಂಡು ಆದಮೇಲೆ 15 ಲಕ್ಷ ಒಂದೇ ಕಡೆ ಜಮಾವಣೆಗೊಂಡಿದೆ. ಅಲ್ಲಿಗೆ ಒಟ್ಟಾರೆ ಬಜೆಟ್‌ 23 ಲಕ್ಷ ತಲುಪಿದೆ. ಆದರೆ ಕಡೇ ಕ್ಷಣದಲ್ಲಿ ಈ 15 ಲಕ್ಷದ ಕಡೆ ಕಾಂಗ್ರೆಸ್‌ ಪಾಳಯದಿಂದ ಬರುವವರು ಅರೆ ಮನಸ್ಸು ಮಾಡಿ ಕೊನೆ ಕ್ಷಣದ ಗೂಗ್ಲಿ, ಯಾರ್ಕರ್‌ಗಳೆಲ್ಲಾ ಜೈಯು ಮೇಲೆ ಪ್ರಯೋಗಗೊಂಡು ಅಂತಿಮವಾಗಿ ದತ್ತು ಶೆಟ್ಟರ ಸಹೋದರನ ಬ್ಯಾಟಿಂಗ್‌ ಜೋರಾದ ಮೇಲೆ ದತ್ತು ಶೆಟ್ಟಿ ಕೊನೆ ಬಾಲಿನ ಸಿಕ್ಸ್‌ ಎತ್ತಿ ಜಯಗಳಿಸಿದಂತೆ ಅಧ್ಯಕ್ಷರ ಗಾದಿಗೆ ಏರಿದ್ದಾರೆ. ಇದಾಗುತ್ತಿದಂತೆ ಮುಂದಿನ ನಿಮಿಷದಲ್ಲಿ 15 ಲಕ್ಷ ಡಿಪಾಸಿಟ್ ಇಟ್ಟವರು ಕಂಗಾಲಾಗಿ ದುಡ್ಡು ತಿಮ್ಮಪ್ಪನ ಪಾದ ತಲುಪಿದರೆ ಗತಿಯೇನೆಂದು ಚಡಪಡಿಸಿದ್ದಾರೆ. ಆದರೆ ಹಾಗೇನು ಆಗಲಿಲ್ಲ.

ತೀರ್ಥಹಳ್ಳಿಯಲ್ಲಿ ನೀಯತ್ತು, ಕೊಟ್ಟ ಮಾತು ಶ್ರೀರಾಮೇಶ್ವರ ಕೃಪೆಯಿಂದ ಎಷ್ಟು ಗಟ್ಟಿಯಿದೆ ಎಂದರೆ 15 ಲಕ್ಷ ಸಂದಾಯ ಮಾಡಿದವರಿಗೆ ಜೈಯುವಿನ ಅಧ್ಯಕ್ಷ ಹುದ್ದೆ ತಪ್ಪುತ್ತಿದಂತೆ ಅಷ್ಟೂ ಹಣ ತಿರುಪತಿ ತಿಮ್ಮಪ್ಪನ ಹುಂಡಿಯಿಂದ ವಾಪಾಸ್ಸು ಬಂದ ಪವಾಡ ನಡೆದೇ ಬಿಟ್ಟಿದೆ!

ಇದಕ್ಕಿಂತಲೂ ಗಮ್ಮತ್ತು ಎಂದರೆ ಪ್ರಹಸನದ ಹಿಂದಿನ ರಾತ್ರಿ ಕಾಂಗ್ರೆಸ್‌ನ ಇಬ್ಬರು ಸೀದಾ ಸೀದಾ ಮಾಜಿ ಗೃಹಸಚಿವರು, ಮುಂದೆಯೂ ಹಲವಾರು ಬಾರಿ ತೀರ್ಥಹಳ್ಳಿಯ ಜನಪ್ರತಿನಿಧಿಯೂ ಆಗುವ ಬಯಕೆ ಹೊಂದಿರುವ ಆರಗರ ಮನೆಗೆ ತೆರಳಿ ಸಾಷ್ಟಾಂಗ ನಮಸ್ಕಾರ ಮಾಡಿ ತಮ್ಮ ಕರುಣೆ ಇರಲಿ ಎಂದಿದ್ದಾರೆ. ಅವರು ಕರುಣೆ ತೋರಿಸಿದರೋ ಬಿಟ್ಟರೋ ಗೊತ್ತಾಗಲಿಲ್ಲ. ಆದರೆ ಇವರು ಸಾಷ್ಟಾಂಗ ಹೊಡೆಯುವಾಗ ಅದನ್ನು ಯಥಾವತ್ತು ಚಿತ್ರಿಸಿಕೊಂಡ ಸಿಸಿಟಿವಿ ಮಾತ್ರ ಆಫ್‌ ಆಗಿ ಕರುಣೆಯನ್ನು ತೋರಿಸಿಲ್ಲ. ಬಳಿಕ ಆ ಫೂಟೇಜು ನೂತನ ಅಧ್ಯಕ್ಷರ ಬಳಗದ ಕೈ ಸಿಕ್ಕಿ ನಮ್ಮವರೇ ನಮ್ಮನ್ನು ಅಧ್ಯಕ್ಷರಾಗದಂತೆ ತಡೆಯಲು ಹೋಗಿದ್ದರು. ಇದೆಂತಹ ಅನ್ಯಾಯ ಎಂದು ಬುಸುಗುಡುತ್ತಿರುವ ಸುದ್ದಿ ರಂಜನೀಯವಾಗಿ ಹಬ್ಬುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post