ವ್ಯವಸ್ಥೆಯ ಲೋಪ ಬಯಲು ಮಾಡುವ "ಕೊಡಲ್ಲ ಅಂದ್ರ ಕೊಡಲ್ಲ"....

ಭಾರತದ ಹೆಸರಾಂತ ಚಲನಚಿತ್ರ ನಟ ಹಾಗೂ ಮೂಲತಃ ರಂಗ ಕಲಾವಿದರಾಗಿರುವ ಪ್ರಕಾಶ್ ರೈ ನೇತೃತ್ವದ ನಿರ್ದಿಗಂತ ರಂಗ ತಂಡ ಅಭಿನಯಿಸಿದ ಕೊಡಲ್ಲ ಅಂದ್ರ ಕೊಡಲ್ಲ ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಶಕೀಲ್ ಅಹಮದ್ ಅವರ ನಿರ್ದೇಶನದ ಇದು ಡಾ.ರಿಯಾ ಫೋ ಅವರ ಕಾಂಟ್ ಫೆ.. ವೊಂಟ್ ಫೆ ನಾಟಕದ ಕನ್ನಡ ರೂಪಾಂತರ.

ತಾಂತ್ರಿಕವಾಗಿ ಅಷ್ಟೇನೂ ಗುಣಮಟ್ಟ ಇರದ ಈ ನಾಟಕ ಬಿಗಿಯಾದ ನಿರ್ದೇಶನ ಮತ್ತು ಹೊಟ್ಟೆ ಹಸಿವಿನ ಕರಾಳತೆ, ದಿನ ಕಳೆದಂತೆ ಇದನ್ನು ಸಮಸ್ಯೆಯೇ ಅಲ್ಲ ಎಂಬಂತೆ ಅಸೂಕ್ಷ್ಮವಾಗಿ ವರ್ತಿಸುವ ಜಡ್ಡುಗಟ್ಟಿದ ವ್ಯವಸ್ಥೆಯನ್ನು ಚುರುಕಾದ ಸಂಭಾಷಣೆ ಹಾಗೂ ಪಾತ್ರಧಾರಿಗಳ ಅತ್ಯುತ್ತಮ ಮಟ್ಟದ ಅಭಿನಯದಿಂದ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಸಫಲವಾಯಿತು.

ದಿನಗೂಲಿ ಕೆಲಸ ಮಾಡುವ ಇಬ್ಬರು ಗೆಳತಿಯರು ಕೆಲಸ ಕಳೆದುಕೊಂಡು ಹಸಿವಿನ ಕಾರಣದಿಂದ ಮಾಲ್ ಒಂದರಲ್ಲಿ ಒಂದಿಷ್ಟು ದಿನಸಿ ವಸ್ತುಗಳನ್ನು ಕದ್ದು ಬೇರೆ ದಾರಿ ಕಾಣದೆ ಅದನ್ನು ಹೊಟ್ಟೆಯಲ್ಲಿಟ್ಟುಕೊಂಡು ಬಸುರಿ ಹೆಂಗಸರ ತರ ನಟಿಸಿ ಕೊನೆಗೆ ಅವರ ಗಂಡಂದಿರು ಮತ್ತು ಪೊಲೀಸ್ ಅದನ್ನು ನಿಜ ಎಂದು ನಂಬಿದಾಗ ಅದರಿಂದ ಹೊರ ಬರಲು ಆಗದೆ ಪಡಿ ಪಾಟಲು ಪಡುವುದು ಒಂದು ಕಡೆಯಾದರೆ ಮತ್ತು ಆ ನಿಸ್ಸಹಾಯಕ ಸ್ಥಿತಿಯಲ್ಲೇ ಅನುಕೂಲಸ್ತ ಜಗತ್ತಿನ ಬೌದ್ಧಿಕ ಕೊಳಕನ್ನು ನಗಿಸುತ್ತಲೇ ಬಯಲು ಮಾಡುತ್ತ ಮನಕಲುಕಲು ಈ ನಾಟಕ ಯಶಸ್ವಿಯಾಗಿದೆ.

ತಾಂತ್ರಿಕ ಅಂಶಗಳಾದ ಬೆಳಕು ನೆರಳಿನಾಟ, ಸಂಗೀತ, ಮೌನಕ್ಕೆ ಇಲ್ಲಿ ಆಸ್ಪದ ಇಲ್ಲ. ಮಾತು, ಮಾತು ಮತ್ತು ಮಾತೇ ನಾಟಕದ ಜೀವಾಳ. ಎಲ್ಲ ಕಲಾವಿದರು ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ ಅದರಲ್ಲೂ ದಕ್ಷಿಣಕನ್ನಡ ಕನ್ನಡ ಭಾಷೆ ಮಾತನಾಡುವ ಗಂಡ ಹೆಂಡತಿಯಾಗಿ ಚರಿತ ಸುವರ್ಣ ಹಾಗೂ ಚರಿತ ಶಾರದಾ ಅಭಿನಯ ಅದ್ಭುತ. ಹೊಸ ಕಲಾವಿದರು ಕಲಿಯಲು, ಹಾಗೂ ಹಳಬರು ತಮ್ಮ ಅಭಿನಯ ಅಪ್ಡೇಟ್ ಮಾಡಿಕೊಳ್ಳಲು ಪ್ರೇರಣೆ ನೀಡುವಂತ ಅಭಿನಯ ಇಬ್ಬರಿಂದಲೂ ಮೂಡಿ ಬಂದಿದೆ. 

ಒಂದು ದೃಶ್ಯದಲ್ಲಿ ಬಹುತೇಕ ಮೂರು ನಿಮಿಷಕ್ಕಿಂತಲೂ ಹೆಚ್ಚು ಕಾಲ ಅತ್ಯಂತ ವೇಗವಾಗಿ ಎಲ್ಲೂ ತಡವರಿಸದೆ ಚರಿತ ಸುವರ್ಣ ಸಂಭಾಷಣೆ ಹೇಳುವ ರೀತಿ ಆತನಿಗೆ ಉಜ್ವಲ ಭವಿಷ್ಯ ಇದೆ ಎಂಬುದನ್ನು ಸೂಚಿಸುವಂತಿತ್ತು. ಆತನಿಗೆ ಸರಿ ಸಾಟಿಯಾಗಿ ಚರಿತ ಶಾರದಾ ಅಭಿನಯ ಕೂಡ ಅತ್ಯುತ್ತಮ. ಸಲ್ಮಾ ದಂಡಿನ್ ರಂತ ಪ್ರತಿಭಾವಂತ ಅನುಭವಿ ಕಲಾವಿದೆ ಎದುರು ಆಕೆಯ ಒಟ್ಟಾರೆ ಅಭಿನಯ ಅತ್ಯಂತ ನೈಜ ಹಾಗೂ ಚೇತೋಹಾರಿ.

ಇನ್ನೇನು ಏಕತಾನತೆ ಅನಿಸುವ ಹೊತ್ತಿಗೆ ಪ್ರವೇಶ ಮಾಡುವ ಮಂಜುನಾಥ್ ಮಂಡಲಗೇರಿ ಬಳಿಕ ಪ್ರೇಕ್ಷಕರಲ್ಲಿ ನಗೆಯಲೆ ಎಬ್ಬಿಸುತ್ತಾರೆ. ದಿನೇಶ್ ನಾಯಕ ಮೂರು ಶೇಡ್ ಇರುವ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕ ಜವಾರಿ ಭಾಷೆಗಳು ಅವುಗಳ ಉಚ್ಚಾರದ ಶೈಲಿಯಿಂದಲೇ ಅಸಾಮಾನ್ಯ ಎನಿಸಿ ಮನೋರಂಜನೆ ನೀಡುತ್ತವೆ. 

ಈ ನಾಟಕದಲ್ಲಿ ಆ ಎರಡು  ಭಾಷೆ ಮಾತನಾಡುವ ಜೋಡಿಗಳನ್ನು ಉದ್ದೇಶ ಪೂರ್ವಕವಾಗಿ ಅಳವಡಿಸಿ ಕೊಂಡಿರುವುದು ನಿರ್ದೇಶಕರ ನಿರೂಪಣ ತಂತ್ರಕ್ಕೆ ಸತ್ವ ತುಂಬಿದೆ. ಬೆಳಕು, ಸಂಗೀತ ಆಸೀಫ್ ಅವರದು. ಅವರಿಗೆ ತೀರ್ಥಹಳ್ಳಿಯ ಶಿವಕುಮಾರ್ ಸಹಕರಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಈ ನಾಟಕ ಪ್ರದರ್ಶನ ಗೊಳ್ಳಲು ಮುತುವರ್ಜಿ ವಹಿಸಿದ್ದು ಹಿರಿಯ ರಂಗ ನಟ ಮತ್ತು ನಿರ್ದೇಶಕ ಸುರಾನಿ ಮ್ಯಾತ್ಯು ಮತ್ತು ಉತ್ತಮ ಸಂಘಟನೆ ಗಾರ ಕಡಿದಾಳು ದಯಾನಂದ್ ಅವರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post